ಆನ್‌ಲೈನ್ ಗೇಮ್ಸ್ ಆಡದಂತೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ತಂದೆ-ತಾಯಿ ಮತ್ತು ಸಹೋದರಿಯನ್ನು 21 ವರ್ಷದ ಯುವಕ ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ಒಡಿಶಾದ ಜಗತ್‌ಸಿಂಗಪುರ್ ಜಿಲ್ಲೆಯಲ್ಲಿ (ಮಾ.4) ಮಂಗಳವಾರ ಬೆಳಗ್ಗೆ ನಡೆದಿದೆ.
ಸೂರ್ಯಕಾಂತ ಸೇಥಿ (21) ಕೊಲೆಗೈದ ಆರೋಪಿ. ಪ್ರಶಾಂತ್ ಸೇಥಿ (65), ಅವರ ಪತ್ನಿ ಕನಕಲತಾ (62) ಹಾಗೂ ಮಗಳು ರೋಸಾಲಿನ್ (25) ಕೊಲೆಯಾದವರು ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್ ಗೇಮ್ ಗೀಳಿಗೆ ಒಳಗಾಗಿದ್ದ ಯುವಕನನ್ನು ಪೋಷಕರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ವಿಪರೀತ ಕೋಪಗೊಂಡ ಸೂರ್ಯಕಾಂತ ತಂದೆ-ತಾಯಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ್ದಾನೆ.
ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭವಾನಿ ಶಂಕರ್ ಮಾಹಿತಿ ನೀಡಿದ್ದಾರೆ
ʼಪ್ರಕರಣದ ತನಿಖೆ ಮುಂದುವರಿಸಲಾಗಿದೆ. ವಿಧಿ ವಿಜ್ಞಾನ ತಂಡ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆʼ ಎಂದು ಪೊಲೀಸರು ತಿಳಿಸಿದ್ದಾರೆ.