`ಗುಳ್ಟು’ ಖ್ಯಾತಿಯ ನಟ ನವೀನ್ ಶಂಕರ್ ಅಭಿನಯದ ʼಕ್ಷೇತ್ರಪತಿʼ ಸಿನಿಮಾದ ಬಹುನಿರೀಕ್ಷಿತ ಟೀಸರ್ ಗುರುವಾರ ಬಿಡುಗಡೆಯಾಗಿದೆ. ಅಂದಾಜು ಎರಡು ನಿಮಿಷಗಳ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಯುವ ನಿರ್ದೇಶಕ ಶ್ರೀಕಾಂತ್ ಕಟಗಿ, ಉತ್ತರ ಕರ್ನಾಟಕದ ರೈತರ ಮೇಲಿನ ದೌರ್ಜನ್ಯ ಮತ್ತು ಬಂಡಾಯದ ಸುತ್ತದ ಚಿತ್ರದ ಕಥೆಯನ್ನು ಹೆಣೆದಿದ್ದಾರೆ. ʼಕ್ಷೇತ್ರಪತಿʼ ಪೊಲಿಟಿಕಲ್ ಡ್ರಾಮಾ ಸಿನಿಮಾ ಎಂಬುದನ್ನು 2 ನಿಮಿಷಗಳ ಟೀಸರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ.
ನವೀನ್ ಶಂಕರ್ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಕೃಷ್ಣಾ ಹೆಬ್ಬಾಳೆ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಭಿನ್ನ ಟೈಟಲ್, ಉತ್ತರ ಕರ್ನಾಟಕದ ಕಥಾಹಂದರದ ಮೂಲಕ ಕುತೂಹಲ ಹೆಚ್ಚಿಸಿರುವ ʼಕ್ಷೇತ್ರಪತಿʼ ಮುಂಬರುವ ಜುಲೈ ತಿಂಗಳಿನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿರುವುದು ವಿಶೇಷ.