ಮಹಾರಾಷ್ಟ್ರ ಸರ್ಕಾರದ ಸಚಿವ, ಎನ್‌ಸಿಪಿ (ಅಜಿತ್ ಬಣ) ನಾಯಕ ಧನಂಜಯ್ ಮುಂಡೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರಪಂಚ್ ಸಂತೋಷ್ ದೇಶ್‌ಮುಖ್ ಕೊಲೆ ಪ್ರಕರಣದಲ್ಲಿ ತಮ್ಮ ಆಪ್ತನ ಹೆಸರು ಕೇಳಿಬಂದ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ಪ್ರಕರಣದ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ‘ಕೊಲೆ ಪ್ರಕರಣದ ವಿಚಾರವಾಗಿ ಧನಂಜಯ್ ಮುಂಡೆ ರಾಜೀನಾಮೆ ನೀಡಬೇಕಾಗಬಹುದು’ ಎಂದು ಹೇಳಿದ್ದರು. ಇದೀಗ, ಧನಂಜಯ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ತಮ್ಮ ಆಪ್ತ ಸಹಾಯಕ ಪ್ರಶಾಂತ್ ಜೋಶಿ ಮೂಲಕ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸಕ್ಕೆ ತಲುಪಿಸಿದ್ದಾರೆ.
ಬೀಡ್ ಜಿಲ್ಲೆಯ ಗ್ರಾಮ ಪಂಚಾಯತಿವೊಂದರ ಸರಪಂಚ್ ಸಂತೋಷ್ ದೇಶ್‌ಮುಖ್ ಕೊಲೆ ಪ್ರಕರಣದಲ್ಲಿ ಧನಂಜಯ್ ಮುಂಡೆ ಅವರ ಆಪ್ತ ವಾಲ್ಮೀಕ್ ಕರಡ್ ಮತ್ತು ಇತರ ಆರು ಮಂದಿಯನ್ನು ಪೊಲೀಸರು ಜನವರಿಯಲ್ಲಿ ಬಂಧಿಸಿದ್ದರು. ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ-1999 (ಎಂಸಿಒಸಿಎ) ಅಡಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಫೆಬ್ರವರಿ 27ರಂದು 1,200 ಪುಟಗಳ ಜಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಬಳಿಕ, ಧನಂಜಯ್ ರಾಜೀನಾಮೆ ಬಗ್ಗೆ ಚರ್ಚೆಗಳು ಆರಂಭವಾಗಿದ್ದರು.
ಧನಂಜಯ್ ಮುಂಡೆ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೀಡ್ ಜಿಲ್ಲೆಯ ಪಾರ್ಲಿ ಕ್ಷೇತ್ರದಲ್ಲಿ ಎನ್‌ಸಿಪಿ (ಅಜಿತ್ ಬಣ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು. ಅಲ್ಲದೆ, ಬೀಡ್ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದರು.