ಖಬರಸ್ಥಾನದಲ್ಲಿ ಶವ ಹೂಳಲು ಅವಕಾಶ ಮಾಡಿ ಕೊಡದೆ, ಮುಸ್ಲಿಂ ಯುವಕರ ಮೇಲೆ ಹಲ್ಲೆ ಮಾಡಿರುವ ಘಟನೆ ಮಾಸುವ ಮುನ್ನವೇ ಕಿಡಿಗೇಡಿಗಳು ಈದ್ಗಾ ಪ್ರಾರ್ಥನಾ ಮಂದಿರದ ಗೋಡೆಯ ಮೇಲೆ ಅಶ್ಲೀಲ ಚಿತ್ರ ಬಿಡಿಸುವ ಮೂಲಕ ಮತ್ತೊಮ್ಮೆ ಕೋಮುಸಾಮರಸ್ಯ ಕದಡಲು ಸಂಚು ನಡೆಸಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಕಳೆದ ಫೆಬ್ರವರಿ ತಿಂಗಳು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆದಿತ್ತು. ಕನಕಗಿರಿ ಪಟ್ಟಣ ಎಲ್ಲ ಸಮುದಾಯಗಳು ಒಂದಾಗಿ ಕೋಮುಸಾಮರಸ್ಯ, ಸಹಬಾಳ್ವೆಯಿಂದ ಜೀವನ ನಡೆಸುತ್ತಿವೆ. ಅದರೆ, ಎರಡು ಕೋಮುಗಳ ಮಧ್ಯೆ ಕಂದಕ ಸೃಷ್ಟಿಸಿ ಪಟ್ಟಣದ ಸಹಬಾಳ್ವೆ, ಸಾಮರಸ್ಯಕ್ಕೆ ಬೆಂಕಿಹಚ್ಚಿದ ಕೆಲಸ ಮತ್ತೆ ನಡೆಯುತ್ತಿರುವುದು ಕೇಳಿಬರುತ್ತಿದೆ.
ಮುಸಲ್ಮಾನ ಬಾಂಧವರ ರಂಝಾನ್ ಹಬ್ಬ ಆರಂಭವಾಗಿರುವ ಬೆನ್ನಲ್ಲೇ ಕಿಡಿಗೇಡಿಗಳು ಈದ್ಗಾ ಪ್ರಾರ್ಥನಾ ಕಟ್ಟಡದ ಮೇಲೆ ಅಶ್ಲೀಲ ಚಿತ್ರ ಬಿಡಿಸಿ ಕೋಮುಸಾಮರಸ್ಯ ಕದಡಲು ಮುಂದಾಗಿದ್ದು, ತಿಳಿದುಬಂದಿದೆ.
ಗೋಡೆ ಮೇಲೆ ಅಶ್ಲೀಲ ಚಿತ್ರ ನೋಡಿದ ಇಸ್ಲಾಂ ಕಮಿಟಿಯ ಸದಸ್ಯ ರಿಯಾಜ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಯಾರೋ ಕಿಡಿಗೇಡಿಗಳು ಮಾರ್ಚ್ 2ರಂದು ನಮ್ಮ ಈದ್ಗಾ ಪ್ರಾರ್ಥನಾ ಕಟ್ಟಡದ ಗೋಡೆ ಮೇಲೆ ಅಸಹ್ಯವಾದ ಚಿತ್ರ ಬಿಡಿಸಿದ್ದಾರೆ. ವಿಷಯ ತಿಳಿದು ಪೋಲೀಸರು ಬಂದು ಚಿತ್ರ ಅಳಿಸಲು ಸೂಚಿಸಿ, ಅದನ್ನು ಅಳಿಸಿ ಹಾಕಿದ್ದಾರೆ” ಎಂದು ಕರೆಯ ಮೂಲಕ ವಿಷಯ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಹಿಳಾ ದಿನಾಚರಣೆ; ಮಾರ್ಚ್ 6ರಂದು ಮಹಿಳಾ ಸಾಂಸ್ಕೃತಿಕ ಹಬ್ಬ-2025
“ಘಟನೆ ವಿರುದ್ಧ ಪಿರ್ಯಾದಿ ಕೊಡಲು ಇಸ್ಲಾಮ್ ಕಮಿಟಿ ಸದಸ್ಯರು ಹೋದಾಗ ಸಿಬ್ಬಂದಿ, ‘ಅಧಿಕಾರಿಗಳು ಜಾತ್ರೆಗೆ ಬಂದೋಬಸ್ತ್‌ಗೆ ಹೋಗಿದ್ದಾರೆ’ ಎಂದು ಸಬೂಬು ಹೇಳಿದ್ದಾರೆ. ಎರಡನೇ ದಿನ ಮಾರ್ಚ್ 3ರಂದು ಪಿರ್ಯಾದಿ ತೆಗೆದುಕೊಂಡಿದ್ದಾರೆ” ಎಂದು ಅಲ್ತಾಫ್ ಈ ದಿನ.ಕಾಮ್‌ಗೆ ಹೇಳಿದರು.
ಪೋಲೀಸರು ಆರೋಪಿಗಳನ್ನು ಪತ್ತೆಹಚ್ಚಿ ನಾವು ಸೂಕ್ತಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.