- ಸಿದ್ದರಾಮಯ್ಯನವರಿಗೆ ರೈತರ ಬೇಡಿಕೆ ಈಡೇಡಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ
- ರಾಜ್ಯದಲ್ಲಿ ರೈತ ವಿರೋಧಿಯಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು
ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಭೂ ಸುಧಾರಣೆ ಕಾಯ್ದೆಯ ಮಹಾತ್ವಾಕಾಂಕ್ಷೆಯ ಉದ್ದೇಶ ‘ಉಳುವವನೇ ಭೂ ಒಡೆಯ’ ಎಂಬುದಕ್ಕೆ ಕೊಡಲಿ ಪೆಟ್ಟು ನೀಡಿ ‘ಉಳ್ಳವನೇ ಭೂ ಒಡೆಯ’ ಆಗಲೂ ಅವಕಾಶ ಕಲ್ಪಿಸಿ, ಕಾಯ್ದೆಯ ಮೂಲ ಉದ್ದೇಶವನ್ನೇ ನಾಶ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆರೋಪಿಸಿದೆ.
ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಯಚೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಾಜ್ಯದಲ್ಲಿ ರೈತ ವಿರೋಧಿಯಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರ ಬೇಡಿಕೆ ಈಡೇಡಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.
ರೈತರ ಬೇಡಿಕೆಗಳೇನು?
- ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿ ರೈತರಿಗಾಗುತ್ತಿರುವ ವಂಚನೆ, ಮೋಸ ತಪ್ಪಿಸಬೇಕು ಹಾಗೂ ಎಪಿಎಂಸಿ ಮಾರುಕಟ್ಟೆಯನ್ನು ರೈತ ಸ್ನೇಹಿಯಾಗಿ ರೂಪಿಸಬೇಕು.
- ಭೂ ಸುಧಾರಣಾ ಕಾಯ್ದೆಯನ್ನು ಉಳುವ ರೈತನ ಕೇಂದ್ರಿತ ದೃಷ್ಠಿಯಿಂದ ಮತ್ತಷ್ಟು ಬಲಪಡಿಸಬೇಕು ಹಾಗೂ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು.
- ಕುಮಾರಸ್ವಾಮಿ ನೇತೃತ್ವ ಸರ್ಕಾರದ 2012ರ ಭೂ ಸ್ವಾಧೀನಕಾಯ್ದೆಗೆ ರೂಪಿಸಿರುವ ನಿಯಮಗಳು ರೈತ ವಿರೋಧಿಯಾಗಿವೆ. ಇದನ್ನು ಮಾರ್ಪಾಡು ಮಾಡಿ ರೈತ ಪರ ನಿಯಮಗಳನ್ನು ರೂಪಿಸಬೇಕು.
- ಹಿಂದಿನ ಸರ್ಕಾರ ಭೂ ಮಂಜೂರಾತಿ ಕಾಯ್ದೆಯ ನಿಯಮಗಳನ್ನು ಮೀರಿ ಸರ್ಕಾರಿ ಭೂಮಿಯನ್ನು ಸಂಘ ಪರಿಹಾರಕ್ಕೆ ಮಂಜೂರು ಮಾಡಿದೆ. ಅವುಗಳನ್ನು ರದ್ದುಪಡಿಸಿ, ಸರ್ಕಾರ ವಶಕ್ಕೆ ಪಡೆಯಬೇಕು.
- ಕೃಷಿ ಬೆಲೆ ಆಯೋಗದ ಅಧ್ಯಕ್ಷರ ನೇಮಕ ಮಾಡಬೇಕು ಹಾಗೂ ಸ್ವಾಮಿನಾಥನ್ ಸಮಿತಿ ವರದಿ ಆಧರಿಸಿ ರೈತರ ಹಕ್ಕಾಗಿರುವ ಕೃಷಿ ಬೆಂಬಲ ಬೆಲೆಯನ್ನು ಅನುಷ್ಠಾನಗೊಳಿಸಬೇಕು. ಇದಕ್ಕೆ ಪೂರಕವಾಗಿ ಕನಿಷ್ಠ 5 ಸಾವಿರ ಕೋಟಿ ಬೆಲೆ ಆವರ್ತನಿಧಿ ಸ್ಥಾಪಿಸಿ ಉತ್ಪನ್ನಗಳ ಧಾರಣೆ ಸ್ಥರೀಕರಣಕ್ಕೆ ಸಮರ್ಥ ಖರೀದಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
- ಕೆಇಆರ್‌ಸಿ ಅವೈಜ್ಞಾನಿಕ ವಿದ್ಯುತ್ ದರವನ್ನು ಹೆಚ್ಚಳ ಮಾಡಿದ್ದು, ಅದನ್ನು ತಡೆಹಿಡಿದು ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮಾರಾಟವಾಗದಂತೆ ಹಾಗೂ ರೈತರಿಗೆ ಮೋಸದಿಂದ ಹಣ ವಸೂಲಿ ಮಾಡದಂತೆ ಕ್ರಮಕ್ಕೆ ಮುಂದಾಗಬೇಕು.
- ಟಿಎಲ್‌ಬಿಸಿ ವ್ಯಾಪ್ತಿಯಲ್ಲಿ ಅನಧಿಕೃತ ನೀರಾವರಿ ತೆರವುಗೊಳಿಸಿ ಕೊನೆ ಭಾಗದ ರೈತರಿಗೆ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸೇರಿದಂತೆ ಇನ್ನೂ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮರ್ಯಾದಾಗೇಡು ಹತ್ಯೆ | ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಕುಟುಂಬ
ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ರಾಜ್ಯ ಉಪಾಧ್ಯಕ್ಷ ದೊಡ್ಡಬಸನಗೌಡ ಬಲ್ಲಟಗಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.