ಮೋದಿ ಸರ್ಕಾರ ನೇಮಕ ಮಾಡಿದ ಶಾಂತ ಕುಮಾರ್ ಸಮಿತಿ ಶೇ.67ರಷ್ಟು ಜನರಿಗೆ ಅನ್ವಯವಾಗಬೇಕಾದ ಆಹಾರ ಭದ್ರತೆ ಕಾಯಿದೆಯನ್ನು ತಿದ್ದುಪಡಿ ಮಾಡಿ ಶೇ.40ಕ್ಕೆ ಇಳಿಸಲು ಶಿಫಾರಸ್ಸು ಮಾಡಿದ್ದು, ಉದ್ಯೋಗ ಖಾತರಿ ಯೋಜನೆಗೆ ಪ್ರತಿ ವರ್ಷ ಬಜೆಟ್ನಲ್ಲಿ ಬೇಡಿಕೆಗಿಂತ ಕಡಿಮೆ ಮೊತ್ತ ತೆಗೆದಿರಿಸಿದ್ದು ಇವೆಲ್ಲ ಮೋದಿ ಸರ್ಕಾರದ ಬಡತನ ನಿವಾರಣೆಯ ನಿರ್ಲಕ್ಷ್ಯದ ಕೆಲವು ಉದಾಹರಣೆಗಳು
ದುಡಿಮೆಗೆ ಹೋದ ಗಂಡ ರಾತ್ರಿ ಮನೆಗೆ ಬರುವಾಗ ಅಕ್ಕಿ ತಂದರಷ್ಟೇ ರಾತ್ರಿ ಊಟ ಎಂಬುದು ಬಡ ಕೂಲಿ ಕಾರ್ಮಿಕ ಮನೆಗಳ ಕತೆಯಾಗಿತ್ತು. ಆತ ಕುಡಿದು ಚಿಲ್ಲರೆ ಉಳಿದರಷ್ಟೇ ಮನೆಗೆ ಅಕ್ಕಿ. ಇಲ್ಲದಿದ್ದರೆ ಹೆಂಡತಿ ಮಕ್ಕಳಿಗೆ ತಣ್ಣೀರು ಬಟ್ಟೆಯೇ ಗತಿ. ರೇಷನ್ ಕಾರ್ಡ್ ಇಲ್ಲದಂತಹ ವಿಳಾಸವಿಲ್ಲದ ಕುಟುಂಬಗಳ ಸ್ಥಿತಿ ಈಗಲೂ ಇದಕ್ಕಿಂತ ಭಿನ್ನವಾಗಿಲ್ಲ.
ಭಾರತದಲ್ಲಿ ಐದು ದಶಕಗಳಿಂದಲೂ ಸರ್ಕಾರವೇ ಬಡವರಿಗೆ ಕಡಿಮೆ ಬೆಲೆಗೆ ಪಡಿತರ ಹಂಚುವ ವ್ಯವಸ್ಥೆ ಜಾರಿಯಲ್ಲಿದೆ. ಆಗ ಪ್ರಜೆಗಳ ಗುರುತಿಗೆಂದು ಇದ್ದದ್ದು ರೇಷನ್ ಕಾರ್ಡ್ ಒಂದೇ. ಅಗತ್ಯ ಇರುವ ಎಲ್ಲರಿಗೂ ರೇಷನ್ ಸಿಗೋದು. ಕಡಿಮೆ ಬೆಲೆಗೆ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಸೀಮೆ ಎಣ್ಣೆ, ವರ್ಷಕ್ಕೆರಡು ಸಲ ಕಾಟನ್ ಸೀರೆ, ಪಂಚೆ ಕೂಡಾ ರೇಷನ್ ಅಂಗಡಿಯಲ್ಲಿ ಸಿಗುತ್ತಿತ್ತು. ಕ್ರಮೇಣ ಬಿಪಿಎಲ್ ಮತ್ತು ಎಪಿಎಲ್ ಎಂಬ ಎರಡು ಬಗೆಯ ಕಾರ್ಡುಗಳು ಜಾರಿಗೆ ಬಂದವು. ಕೆಲ ವರ್ಷಗಳಿಂದೀಚೆಗೆ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಪಡಿತರ ವ್ಯವಸ್ಥೆ ಇದೆ. ಬಡವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರವೊಂದು ಮಾಡುವ ಕಿಂಚಿತ್ ಉಪಕಾರ ಇದು.
ಸರ್ಕಾರದ ನೀತಿಗಳು, ನಮ್ಮ ಸಾಮಾಜಿಕ ವ್ಯವಸ್ಥೆ, ಜಾತಿಪದ್ಧತಿ, ಶೋಷಣೆಯ ಫಲವಾಗಿ ಈ ದೇಶ ಎಷ್ಟೇ ಸಂಪದ್ಭರಿತವಾಗಿದ್ದರೂ ಬಡವರು ಬಡವರಾಗಿಯೇ ಉಳಿಯುವಂತಾಗಿದೆ. ಹೀಗಾಗಿ ಕೊಳ್ಳುವ ಶಕ್ತಿ ತುಂಬುವ ಯೋಜನೆಗಳು ಒಂದೆಡೆಯಾದರೆ, ಮೈ ಮುರಿದು ದುಡಿಯುವ ಜನರ ದೇಹಕ್ಕೆ ತ್ರಾಣ ತುಂಬುವ ಪೌಷ್ಟಿಕ ಆಹಾರ ವಿತರಣೆ ಮುಂತಾದ ಯೋಜನೆಗಳು ಅನಿವಾರ್ಯ.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ, ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಕೇಜಿಗೆ 1 ರೂಪಾಯಿಯಂತೆ ಬಿಪಿಎಲ್ ಕುಟುಂಬದ ಪ್ರತಿಯೊಬ್ಬರಿಗೂ ಮಾಸಿಕ ಹತ್ತು ಕೇಜಿ ಅಕ್ಕಿ ಕೊಡುವ ʼಅನ್ನಭಾಗ್ಯʼ ಯೋಜನೆ ಜಾರಿಗೊಳಿಸಲಾಯಿತು. ಅವರೇ ಹೇಳಿಕೊಂಡಂತೆ ಅವರ ಬಾಲ್ಯಕಾಲದಲ್ಲಿ ಬಡವರ ಮನೆಗಳಲ್ಲಿ ಹಬ್ಬದ ದಿನವಷ್ಟೇ ಅನ್ನ ಮಾಡುವ ಪರಿಸ್ಥಿತಿಯನ್ನು ಅವರು ಕಂಡಿದ್ದರು. ಈ ರಾಜ್ಯದ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬ ಅಂತಃಕರಣ ತುಂಬಿದ ತಾಯಿಕರುಳಿನ ಯೋಜನೆಯಿದು. ಸಿದ್ದರಾಮಯ್ಯನವರ ಈ ಕನಸಿನ ಯೋಜನೆ ಅದೆಷ್ಟೋ ಮನೆಗಳ ಹಸಿವನ್ನು ನೀಗಿಸಿದೆ.
ಅನ್ನಭಾಗ್ಯ ಯೋಜನೆ ಜಾರಿಯಾದ ಒಂದೇ ವರ್ಷದಲ್ಲಿ ಉಚಿತ ಅಕ್ಕಿ ನೀಡಲು ಶುರು ಮಾಡಿದ್ದರು. ಕೇಂದ್ರ ಸರ್ಕಾರದ ಸಹಕಾರದಿಂದ ನಡೆಯುವ ಈ ಯೋಜನೆಯನ್ನು ಆರಂಭದಿಂದಲೂ ಟೀಕಿಸುತ್ತಲೇ ಬಂದ ಬಿಜೆಪಿಯವರು, ಸಾಧ್ಯವಾದಾಗಲೆಲ್ಲ ʼಅಕ್ಕಿ ಮೋದಿಯದ್ದು ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದುʼ ಎಂದೂ ಬಿಂಬಿಸಲು ಹೇಸಲಿಲ್ಲ. ಮೈ ಬಗ್ಗಿಸಿ ದುಡಿಯದ ವರ್ಗ ಅನ್ನಭಾಗ್ಯವನ್ನು ಗೇಲಿ ಮಾಡಿದ ಪರಿ ಅಸಹ್ಯ ಹುಟ್ಟಿಸುವಂತಿದೆ. ಆದರೂ ಐದೂ ವರ್ಷವೂ ಯಾವುದೇ ಚ್ಯುತಿ ಬಾರದಂತೆ ನೋಡಿಕೊಂಡಿತ್ತು ಕಾಂಗ್ರೆಸ್ ಸರ್ಕಾರ.
ರಾಜ್ಯದಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಕ್ರಮವಾಗಿ ಸರ್ಕಾರ ರಚನೆ ಮಾಡಿದ ತಕ್ಷಣ ಅನ್ನಭಾಗ್ಯ ಯೋಜನೆಯಡಿ ಒಬ್ಬರಿಗೆ ಐದು ಕೇಜಿಗೆ ಸೀಮಿತಗೊಳಿಸಿದರು. ಅದರ ಜೊತೆಗೆ ಬಡವರ ಹಸಿವನ್ನು ಕಡಿಮೆ ಖರ್ಚಿನಲ್ಲಿ ನೀಗಿಸುವ ನಗರದ ಪ್ರದೇಶಕ್ಕೆ ನೀಮಿತವಾಗಿದ್ದ ʼಇಂದಿರಾ ಕ್ಯಾಂಟೀನ್ʼ ಬಾಗಿಲು ಮುಚ್ಚುವಂತೆ ಮಾಡಿದರು. ಕೊರೊನಾ ಸಮಯದಲ್ಲಿ ಬಡವರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಊಟ ನೀಡುವುದಕ್ಕೆ ಆಶ್ರಯವಾದದ್ದು ಈ ಕ್ಯಾಂಟೀನ್ಗಳೇ. ಆದರೂ ಕೊರೊನಾ ನಂತರವೂ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಪುನಶ್ಚೇತನಕ್ಕೆ ಮನಸ್ಸು ಮಾಡಲಿಲ್ಲ. ಅಷ್ಟೇ ಅಲ್ಲ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಅನ್ನಪೂರ್ಣ ಕ್ಯಾಂಟೀನ್ ತೆರೆಯಲೂ ಇಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರಧಾನಿ, ಗೃಹಸಚಿವರಿಂದ ಹಿಡಿದು ಇಡೀ ಕೇಂದ್ರದ ಮಂತ್ರಿಮಂಡಲವೇ ಕರ್ನಾಟಕದ ತುಂಬಾ ಓಡಾಡಿ ಪ್ರಚಾರ ಮಾಡಿದರೂ ಜನ ಕ್ಯಾರೇ ಅಂದಿಲ್ಲ. ಆದರೆ ಇದರಿಂದ ಅವರು ಬುದ್ದಿ ಕಲಿತಂತೆ ಕಾಣುತ್ತಿಲ್ಲ.
ʼಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಯೋಜನೆಗಳು ಕರ್ನಾಟಕಕ್ಕೆ ಸಿಗಲ್ಲʼ ಎಂಬ ಬೆದರಿಕೆ ಹಾಕಿದ್ದ ಮೋದಿ ಸರ್ಕಾರ ಇದೀಗ ರಾಜ್ಯ ಸರ್ಕಾರದ ಹೆಚ್ಚುವರಿ ಅಕ್ಕಿಯ ಬೇಡಿಕೆಗೆ ಕೊಕ್ಕೆ ಹಾಕಿದೆ. ಅನ್ನಭಾಗ್ಯವನ್ನು ʼಕನ್ನಭಾಗ್ಯʼ ಅಂದವರು, ಉಚಿತ ಅಕ್ಕಿ ಕೊಟ್ಟು ಜನರನ್ನು ಸೋಮಾರಿಗಳಾಗಿ ಮಾಡಿದ್ದಾರೆ ಎಂದು ಬೊಬ್ಬೆ ಹೊಡೆದವರು ಬಡವರ ಜೇಬಿಗೆ ಕನ್ನ ಹಾಕಿ ತಮ್ಮ ಜೇಬು ತುಂಬಿಸಿಕೊಂಡು ಈಗ ತೊಲಗಿದ್ದಾರೆ. ಆದರೆ ಬಡವರ ಬಗ್ಗೆ ಯಾವ ಅನುಕಂಪ, ಕಾಳಜಿಯೂ ಇಲ್ಲದ ಬಿಜೆಪಿಯವರು ಬಡಜನರ ಉಚಿತ ಯೋಜನೆಗಳನ್ನು ಬಿಟ್ಟಿಭಾಗ್ಯ ಎಂದು ಗೇಲಿ ಮಾಡುತ್ತಾ ತಿರುಗುತ್ತಿದ್ದಾರೆ. ರಾಜ್ಯ ಬಿಜೆಪಿಯ ನಾಯಕರು ಅಕ್ಕಿ ಕೊಡಲ್ಲ ಎಂದು ಹೇಳಿದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಬದಲು
ಜುಲೈ 1ರಿಂದ ಸಿದ್ದರಾಮಯ್ಯ ಸರ್ಕಾರ 10 ಕೇಜಿ ಅಕ್ಕಿ ಕೊಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಹೇಳುತ್ತಿದ್ದಾರೆ. ಅಂದ್ರೆ ಇವರಿಗೆ ಒಳಗೊಳಗೆ ಮೋದಿ ಸರ್ಕಾರ ಅಕ್ಕಿ ಕೊಡದಿರುವ ಬಗ್ಗೆ ಖುಷಿ ಇದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಹಳ್ಳ ಹಿಡಿದರೆ ತಾನು ಮತ್ತೆ ಅಧಿಕಾರ ಹಿಡಿಯಬಹುದು ಎಂಬ ಹಗಲುಗನಸು ಕಾಣುತ್ತಿದ್ದಾರೆ.
ಬಿಜೆಪಿ ಸರ್ಕಾರ ನೇಮಕ ಮಾಡಿದ ಶಾಂತ ಕುಮಾರ್ ಸಮಿತಿ ಶೇ.67ರಷ್ಟು ಜನರಿಗೆ ಅನ್ವಯವಾಗಬೇಕಾದ ಆಹಾರ ಭದ್ರತೆ ಕಾಯಿದೆಯನ್ನು ತಿದ್ದುಪಡಿ ಶೇ.40ಕ್ಕೆ ಇಳಿಸಲು ಶಿಫಾರಸ್ಸು ಮಾಡಿದ್ದು, ಉದ್ಯೋಗ ಖಾತರಿ ಯೋಜನೆಗೆ ಪ್ರತಿ ವರ್ಷ ಬಜೆಟ್ನಲ್ಲಿ ಬೇಡಿಕೆಗಿಂತ ಕಡಿಮೆ ಮೊತ್ತ ತೆಗೆದಿರಿಸಿದ್ದುಇವೆಲ್ಲ ಮೋದಿ ಸರ್ಕಾರದ ಬಡತನ ನಿವಾರಣೆಯ ನಿರ್ಲಕ್ಷ್ಯದ ಕೆಲವು ಉದಾಹರಣೆಗಳು. ಬಿಜೆಪಿ ಎಂದರೆ ಬಡವರ ವಿರೋಧಿ ಎಂಬುದಂತು ಸತ್ಯ. ಈಗಲೂ ರಾಜ್ಯದ ಬಡವರಿಗೆ ಹತ್ತು ಕೇಜಿ ಅಕ್ಕಿ ಸಿಕ್ಕಿ ಬಡವರ ಹೊಟ್ಟೆ ತಣ್ಣಗಿರಲಿ ಎಂದು ಹೋರಾಟ ಮಾಡಲು ಹೊರಟಿಲ್ಲ, ಕಾಂಗ್ರೆಸ್ನ ಗ್ಯಾರಂಟಿ ಯೋಜನೆ ಹಳ್ಳ ಹಿಡಿಯಲಿ ಎಂಬುದಷ್ಟೇ ಅವರ ಉದ್ದೇಶ. ಅನ್ನಭಾಗ್ಯ ಯೋಜನೆಗೆ ಯಾವುದೇ ಕುತ್ತು ಬಾರದಂತೆ ಸಿದ್ದರಾಮಯ್ಯ ಸರ್ಕಾರ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಬಿಜೆಪಿಯ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಬೇಕಿದೆ.
