ಕೊಪ್ಪಳ ತಾಲೂಕಿನ 30 ಹಳ್ಳಿಗಳ ಜನ ಜಾನುವಾರು ಸಾವು, ರೋಗ ರುಜಿನಗಳಿಗೆ ಕಾರಣವಾದ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಆಗ್ರಹಿಸಿತು.
ತುಂಗಭದ್ರಾ ನೀರು, ಫಲವತ್ತಾದ ಅಗ್ಗದ ದರದ ಭೂಮಿಯ ಮೇಲೆ ಕಣ್ಣಿಟ್ಟ ಕಾರ್ಪೊರೇಟ್ ಕಂಪನಿಗಳು ಹೊಸಪೇಟೆ, ಸಂಡೂರು, ಬಳ್ಳಾರಿಯಲ್ಲಿ ಸಂಪದ್ಭರಿತ ಮ್ಯಾಂಗನೀಸ್ ಗಣಿಗಾರಿಕೆ ಮಾಡಿ, ಯಥೇಚ್ಛವಾಗಿ ನೈಸರ್ಗಿಕ ಸಂಪನ್ಮೂಲ ಕೊಳ್ಳೆ ಹೊಡೆದು, ಪರಿಸರ ನಾಶ ಮಾಡಿ, ಸ್ಪಾಂಜ್ ಐರನ್, ಉಕ್ಕು ತಯಾರಿಸಲು ಶುದ್ಧ ಆಹ್ಲಾದಕರ ಹವಾಗುಣ ಇರುವ ಕೊಪ್ಪಳಕ್ಕೆ ಬಂದು ಕಾರ್ಖಾನೆ ಸ್ಥಾಪಿಸಿದವು. ಮೊಟ್ಟಮೊದಲು ಕಿರ್ಲೋಸ್ಕರ್ ರ್ಫೆರಸ್ 1991ರಲ್ಲಿ ಬೇವಿನಹಳ್ಳಿಯ್ಲಲ್ಲಿ ಕಾರ್ಖಾನೆ ಸ್ಥಾಪಿಸಿತು. ಈ ಕಾರ್ಖಾನೆಗಾಗಿ ಭೂಮಿ ಖರೀದಿಸುವಾಗ ನಡೆದ ದೊಡ್ಡ ದೌರ್ಜನ್ಯವನ್ನು ಎದುರಿಸಲಾಗದೆ, ರೈತರು ಉದ್ಯೋಗ ಸಿಗುವ ಆಸೆಯಿಂದ ಭೂಮಿ ಕೊಟ್ಟರು. ನಂತರ ಬಂದ ಕಲ್ಯಾಣಿ ಗಿಣಿಗೇರಿಯಲ್ಲಿ ಸ್ಥಾಪನೆಯಾಗಿ ವಸಾಹತು ರೀತಿ ಬದಲಾಯಿತು. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿನ ಜನರ ಆರೋಗ್ಯ ಸ್ಥಿತಿ ಸಾಮಾಜಿಕ ಸ್ಥಿತಿ ಗಮನಿಸುವವರು ಯಾರೂ ಇತ್ತ ಬಂದಿಲ್ಲ” ಎಂದು ಸಮಿತಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
“2008ರಿಂದ ಸ್ಪಾಂಜ್ ಐರನ್ ಉತ್ಪಾದಿಸಲು ಮುಂದಾದ ಎಂಎಸ್‌ಪಿಎಲ್ ಕಳೆದ 15 ವರ್ಷಗಳಲ್ಲಿ ಕೊಪ್ಪಳದ 1.5 ಲಕ್ಷ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿದೆ. ಇದರಲ್ಲಿ ಜಿಲ್ಲಾಡಳಿತ ಭವನ, ಜಿಲ್ಲಾ ಆಸ್ಪತ್ರೆ, ಕಿಮ್ಸ್ ಮೆಡಿಕಲ್ ಕಾಲೇಜು, ಪ್ರತಿಷ್ಠಿತ ಡಾಲರ್ಸ್ ಕಾಲೋನಿ, ಗವಿಶ್ರೀನಗರ, ಶ್ರೀ ಗವಿಸಿದ್ದೇಶ್ವರ ಮಠ, ಕುವೆಂಪು ನಗರ, ಹೂವಿನಾಳ, ಹಮಾಲರ ಕಾಲೋನಿ, ಹೊಸ ಮತ್ತು ಹಳೆ ಎಪಿಎಂಸಿ, ಜಿಲ್ಲಾ ಸತ್ರ ನ್ಯಾಯಾಲಯ, ಬಿಟಿ ಪಾಟೀಲ ನಗರ, ಕಾಳಿದಾಸ ನಗರ, ಸಿದ್ದೇಶ್ವರನಗರ, ಅಂಬೇಡ್ಕರ್ ನಗರ, ನಿರ್ಮಿತಿ ಕೇಂದ್ರ, ಶ್ರೀಶೈಲನಗರ, ಜೆಪಿ ಮಾರುಕಟ್ಟೆ ಎಂಎಸ್‌ಪಿಎಲ್ ಕಂಪನಿ ಹೊರ ಸೂಸುವ ಕಪ್ಪು ದೂಳು ಮತ್ತು ಹೊಗೆಯಿಂದ ಬಾಧಿತವಾಗಿವೆ. ಇಲ್ಲಿನ ಜನರ ಉಸಿರಾಟದ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು, ರೋಗರುಜಿನಗಳಿಗೆ ಒಳಾಗುತ್ತಿದ್ದಾರೆ. ಈ ಜನರ ಉತ್ತಮ ಆರೋಗ್ಯ ಮರೀಚಿಕೆಯಾಗಿದೆ. ನಗರದಲ್ಲಿ ಕಾರ್ಖಾನೆ ಬರುವ ಮುಂಚೆ ನಾಲ್ಕು ವೈದ್ಯರಿದ್ದರು ಈಗ ನೂರಾರು ವೈದ್ಯರು ಆಸ್ಪತ್ರೆ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುವಂತಾಗಿದೆ. ಕಳೆದ 10 ವರ್ಷಗಳಲ್ಲಿ ಈ ಪ್ರಮಾಣದಲ್ಲಿ ವೈದ್ಯರು ಹೆಚ್ಚಾಗಿದ್ದೇಕೆ ಎಂದು ತಿಳಿಸಬೇಕು” ಎಂದು ಆಗ್ರಹಿಸಿದರು.
“ಕಾರ್ಖಾನೆಗಳು ತುಂಗಭದ್ರಾ ಜಲಾಶಯಕ್ಕೆ ಬಿಡುತ್ತಿರುವ ತ್ಯಾಜ್ಯದಿಂದ ಜಲಾಶಯದ ನೀರು ಸಂಪೂರ್ಣ ವಿಷವಾಗಿದೆ. ಅಲ್ಲದೆ ಜಲಾಶಯದ ಅರ್ಧದಷ್ಟು ನೀರನ್ನು ಬಳ್ಳಾರಿಯ ಜಿಂದಾಲ್, ವಿಜಯನಗರ, ಕೊಪ್ಪಳದ ಈ ಉಕ್ಕಿನ ಕಾರ್ಖಾನೆಗಳು ಬಳಸಿಕೊಳ್ಳುತ್ತಿರುವುದರಿಂದ ಈ ನೀರನ್ನೇ ಅವಲಂಬಿಸಿದ ಎಡ ಮತ್ತು ಬಲದಂಡೆಗಳ 1 ಕೋಟಿ ಜನರು 12,ಲಕ್ಷ ಎಕರೆಯಲ್ಲಿ ಎರಡು ಬೆಳೆ ಭತ್ತ ಬೆಳೆಯುವುದನ್ನು ಬಹುತೇಕ ನಿಲ್ಲಿಸಿದ್ದಾರೆ. ಬಳ್ಳಾರಿ, ವಿಜಯನಗರ, ಕೊಪ್ಪಳದ ಈ ಕಾರ್ಖಾನೆಗಳು ಕೇವಲ 40 ಸಾವಿರ ಉದ್ಯೋಗ ಸೃಷ್ಟಿಸಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ 3 ಕೋಟಿ ಜನರ ಬದುಕನ್ನು ಕಸಿದುಕೊಂಡಿವೆ ಇದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದರು.
ಇದನ್ನೂ ಓದಿ: ಕೊಪ್ಪಳ | ಆನೆಗೊಂದಿ ಉತ್ಸವ ವಿಳಂಬ; ಸಚಿವ ತಂಗಡಗಿಗೆ ಹೋರಾಟಗಾರರ ಎಚ್ಚರಿಕೆ
ಮಾಲಿನ್ಯಕ್ಕೆ ಕಾರಣವಾದ ಎಲ್ಲಾ ತರಹದ ಕಾರ್ಖಾನೆಗಳನ್ನು ಮುಲಾಜಿಗೊಳಗಾಗದೇ ಕಾರ್ಖಾನೆ ಮುಚ್ಚುವ ತೀರ್ಮಾನವನ್ನು ಮಾಡಬೇಕು. ಇನ್ನು ಬಿಹಾರ, ಜಾರ್ಖಂಡ, ಒರಿಸ್ಸಾದ ಕಾರ್ಮಿಕರು ಕಾರ್ಖಾನೆಯ ಅಪಾಯಕಾರಿ ಕೆಲಸದಲ್ಲಿ ತೊಡಗಿ ಸಾಯುತ್ತಿದ್ದು, ವಲಸೆ ಕಾರ್ಮಿಕರ ಸಮೀಕ್ಷೆ ನಡೆಸಬೇಕು ಹಾಗೂ ಸಾವಿನ ಪ್ರಕರಣಗಳ ಮೇಲೆ ತನಿಖೆ ನಡೆಸಬೇಕು. ಎಂದು ಒತ್ತಾಯಿಸಿದರು.
