ದೆಹಲಿಯ ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ’ಯು (ಏಮ್ಸ್) ಕೈಗವಸು (ಗ್ಲೌವ್ಸ್) ಖರೀದಿಯಲ್ಲಿ ಅಕ್ರಮ, ಲೈಂಗಿಕ ಕಿರುಕುಳದ ಆರೋಪಿ ಅದಿಕಾರಿಗೆ ಬಡ್ತಿ ಹಾಗೂ ಆರೋಗ್ಯ ಸಚಿವಾಲಯದ ಸೂಚನೆಗಳ ನಿರ್ಲಕ್ಷ್ಯ ಸೇರಿದಂತೆ ನಾನಾ ಆರೋಪಗಳಿಂದ ಸುದ್ದಿಯಲ್ಲಿದೆ. ಏಮ್ಸ್ ವಿರುದ್ಧದ ಆರೋಪಗಳು ಭಾರೀ ಚರ್ಚೆ ಹುಟ್ಟುಹಾಕಿದ್ದು, ತನಿಖಾ ವರದಿ ಕೇಳಿ ಏಮ್ಸ್ ನಿರ್ದೇಶಕರಿಗೆ ಆರೋಗ್ಯ ಸಚಿವಾಲಯ ಪತ್ರವನ್ನೂ ಬರೆದಿದೆ. ಆದರೆ, ಆ ಪತ್ರಕ್ಕೂ ಏಮ್ಸ್ ಸ್ಪಂದಿಸಿಲ್ಲ, ಉತ್ತರಿಸಿಲ್ಲ.
ಏಮ್ಸ್ ಆಡಳಿತವು ಗ್ಲೌವ್ಸ್‌ಗಳ ಖರೀದಿಸಲು ಹಲವಾರು ಆರ್ಥಿಕ (ಕಡಿಮೆ ಬೆಲೆ) ಆಯ್ಕೆಗಳಿದ್ದರೂ, ಹೆಚ್ಚು ಬೆಲೆಗೆ ಖರೀದಿ ಮಾಡಿದೆ. ಸರ್ಕಾರದ ಖಜಾನೆಗೆ ಗಣನೀಯ ಆರ್ಥಿಕ ನಷ್ಟ ಉಂಟುಮಾಡಿದೆ. ಪೂರೈಕೆದಾರ ಕಂಪನಿಯೊಂದಿಗೆ ಶಾಮೀಲಾಗಿ ಅಧಿಕ ಬೆಲೆ ಗ್ಲೌವ್ಸ್‌ಗಳನ್ನು ಖರೀದಿಸಿ, ಅಕ್ರಮ ಎಸಗಿದೆ ಎಂದು ಆರೋಪಿಸಲಾಗಿದೆ.
ಗ್ಲೌವ್ಸ್ ಖರೀದಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಳೆದ 15 ತಿಂಗಳಲ್ಲಿ ಆರೋಗ್ಯ ಸಚಿವಾಲಯವು ಏಮ್ಸ್‌ಗೆ ಎರಡು ಬಾರಿ ಪತ್ರ ಬರೆದಿದೆ. ಆದರೂ, ಏಮ್ಸ್ ನಿರ್ದೇಶಕರು ಒಮ್ಮೆಯೂ ಪ್ರತಿಕ್ರಿಯಿಸಿಲ್ಲ. ಉತ್ತರಿಸಿಲ್ಲ.
ಗ್ಲೌವ್ಸ್ ಖರೀದಿ
ಗ್ಲೌವ್ಸ್ ಖರೀದಿ ಅಕ್ರಮ ಆರೋಪವು 2023ರ ಮೇ ತಿಂಗಳಲ್ಲಿ ಮುನ್ನೆಲೆಗೆ ಬಂದಿತ್ತು. ಭಾರತೀಯ ಮಾನದಂಡದ (IS 4148) ಪ್ರಕಾರ, ಪ್ರಮಾಣೀಕರಿಸಲ್ಪಟ್ಟ 58 ಲಕ್ಷ ಉತ್ತಮ ಗುಣಮಟ್ಟದ ಮತ್ತು ಪೌಡರ್-ಫ್ರೀ ಶಸ್ತ್ರಚಿಕಿತ್ಸಾ ಕೈಗವಸುಗಳ ಖರೀದಿಗಾಗಿ ಏಮ್ಸ್ ಟೆಂಡರ್‌ಗಳನ್ನು ಕರೆದಿತ್ತು.
ಒಟ್ಟು 33 ಕಂಪನಿಗಳು ಟೆಂಡರ್‌ಗಳನ್ನು ಸಲ್ಲಿಸಿದವು. ಆದರೆ, ಎರಡು ಕಂಪನಿಗಳನ್ನು ಹೊರತುಪಡಿಸಿ ಉಳಿದಾವುದೇ ಕಂಪನಿಗಳನ್ನು ತಾಂತ್ರಿಕ ಬಿಡ್‌ನ ಆರಂಭಿಕ ಹಂತವನ್ನು ಮೀರಿ ಮುಂದುವರಿಯಲು ಪರಿಗಣಿಸಲಾಗಿರಲಿಲ್ಲ. ಎಸ್ ಹೆಲ್ತ್‌ಕೇರ್ ಮತ್ತು ಬ್ರೌನ್ ಬಯೋಟೆಕ್ ಲಿಮಿಟೆಡ್ – ಈ ಎರಡು ಕಂಪನಿಗಳನ್ನು ಮಾತ್ರವೇ ಏಮ್ಸ್ ಪರಿಗಣನೆಗೆ ತೆಗೆದುಕೊಂಡಿತ್ತು.
ಈ ಪೈಕಿ, AS ಹೆಲ್ತ್‌ಕೇರ್ ಕಂಪನಿಯು ಪ್ರತಿ ಜೋಡಿ ಗ್ಲೌವ್ಸ್‌ಗಳಿಗೆ 21.50 ರೂ. ದರದಲ್ಲಿ 12.47 ಕೋಟಿ ರೂ.ಗಳಿಗೆ ಬಿಡ್ ಮಾಡಿತ್ತು. ಇನ್ನು, ಬ್ರೌನ್ ಬಯೋಟೆಕ್ ಲಿಮಿಟೆಡ್ 16.24 ಕೋಟಿ ರೂ.ಗಳಿಗೆ ಬಿಡ್ ಮಾಡಿತ್ತು. ಎರಡು ಕಂಪನಿಗಳ ಪೈಕಿ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿದ್ದ ಎಎಸ್ ಹೆಲ್ತ್‌ಕೇರ್ 2023ರ ಅಕ್ಟೋಬರ್ 16ರಂದು ಟೆಂಡರ್ ಒಪ್ಪಂದ ಪಡೆದುಕೊಂಡಿತು.
‘ಭ್ರಷ್ಟಾಚಾರ’ ನಡೆದದ್ದು ಎಲ್ಲಿ?
2023ರ ಫೆಬ್ರವರಿಯಲ್ಲಿ, ಡಾ. ಅಮಿತ್ ಲಾಥ್ವಾಲ್ ಅವರ ನೇತೃತ್ವದಲ್ಲಿ ಏಮ್ಸ್‌ನ ಕಾರ್ಡಿಯೋಥೊರಾಸಿಕ್ ಮತ್ತು ನರವಿಜ್ಞಾನ ಕೇಂದ್ರವು (CNC) ಪ್ರತಿ ಜೋಡಿಗೆ ಕೇವಲ 13.56 ರೂ.ಗಳಂತೆ ಬೇರೊಬ್ಬ ಪೂರೈಕೆದಾರರಿಂದ ಗ್ಲೌವ್ಸ್‌ಗಳನ್ನು ಖರೀದಿಸಿತ್ತು. ಹೀಗಾಗಿ, 2023ರ ಮೇನಲ್ಲಿ ಟೆಂಡರ್ ಆಹ್ವಾನಿಸಿದಾಗ ಏಮ್ಸ್ ಅಧಿಕಾರಿಗಳು ಸಿಎನ್‌ಸಿ ಖರೀಸಿದ್ದ ಬೆಲೆ ಮತ್ತು ಆಯ್ಕೆಯಾಗಿದ್ದ ಕಂಪನಿಗಳ ಬಿಡ್ ಬೆಲೆ ಬಗ್ಗೆ ದೀರ್ಘ ಚರ್ಚೆ ನಡೆಸಿದ್ದರು. ಚರ್ಚೆಯು ಆ ವರ್ಷದ ಅಕ್ಟೋಬರ್‌ವರೆಗೂ ನಡೆದಿತ್ತು. ಆದಾಗ್ಯೂ, ಪ್ರತಿ ಜೋಡಿ ಗ್ಲೌವ್ಸ್‌ಗೆ 21.50 ರೂ.ನಂತೆ ಖರೀದಿಸಲು ಎಎಸ್ ಹೆಲ್ತ್‌ಕೇರ್‌ಗೆ ಏಮ್ಸ್ ಒಪ್ಪಂದ ನೀಡಿತು.
ಎಎಸ್ ಹೆಲ್ತ್‌ಕೇರ್ ಪೂರೈಸುವ ಗುಣಮಟ್ಟದ ಗ್ಲೌವ್ಸ್‌ಗಳು 13.56 ರೂ.ಗಳ ಕಡಿಮೆ ಬೆಲೆಗೆ ಸಿಗುತ್ತಿದ್ದರೂ, 21.50 ರೂ.ಗೆ ಏಮ್ಸ್ ಖರೀದಿಸಲು ನಿರ್ಧರಿಸಿದ್ದು ಅಧಿಕಾರಿಗಳಲ್ಲಿ ಅಸಮಾಧಾನ ಹುಟ್ಟುಹಾಕಿತ್ತು. ಎಎಸ್ ಹೆಲ್ತ್‌ಕೇರ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದರ ಹಿಂದಿನ ಕಾರಣಗಳ ಬಗ್ಗೆ ಕೆಲವು ಅಧಿಕಾರಿಗಳು ವಿಚಾರಣೆ ನಡೆಸಲು ಆರಂಭಿಸಿದರು.
ದಾಖಲೆಗಳ ಪ್ರಕಾರ, ಏಮ್ಸ್‌ನ ಔಷಧ ಗೋಡೌನ್ ನಿರ್ವಾಹಕ ರವೀಂದ್ರ ಹೆಚ್ಚು ಬೆಲೆಯ ಖರೀದಿಯನ್ನು ಸಮರ್ಥಿಸಿಕೊಂಡಿದ್ದಾರೆ. “CNC ಖರೀದಿಸಿದ್ದ ಗ್ಲೌವ್ಸ್‌ಗಳನ್ನು ಆಸ್ಪತ್ರೆಯ ಸ್ಟೋರ್ ಸಮಿತಿಯು (ತಾಂತ್ರಿಕ ವಿವರಣೆ ಮತ್ತು ಮೌಲ್ಯಮಾಪನ ಸಮಿತಿ) ತಾಂತ್ರಿಕವಾಗಿ ಅಮಾನ್ಯವೆಂದು 2023ರ ಆಗಸ್ಟ್‌ನಲ್ಲಿ ಪರಿಗಣಿಸಿದೆ. ತಾಂತ್ರಿಕವಾಗಿ ಅಮಾನ್ಯವೆಂದು ವರ್ಗೀಕರಿಸಿದ ಉತ್ಪನ್ನದೊಂದಿಗೆ ಮತ್ತೊಂದು ಉತ್ಪನ್ನವನ್ನು ಹೋಲಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.
ಏಮ್ಸ್‌ನ ಸಿಎನ್‌ಸಿ ವಿಭಾಗವು ‘ಎಎಸ್‌ಎಂಎ’ ಎಂಬ ಕಂಪನಿಯಿಂದ ಕಡಿಮೆ ಬೆಲೆಗೆ ಗ್ಲೌವ್ಸ್‌ಗಳನ್ನು ಖರೀದಿಸಿತ್ತು. ಆದಾಗ್ಯೂ, ಕುತೂಹಲಕಾರಿಯಾಗಿ, ಏಮ್ಸ್ ಅದೇ ಕಂಪನಿಯಿಂದ ಅದೇ ರೀತಿಯ ಗ್ಲೌವ್ಸ್‌ಗಳನ್ನು ಖರೀದಿಸಿದೆ. ಅದೂ, 2023ರ ಆಗಸ್ಟ್‌ನಲ್ಲಿ ಏಮ್ಸ್‌ನ ಸ್ಟೋರ್ ಸಮಿತಿಯು ಎಎಸ್‌ಎಂಎ ಪೂರೈಕೆ ಮಾಡಿದ್ದ ಗ್ಲೌವ್ಸ್‌ಗಳು ತಾಂತ್ರಿಕವಾಗಿ ಕಳಪೆ ಎಂದು ಪರಿಗಣಿಸಿದ 9 ತಿಂಗಳ ಬಳಿಕ.
2024ರ ಮೇ ತಿಂಗಳಿನಲ್ಲಿ ಎಎಸ್‌ಎಂಎ ಕಂಪನಿಯಿಂದ 60 ಲಕ್ಷ ಗ್ಲೌವ್ಸ್‌ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಪ್ರತಿ ಜೋಡಿ ಗ್ಲೌವ್ಸ್‌ಗಳಿಗೆ 15.31 ರೂ.ಗಳಂತೆ ಒಟ್ಟು 9,18,60,000 ರೂ. (9.18 ಕೋಟಿ ರೂ.)ಗಳ ಒಪ್ಪಂದ ಇದಾಗಿದೆ.
ಮತ್ತೊಂದು ಗಮನಾರ್ಹ ವಿಚಾರವೆಂದರೆ, ರವೀಂದ್ರ ಅವರು ತಮ್ಮ ಸಮರ್ಥನೆಯಲ್ಲಿ, “ಎಎಸ್ ಹೆಲ್ತ್‌ಕೇರ್ ಬಿಡ್ ಮಾಡಿದ್ದ ಬೆಲೆಗಿಂತ ಹೆಚ್ಚಿನ ದರದಲ್ಲಿ ಅನೇಕ ಕಂಪನಿಗಳಿಂದ ವಿವಿಧ ಆಸ್ಪತ್ರೆಗಳು ಗ್ಲೌವ್ಸ್‌ಗಳನ್ನು ಖರೀದಿಸಿವೆ” ಎಂದು ಹೇಳಿದ್ದಾರೆ. ಉದಾಹರಣೆಗಳನ್ನು ನೀಡಿದ್ದಾರೆ. ಆದರೆ, ಅದೇ ಸಮಯದಲ್ಲಿ, ಹಲವು ಆಸ್ಪತ್ರೆಗಳು ಎಎಸ್ ಹೆಲ್ತ್‌ಕೇರ್ ಸೂಚಿಸಿದ್ದ ಬೆಲೆಗಿಂತ ಕಡಿಮೆ ಬೆಲೆಗೂ ಗ್ಲೌವ್ಸ್‌ಗಳನ್ನು ಖರೀದಿಸುತ್ತಿವೆ ಎಂಬುದನ್ನು ಮರೆಮಾಚಿದ್ದಾರೆ.
ಎಎಸ್ ಹೆಲ್ತ್‌ಕೇರ್‌ನಿಂದ 21.50 ರೂ.ಗಳಂತೆ ಟ್ರಸ್ಕನ್ ಎಂಬ ಬ್ರ್ಯಾಂಡ್‌ನ ಗ್ಲೌವ್ಸ್‌ಗಳನ್ನು ಏಮ್ಸ್ ಖರೀದಿಸಿದೆ. ಅದೇ ಸಮಯದಲ್ಲಿ, ದೇಶಾದ್ಯಂತ ಹಲವಾರು ಆಸ್ಪತ್ರೆಗಳು ಅದೇ ಗುಣಮಟ್ಟದ ಗ್ಲೌವ್ಸ್‌ಗಳನ್ನು 14 ರೂ.ನಿಂದ 18.55 ರೂ.ಗಳ ದರದಲ್ಲಿ ಖರೀದಿಸಿವೆ.
ಕಡಿಮೆ ಮೊತ್ತಕ್ಕೆ ಉತ್ತಮ ಗುಣಮಟ್ಟದ ಗ್ಲೌವ್ಸ್‌ಗಳು ಲಾಭ್ಯವಿದ್ದರೂ, ಖಜಾನೆಗೆ ನಷ್ಟವಾಗುವಷ್ಟು ಹೆಚ್ಚಿನ ಬೆಲೆಗೆ ಖರೀದಿಸಲು ಕಾರಣವೇನು ಎಂದು ಏಮ್ಸ್ ನಿರ್ದೇಶಕರನ್ನು ‘ದಿ ವೈರ್’ ಸುದ್ದಿಸಂಸ್ಥೆ ಪ್ರಶ್ನಿಸಿದೆ. ಆದರೆ, ಪ್ರಶ್ನೆಗೆ ಉತ್ತರಿಸಲು ಏಮ್ಸ್ ನಿರ್ದೇಶಕರು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚಿನ ಬೆಲೆಗೆ ಗ್ಲೌವ್ಸ್‌ಗಳನ್ನು ಖರೀದಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದವರಲ್ಲಿ ಏಮ್ಸ್‌ನ ಖರೀದಿ ಉಸ್ತುವಾರಿ, ಹೆಚ್ಚುವರಿ ವೈದ್ಯಕೀಯ ಅಧೀಕ್ಷಕ ಡಾ. ಲಥ್ವಾಲ್ ಕೂಡ ಒಬ್ಬರು. ಅವರು ಎಎಸ್ ಹೆಲ್ತ್‌ಕೇರ್ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸುವಂತೆ ಏಮ್ಸ್ ಆಡಳಿತದ ಎದುರು ಪ್ರಸ್ತಾಪಿಸಿದ್ದರು. ಆದರೂ, ಒಪ್ಪಂದ ರದ್ದಾಗಲಿಲ್ಲ. “ಈ ಟೆಂಡರ್‌ನಲ್ಲಿನ ಬೆಲೆ ಸಿಎನ್‌ಸಿ ಉಲ್ಲೇಖಿಸಿದ ಮೊತ್ತಕ್ಕಿಂತ ಬಹಳಷ್ಟು ದುಬಾರಿಯಾಗಿದೆ. ಹೀಗಾಗಿ, ಈ ಒಪ್ಪಂದವನ್ನು ತ್ವರಿತವಾಗಿ ರದ್ದುಗೊಳಿಸಿ, ಹೊಸ ಟೆಂಡರ್ ಕರೆಯುವಂತೆ ಶಿಫಾರಸು ಮಾಡಿದ್ದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಆದರೆ, ಆಗಿನ ಉಪ ನಿರ್ದೇಶಕಿ (ಆಡಳಿತ) ಮನೀಷಾ ಸಕ್ಸೇನಾ ಅವರು ಲಾಥ್ವಾಲ್ ಅವರ ಪ್ರಸ್ತಾವನೆಯನ್ನು ನಿರ್ಲಕ್ಷಿಸಿದ್ದರು.”ತುರ್ತು ಅಗತ್ಯವನ್ನು ಪರಿಗಣಿಸಿ, ಮೂರು ತಿಂಗಳ ಅವಧಿಗೆ ಪೂರೈಕೆ ಮತ್ತು ಹೆಚ್ಚುವರಿ ಖರೀದಿಗಾಗಿ ಹೊಸ ಒಪ್ಪಂದ ಮಾಡಿಕೊಳ್ಳಬಹುದು” ಎಂದು ವಾದಿಸಿದ್ದರು. ಎಎಸ್ ಹೆಲ್ತ್‌ಕೇರ್ ಜೊತೆಗಿನ ಒಪ್ಪಂದಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು.
ಈ ವರದಿ ಓದಿದ್ದೀರಾ?: ಹಗರಣಗಳ ಕುಣಿಕೆ, ‘ಮೋಶಾ’ಗಳ ಪಾಶ: ಕುಮಾರಸ್ವಾಮಿಯವರ ಕತೆ ಏನು?
ಮನೀಷಾ ಸಕ್ಸೇನಾ ಅವರ ಪ್ರಸ್ತಾವನೆಗೆ ಏಮ್ಸ್ ನಿರ್ದೇಶಕ ಎಂ. ಶ್ರೀನಿವಾಸ್ ಅವರು ಅನುಮೋದನೆ ನೀಡಿದರು. ಇದಾದ ಎರಡೇ ದಿನದಲ್ಲಿ ಎಎಸ್ ಹೆಲ್ತ್‌ಕೇರ್ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅಂತಿಮವಾಗಿ, ಏಮ್ಸ್ ಒಟ್ಟು 15 ಲಕ್ಷ ಗ್ಲೌವ್ಸ್‌ಗಳನ್ನು ಪ್ರತಿ ಜೋಡಿಗೆ 21.50 ರೂ.ಗಳಂತೆ 3.22 ಕೋಟಿ ರೂ. (3,22,50,000 ರೂ.)ಗಳಿಗೆ ಖರೀದಿಸಿತು.
ಒಂದು ವೇಳೆ, ಏಮ್ಸ್ ತನ್ನದೇ ಒಂದು ಭಾಗವಾದ ಸಿಎನ್‌ಸಿ ಕೇಂದ್ರವು ಪ್ರತಿ ಜೋಡಿಗೆ 13.55 ರೂ. ದರದಲ್ಲಿ ಖರೀದಿಸಿದ್ದ ಗ್ಲೌವ್ಸ್‌ಗಳನ್ನೇ ಖರೀದಿಸಿದ್ದರೆ, 15 ಲಕ್ಷ ಗ್ಲೌವ್ಸ್‌ಗೆ ಒಟ್ಟು ವೆಚ್ಚ ಕೇವಲ 2.3 ಕೋಟಿ ರೂ.ಗಳು ಮಾತ್ರವೇ ಆಗುತ್ತಿತ್ತು. ಆದರೆ, ಎಎಸ್ ಹೆಲ್ತ್‌ಕೇರ್‌ನಿಂದ ಖರೀದಿಸಿದ್ದಕ್ಕೆ ಏಮ್ಸ್‌ಗೆ 1.19 ಕೋಟಿ ರೂ. ನಷ್ಟವಾಗಿದೆ.
ಇದಲ್ಲದೆ, ಏಮ್ಸ್ ಇದೇ ಗ್ಲೌವ್ಸ್‌ಗಳನ್ನು 2024ರ ಮೇನಲ್ಲಿ 15.31 ರೂ.ಗಳಂತೆ ಖರೀದಿಸಿದೆ. ಈ ಮೊತ್ತದಲ್ಲಿಯೇ 2023ರ ಟೆಂಡರ್‌ನಲ್ಲಿಯೂ ಖರೀದಿಸಿದ್ದರೆ, ಒಟ್ಟು ವೆಚ್ಚ 2.29 ಕೋಟಿ ರೂ. ಆಗುತ್ತಿತ್ತು. ಆಗಲೂ, ಏಮ್ಸ್‌ಗೆ 92.85 ಲಕ್ಷ ರೂ. ಉಳಿತಾಯವಾಗುತ್ತಿತ್ತು.
ಆರೋಗ್ಯ ಸಚಿವಾಲಯಕ್ಕೆ ದೂರು
ಗ್ಲೌವ್ಸ್ ಖರೀದಿ ವಿಚಾರವು ಆರ್ಥಿಕ ನಷ್ಟ ಮಾತ್ರವಲ್ಲದೆ, ಅದನ್ನು ಮೀರಿ ಹಲವು ಸಮಸ್ಯೆಗಳನ್ನು ಹೊಂದಿದೆ. ಗ್ಲೌವ್ಸ್ ಖರೀದಿ ವಿಚಾರವಾಗಿ ಏಮ್ಸ್ ಆಡಳಿತದ ಮೌನವೂ ಒಂದು ವಿವಾದವಾಗಿದೆ. 2023ರ ಡಿಸೆಂಬರ್‌ನಲ್ಲಿ, ಗ್ಲೌವ್ಸ್ ಖರೀದಿಗೆ ಸಂಬಂಧಿಸಿದ ಎಲ್ಲ ದಾಖಲೆಗಳೊಂದಿಗೆ ಆರೋಗ್ಯ ಸಚಿವಾಲಯಕ್ಕೆ ದೂರನ್ನು ಸಲ್ಲಿಸಲಾಗಿತ್ತು. ಆನಂತರ, 2023ರ ಡಿಸೆಂಬರ್ 28ರಂದು, ಸಚಿವಾಲಯವು ಏಮ್ಸ್ ನಿರ್ದೇಶಕರಿಗೆ ಮೊದಲ ಪತ್ರವನ್ನು ಬರೆಯಿತು. ಗ್ಲೌವ್ಸ್ ಖರೀದಿ ವಿವಾದದ ಬಗ್ಗೆ ತನಿಖೆ ನಡೆಸಿ, ಸಚಿವಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಆದರೂ, ಒಂದು ವರ್ಷಕ್ಕೂ ಹೆಚ್ಚು ಸಮಯದವರೆಗೆ ಏಮ್ಸ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪರಿಣಾಮ, 2024ರ ಡಿಸೆಂಬರ್ 12ರಂದು ಏಮ್ಸ್‌ಗೆ ಆರೋಗ್ಯ ಸಚಿವಾಲಯವು ಮತ್ತೊಂದು ಪತ್ರ ಬರೆಯಿತು. ತನಿಖಾ ವರದಿ ಸಲ್ಲಿಸುವಂತೆ ಕೇಳಿತು. ಆದಾಗ್ಯೂ, ಆ ಪತ್ರಕ್ಕೂ ಏಮ್ಸ್ ಈವರೆಗೆ ಪ್ರತಿಕ್ರಿಯಿಸಿಲ್ಲ.
‘ಸಚಿವಾಲಯದ ಪತ್ರಗಳಿಗೆ ಏಮ್ಸ್ ಏಕೆ ಪ್ರತಿಕ್ರಿಯಿಸಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿರುವ ಏಮ್ಸ್ ಮಾಧ್ಯಮ ಪ್ರತಿನಿಧಿ ಡಾ. ರೀಮಾ ದಾದಾ, “ಸಂಸ್ಥೆಯು ತನಿಖೆ ನಡೆಸುತ್ತಿದೆ” ಎಂದಷ್ಟೇ ಹೇಳಿದ್ದಾರೆ.