ಮೆಕ್ಸಿಕೊ ಮತ್ತು ಕೆನಡಾ ಮೇಲೆ ವಿಧಿಸಿರುವ ಶೇಕಡ 25ರಷ್ಟು ಆಮದು ಸುಂಕವನ್ನು ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ; ಮಂಗಳವಾರದಿಂದಲೇ ಇದು ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಈ ಘೋಷಣೆ ವ್ಯಾಪಾರ ಸಮರದ ಭೀತಿಯನ್ನು ಸೃಷ್ಟಿಸಿದ್ದು, ಅಮೆರಿಕದ ಜತೆ ಪ್ರಮುಖ ವ್ಯಾಪಾರ ಪಾಲುದಾರರು ಮಾಡಿಕೊಳ್ಳಲು ಉದ್ದೇಶಿಸಿರುವ ಕೊನೆಕ್ಷಣದ ಒಪ್ಪಂದಗಳ ನಿರೀಕ್ಷೆ ನುಚ್ಚುನೂರಾಗಿದೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಕೆನಡಾ ಹಾಗೂ ಮೆಕ್ಸಿಕೋದಿಂದ ಆಮದಾಗುವ ವಸ್ತುಗಳ ಮೇಲೆ ವಿಧಿಸಿರುವ ಶೇಕಡ 25ರಷ್ಟು ಸುಂಕ ನಾಳೆಯಿಂದ ಜಾರಿಗೆ ಬರಲಿದೆ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರ ಹೆಸರಲ್ಲಿ ಬಿಜೆಪಿ ಅಧಿಕ ಪ್ರಸಂಗ
ಉಭಯ ದೇಶಗಳು ವಿನಾಯಿತಿ ನೀಡುವ ಆಶ್ವಾಸನೆ ನೀಡಿದ ಬಳಿಕ ಒಂದು ತಿಂಗಳ ಅವಧಿಗೆ ಉದ್ದೇಶಿತ ಸುಂಕವನ್ನು ಸ್ಥಗಿತಗೊಳಿಸಲು ಈ ಮೊದಲು ಟ್ರಂಪ್ ಒಪ್ಪಿಗೆ ನೀಡಿದ್ದರು. ಆದರೆ ಮುಂದೆ ಯಾವುದೇ ವಿನಾಯಿತಿ ಇಲ್ಲ ಎಂದು ಟ್ರಂಪ್ ಹೇಳಿದರು.
ಅಂತೆಯೇ ಚೀನಾಗೆ ಈ ಮೊದಲು ವಿಧಿಸಿದ್ದ ಶೇಕಡ 10ರ ಸುಂಕವನ್ನು ಶೇಕಡ 20ಕ್ಕೆ ಹೆಚ್ಚಿಸುವ ನಿರ್ಣಯಕ್ಕೆ ಕೂಡಾ ಟ್ರಂಪ್ ಸಹಿ ಮಾಡಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ.
ಮಂಗಳವಾರದಿಂದಲೇ ಈ ನಿರ್ಧಾರ ಕೂಡಾ ಜಾರಿಗೆ ಬರುವ ನಿರೀಕ್ಷೆ ಇದೆ. ಅಕ್ರಮ ಮಾದಕ ವಸ್ತು ವ್ಯಾಪಾರವನ್ನು ತಡೆಯಲು ಚೀನಾ ವಿಫಲವಾಗಿರುವ ಹಿನ್ನೆಲೆಯಲ್ಲಿ ಸುಂಕ ಏರಿಕೆಗೆ ನಿರ್ಧರಿಸಲಾಗಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
