ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕನಿಷ್ಠ 60 ರಿಂದ 80 ಎಕರೆ ಸರ್ಕಾರಿ ಜಮೀನು ಉಚಿತವಾಗಿ ನೀಡಲು ಜಿಲ್ಲಾಧಿಕಾರಿಗೆ ಎಪಿಎಂಸಿ ಕಾರ್ಯದರ್ಶಿ ಪತ್ರ ಬರೆದಿದ್ದಾರೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಮಂಗಳವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪ್ರಸ್ತುತ ಬೀದರ್ ಎಪಿಎಂಸಿ 39 ಎಕರೆ 28 ಗುಂಟೆ ಜಮೀನು ಹೊಂದಿದ್ದು. ಈಗಾಗಲೇ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇನ್ನೂ ಎಪಿಎಂಸಿ ವಹಿವಾಟು ವಿಸ್ತರಣೆಗೆ ಸ್ಥಳಾವಕಾಶದ ಕೊರತೆ ಇರುವ ಕಾರಣ ಬೀದರ್ ಸುತ್ತಮುತ್ತ 80 ಎಕರೆ ಸರ್ಕಾರಿ ಜಮೀನು ಒದಗಿಸಲು ಕೋರಲಾಗಿದೆ’ ಎಂದರು.
‘ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರುಕಟ್ಟೆ ಪ್ರಾಂಗಣದ ವಿಸ್ತರಣೆಗಾಗಿ ಅನುಮೋದಿತ ದರದ ಶೇ50ರ ರಿಯಾಯಿತಿ ದರದಲ್ಲಿ ನೂರು ಎಕರೆ ಜಮೀನು ಮಂಜೂರು ಮಾಡುವಂತೆ ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಕೋರಿದ್ದಾರೆ’ ಎಂದು ಸಚಿವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಾಲ್ಯವಿವಾಹ ತಡೆದ ಅಧಿಕಾರಿಗಳು
ಬೀದರ್ ಜಿಲ್ಲೆಯ ಬೀದರ್, ಔರಾದ್ (ಬಿ), ಹುಮನಾಬಾದ್, ಬಸವಕಲ್ಯಾಣ ಮತ್ತು ಭಾಲ್ಕಿಯಲ್ಲಿ ಎಪಿಎಂಸಿಗಳು ಕಾರ್ಯನಿರ್ವಹಿಸುತ್ತಿವೆ. ಔರಾದ್ ಎಪಿಎಂಸಿ 45 ಎಕರೆ, ಹುಮನಾಬಾದ್ 16 ಎಕರೆ 15 ಗುಂಟೆ, ಬಸವಕಲ್ಯಾಣ 16 ಎಕರೆ 8 ಗುಂಟೆ ಹಾಗೂ ಭಾಲ್ಕಿ ಎಪಿಎಂಸಿ 36 ಎಕರೆ 37 ಗುಂಟೆ ಜಮೀನು ಹೊಂದಿದೆ. ಈ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸ್ಥಳಾವಕಾಶದ ಕೊರತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.