ಔರಾದ್-ಕಮಲನಗರ ಅವಳಿ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 147 ಅತಿಥಿ ಶಿಕ್ಷಕರಿಗೆ 3 ತಿಂಗಳಿನಿಂದ ಗೌರವ ಧನ ಜಮೆಯಾಗಿಲ್ಲ. ಸರ್ಕಾರದ ಬಿಡಿಗಾಸು ಗೌರವಧನ ನಂಬಿಕೊಂಡು ಜೀವನ ನಡೆಸುತ್ತಿರುವ ಅತಿಥಿ ಶಿಕ್ಷಕರು ಸಾಲದಲ್ಲೇ ದಿನದೂಡುತ್ತಿದ್ದಾರೆ.
ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಿಗೆ 632 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ₹10 ಸಾವಿರ ಗೌರವಧನ ನಿಗದಿಪಡಿಸಲಾಗಿದೆ.
ʼಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಗೌರವಯುತವಾಗಿ ಬದುಕಲು ನಿಗದಿತ ಸಮಯಕ್ಕೆ ಸರ್ಕಾರ ಸಂಭಾವನೆ ಹಣ ಪಾವತಿಸಬೇಕು. ಆದರೆ, ತಿಂಗಳುಗಟ್ಟಲೆ ಕಾಯಬೇಕಾಗಿದೆ. ಅಲ್ಲಿಯವರೆಗೆ ನಮ್ಮ ಪಾಡೇನುʼ ಎಂದು ಅತಿಥಿ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ʼಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ತಾಲ್ಲೂಕಿನ ಅತಿಥಿ ಶಿಕ್ಷಕರಿಗೆ ಈಗಾಗಲೇ ಜನವರಿ ತನಕ ಗೌರವಧನ ಪಾವತಿಸಲಾಗಿದೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿಷ್ಕಾಳಜಿಯಿಂದ ಔರಾದ್ ತಾಲ್ಲೂಕಿನ ಪ್ರಾಥಮಿಕ ಅತಿಥಿ ಶಿಕ್ಷಕರಿಗೆ 2024ನೇ ಸಾಲಿನ ಅಕ್ಟೊಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ವೇತನ ನೀಡದೆ ಬಾಕಿ ಉಳಿಸಿಕೊಂಡಿದೆʼ ಎಂದು ಅತಿಥಿ ಶಿಕ್ಷಕರು ಗೋಳು ತೋಡಿಕೊಂಡಿದ್ದಾರೆ.
ಈ ಹಿಂದೆ ಕೂಡ ಜೂನ್‌ನಿಂದ ಅಕ್ಟೋಬರ್‌ವರೆಗೆ ಅತಿಥಿ ಶಿಕ್ಷಕರಿಗೆ ಗೌರವಧನ ಸಿಗದೇ ಇರುವ ಕಾರಣಕ್ಕೆ ವರ್ಷಕ್ಕೊಮ್ಮೆ ಬರುವ ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರರ ಬಳಿ ಸಾಲ ಪಡೆದು ನಿರಾಸೆಯಿಂದ ಹಬ್ಬ ಆಚರಿಸುವ ಪರಿಸ್ಥಿತಿ ಬಂದಿತ್ತು. ತದನಂತರ ವೇತನ ಜಮೆಯಾಗಿತ್ತು. ಈಗ ಮತ್ತೆ ಅಕ್ಟೊಬರ್‌ದಿಂದ ಡಿಸೆಂಬರ್‌ವರೆಗೆ ಮೂರು ತಿಂಗಳ ಗೌರವಧನ ಜಮೆ ಬಿಡುಗಡೆ ಮಾಡದೆ ಜನವರಿ ತಿಂಗಳ ಗೌರವಧನ ಮಾತ್ರ ಪಾವತಿಸಿದ್ದಾರೆ.
ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಪಾವತಿಸಲು ಸರ್ಕಾರ ಡಿಸೆಂಬರ್ ತಿಂಗಳಲ್ಲಿ ಅನುದಾನ ಬಿಡುಗಡೆಗೊಳಿಸಿ ಜನವರಿ 27ರ ಒಳಗಾಗಿ ಬಿಲ್ ಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ, ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಅಧಿಕಾರಿಗಳು ಬಿಲ್ ಪಾವತಿಸದ ಕಾರಣಕ್ಕೆ ವಾಪಸ್ ಹೋಗಿದೆ, ಹೀಗಾಗಿ ಶಿಕ್ಷಕರಿಗೆ ಗೌರವಧನ ಬಿಡುಗಡೆಗೆ ವಿಳಂಬ ಆಗಿರುವುದು ಈಗ ಬಹಿರಂಗವಾಗಿದೆ.
ಈ ಕುರಿತು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘವು ಬೀದರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ʼ2024-25ನೇ ಸಾಲಿನಲ್ಲಿ ಅತಿಥಿ ಶಿಕ್ಷಕರ ಗೌರವಧನ ಪಾವತಿಗಾಗಿ ಬಂದ ಅನುದಾನ ಔರಾದ್‌ನ ಶಿಕ್ಷಣ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಪಾವತಿಸದ ಕಾರಣಕ್ಕೆ ವಾಪಸ್ ಹೋಗಿದೆ. ಇದರಿಂದ ಅತಿಥಿ ಶಿಕ್ಷಕರಿಗೆ ಮೂರು ತಿಂಗಳ ಗೌರವಧನ ಪಾವತಿಯಾಗಿಲ್ಲ. ಕೂಡಲೇ ಅತಿಥಿ ಶಿಕ್ಷಕರ ಬಾಕಿ ಗೌರವಧನ ಪಾವತಿಸಬೇಕು. ಇಲ್ಲದಿದ್ದರೆ ಬಿಇಒ ಕಚೇರಿ ಎದುರುಗಡೆ ಧರಣಿ ನಡೆಸಲಾಗುವುದುʼ ಎಂದು ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ದ್ವಿತೀಯ ಪಿಯು ಪರೀಕ್ಷೆ : 794 ವಿದ್ಯಾರ್ಥಿಗಳು ಗೈರು
ಈ ವಿಚಾರವಾಗಿ ಔರಾದ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ ಅವರು ʼಈದಿನ.ಕಾಮ್ ಜೊತೆ ಮಾತನಾಡಿ, ʼಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ವಾಪಸ್ ಹೋಗಿತ್ತು. ಇದೀಗ ಮತ್ತೆ ಬಂದಿದೆ. ನಾನು ತಿಂಗಳ ಹಿಂದೆ ಹೊಸದಾಗಿ ಬಂದಿರುವೆ. ಒಂದೆರಡು ದಿನಗಳಲ್ಲಿ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆ ಮಾಡಲಾಗುವುದುʼ ಎಂದು ತಿಳಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.