ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದ್ದು, ಆದ ಕಾರಣ ಕೇರಳ ಜನರು ಕೆಸಿಎಂಎಂಎಫ್ನ ಮಿಲ್ಮಾ ಹಾಲನ್ನು ಮಾತ್ರ ಸೇವಿಸುವಂತೆ ನಾನು ವಿನಂತಿಸುತ್ತೇನೆ ಎಂದು ಕೇರಳದ ಪಶುಸಂಗೋಪನಾ ಸಚಿವೆ ಜೆ ಚಿಂಚು ರಾಣಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇರಳ ಪ್ರವೇಶಿಸುವ ಮುನ್ನ ಕರ್ನಾಟಕ ಹಾಲು ಒಕ್ಕೂಟವು ನಮ್ಮ ರಾಜ್ಯದ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು. ಈ ಬಗ್ಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ದೂರು ನೀಡುತ್ತೇವೆ. ನಮ್ಮ ಮನೆಗಳಲ್ಲಿ ಹೆಚ್ಚಾಗಿ ಮಕ್ಕಳು ಹಾಲು ಸೇವಿಸುತ್ತಾರೆ. ಆದರೆ ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ. ಹೀಗಾಗಿ ಕೇರಳದ ಜನರು ಕೆಸಿಎಂಎಂಎಫ್ನ ಮಿಲ್ಮಾ ಹಾಲನ್ನು ಮಾತ್ರ ಸೇವಿಸುವಂತೆ ನಾನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
ಮಿಲ್ಮಾ ಬ್ರ್ಯಾಂಡ್ನ ಅಧ್ಯಕ್ಷ ಕೆ ಎಸ್ ಮಣಿ ಮಾತನಾಡಿ, ನಂದಿನಿ ಹಾಲು ಕೇರಳಕ್ಕೆ ತನ್ನ ಮಾರಾಟವನ್ನು ವಿಸ್ತರಿಸುವ ಕ್ರಮವು ಅನೈತಿಕವಾಗಿದೆ. ಇದು ಭಾರತದ ಡೈರಿ ಚಳವಳಿಯ ಉದ್ದೇಶವನ್ನು ನಾಶಪಡಿಸುತ್ತದೆ. ಮೊದಲು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದ ಅವರು ಈಗ ಹಾಲು ಕೂಡ ಮಾರಾಟ ಮಾಡುತ್ತಿದ್ದಾರೆ. ಅವರು ಕೇರಳದಲ್ಲಿ ಹಾಲನ್ನು ಅಂಗಡಿಯಿಂದ ಅಂಗಡಿಗೆ ವಿತರಿಸಲು ಪ್ರಾರಂಭಿಸಿದರು. ಈ ಬಗ್ಗೆ ನಾವು ಕೆಎಂಎಫ್ಗೆ ಪತ್ರ ಬರೆದಿದ್ದು, ಅಲ್ಲಿನವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದಾರಾ? 500 ಚಂದಾದಾರರಿದ್ದರೆ ಸಾಕು: ಹಣ ಗಳಿಕೆಯ ನಿಯಮ ಸಡಿಲಗೊಳಿಸಿದ ಯೂಟ್ಯೂಬ್
ಕರ್ನಾಟಕದ ಹಾಲು ಸಹಕಾರಿ ಸಂಸ್ಥೆಯಾದ ಕೆಎಂಎಫ್ನ ನಂದಿನಿ ಬ್ರ್ಯಾಂಡ್ ಈ ವರ್ಷದ ಏಪ್ರಿಲ್ನಲ್ಲಿ ಕೊಚ್ಚಿಯ ಮಾಮಲ್ಲಪುರಂನಲ್ಲಿ ತನ್ನ ಪಾರ್ಲರ್ಗಳನ್ನು ತೆರೆದಿದೆ ಮತ್ತು ಮುಂದಿನ ದಿನಗಳಲ್ಲಿ ಇತರ ಪ್ರದೇಶಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಕೇರಳ ಸರ್ಕಾರವು ನಂದಿನಿಯ ಉಪಸ್ಥಿತಿಯನ್ನು ವಿರೋಧಿಸಿತ್ತು ಮತ್ತು ಅದನ್ನು ‘ಅನೈತಿಕ’ ಎಂದು ಕರೆದಿತ್ತು.
ಕೇರಳ ಸಚಿವರು ಹಾಗೂ ಕೆಸಿಎಂಎಂಎಫ್ನ ಆಕ್ಷೇಪಗಳಿಗೆ ಕರ್ನಾಟಕದ ಸಹಕಾರ ಸಚಿವ ಕ್ಯಾತಸಂದ್ರ ರಾಜಣ್ಣ ಸುದ್ದಿಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ್ದು, ಕೇರಳದಲ್ಲಿ ನಂದಿನಿಯ ವ್ಯವಹಾರದಲ್ಲಿ ಅನೈತಿಕ ಏನೂ ಇಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಬೇಕಾದರೂ ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಲ್ಲಿ ಅನೈತಿಕವಾದುದೇನೂ ಇಲ್ಲ. ಇದೊಂದು ಸ್ಪರ್ಧೆ. ಗ್ರಾಹಕರು ಉತ್ತಮ ಗುಣಮಟ್ಟವನ್ನು ನೀಡುವ ಉತ್ಪನ್ನವನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.