ಸರ್ಬಿಯಾದಲ್ಲಿ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಂದೋಲನ ನಡೆಯುತ್ತಿದೆ. ಆ ಆಂದೋಲನಕ್ಕೆ ಅಲ್ಲಿನ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ. ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿ ಸಂಸತ್ ಕಲಾಪ ನಡೆಯುವ ವೇಳೆ, ವಿಪಕ್ಷಗಳ ನಾಯಕರು ಸಂಸತ್‌ನೊಳಗೆ ಹೊಗೆ ಬಾಂಬ್‌ಗಳನ್ನು ಸ್ಪೋಟಿಸಿದ್ದಾರೆ. ಪರಿಣಾಮ, ಸಂಸತ್‌ನಲ್ಲಿ ಗದ್ದಲ ಉಂಟಾಗಿದ್ದು, ಕೆಲವು ಶಾಸಕರಿಗೆ ಗಾಯಗಳಾಗಿವೆ.
ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿರುವ ಸಂಸತ್ ಭವನದಲ್ಲಿ ಘಟನೆ ನಡೆದಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಡಿಯೋದಲ್ಲಿ, ವಿಪಕ್ಷಗಳ ಶಾಸಕರು ಸಂಸತ್ ಒಳಗೆ ಹೊಗೆ ಬಾಂಬ್‌ಗಳನ್ನು ಸ್ಪೋಟಿಸಿದ್ದು, ಬಣ್ಣದ ಹೊಗೆ ಆವರಿಸಿಕೊಂಡಿರುವುದು ಕಂಡುಬಂದಿದೆ.
2024ರಲ್ಲಿ ರೈಲು ನಿಲ್ಧಾಣದ ಮೇಲ್ಚಾವಣಿ ಕುಸಿದು ಬಿದ್ದು, ಸುಮಾರು 15 ಮಂದಿ ಮೃತಪಟ್ಟಿದ್ದರು. ಆ ಘಟನೆಗೆ ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರವೇ ಕಾರಣವೆಂದು ಆರೋಪಿಸಲಾಗಿತ್ತು. ಸರ್ಬಿಯಾದ ವಿದ್ಯಾರ್ಥಿಗಳು ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭಿಸಿದ್ದರು.
Serbia's parliament session erupts into chaos as opposition MPs set off flares and smoke grenades.pic.twitter.com/9QfWPxImRj
— Defiant L’s (@DefiantLs) March 4, 2025
ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ 2025ರ ಜನವರಿಯಲ್ಲಿ ಸರ್ಬಿಯಾ ಪ್ರಧಾನಿ ಮಿಲೋಸ್ ವುಸೆವಿಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯ ಕುರಿತು ಮಂಗಳವಾರ ಅಧಿವೇಶನದಲ್ಲಿ ಚರ್ಚೆ ನಡೆಯುವುದಿತ್ತು. ಅಧಿವೇಶನ ಆರಂಭವಾಗುತ್ತಿದ್ದಂತೆಯೇ, ವಿಪಕ್ಷಗಳ ಸದಸ್ಯರು ಹೊಗೆ ಬಾಂಬ್ ಸ್ಪೋಟಿಸಿದ್ದರಿಂದ ಗದ್ದಲ ಉಂಟಾಗಿತ್ತು.