ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗದೆ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು.
ಫ್ರೀಡಂ ಪಾರ್ಕ್‍ನಲ್ಲಿ ಬುಧವಾರ ನಡೆದ ‘ಎಸ್‍ಸಿಪಿ-ಟಿಎಸ್‍ಪಿ ಹಣ ದುರ್ಬಳಕೆ’ ವಿರೋಧಿಸಿ ಸರ್ಕಾರದ ವಿರುದ್ಧ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
“ದುಷ್ಟ, ದಲಿತ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ನಮ್ಮ ಹೋರಾಟ ನಿರಂತರವಾಗಿರಲು ಕೈಜೋಡಿಸಿ. ನಾಳೆ ಬೆಳಿಗ್ಗೆ ಇದೇ ಜಾಗದಲ್ಲಿ ಬೃಹತ್ ಹೋರಾಟ ನಡೆಯಲಿದೆ. ಎಲ್ಲರೂ ಭಾಗವಹಿಸಿ” ಎಂದು ಮನವಿ ಮಾಡಿದರು.
“ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದ ಹಣ ದುರ್ಬಳಕೆ ಮಾಡಿಲ್ಲ, ಮಾಡುವುದೂ ಇಲ್ಲ. ಈ ದಲಿತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಬಿಜೆಪಿ ಯಾವತ್ತೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಪರವಾಗಿದೆ” ಎಂದರು.
“ರಾಜ್ಯದ ಎಸ್‍ಸಿ, ಎಸ್‍ಟಿ ಸಮುದಾಯಗಳ ಹಣವನ್ನು ದುರುಪಯೋಗ ಮಾಡುವ ಕಾಂಗ್ರೆಸ್ ಸರಕಾರದ ವಿರುದ್ಧ 14 ತಂಡಗಳನ್ನು ರಚಿಸಿ ಜನಾಂದೋಲನ ರೂಪಿಸಲಾಗಿದೆ. ಚುನಾವಣೆ ಪೂರ್ವದಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯ ಸೇರಿ ಎಲ್ಲರಿಗೂ ನ್ಯಾಯ ಕೊಡುವುದಾಗಿ ಹಾಗೂ ಅಭಿವೃದ್ಧಿ ಮಾಡುವುದಾಗಿ ಕಾಂಗ್ರೆಸ್ ಹೇಳಿ ಅಧಿಕಾರಕ್ಕೆ ಬಂದಿದೆ”ಎಂದು ವಿವರಿಸಿದರು.
ಕಾರ್ಯಕರ್ತರಿಗೆ ಶಕ್ತಿ ತುಂಬುವ ಚುನಾವಣೆ
“ಬಿಬಿಎಂಪಿಯಲ್ಲಿ ಬಿಜೆಪಿ ಸ್ವಂತ ಶಕ್ತಿಯಲ್ಲಿ ಅಧಿಕಾರ ಪಡೆಯುವಂತಾಗಬೇಕಿದೆ. ಮುಂದಿನ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯು ಕಾರ್ಯಕರ್ತರಿಗೆ ಶಕ್ತಿ ತುಂಬಲಿದೆ. ನಾವೆಲ್ಲರೂ ಒಗ್ಗೂಡಿ ಕಾರ್ಯಕರ್ತರ ಚುನಾವಣೆ ಎದುರಿಸಿ ಗೆಲ್ಲಿಸಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದಣ್ಣ, ಲೂಟಿ ಗ್ಯಾರಂಟಿ ಅಣ್ಣ: ಆರ್. ಅಶೋಕ್
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, “ಸರಕಾರದಲ್ಲಿ ದುಡ್ಡಿಲ್ಲ, ಬೊಕ್ಕಸ ಖಾಲಿಯಾದ ಕಾರಣ ದಲಿತರ ಉದ್ಧಾರಕ್ಕೆ ಮೀಸಲಾಗಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿದ್ದಾರೆ. ನಾನು ಸಿದ್ದಣ್ಣ, ಲೂಟಿ ಗ್ಯಾರಂಟಿ ಅಣ್ಣ ಎಂಬಂತೆ ವರ್ತಿಸುತ್ತಿದ್ದಾರೆ” ಎಂದು ಟೀಕಿಸಿದರು.
“ರಾಜ್ಯವನ್ನು ಭಿಕ್ಷೆ ಬೇಡುವ ಸ್ಥಿತಿಗೆ ಸಿದ್ದರಾಮಯ್ಯನವರು ತಂದು ನಿಲ್ಲಿಸಿದ್ದಾರೆ. ಸಿದ್ದರಾಮಯ್ಯನವರು ಸಾಲದ ವಿಚಾರದಲ್ಲೂ ಚಾಂಪಿಯನ್. ಎಲ್ಲ ನಿಗಮ, ತಾಂಡಾ ಅಭಿವೃದ್ಧಿ ನಿಗಮಗಳಿಗೆ ಕನಿಷ್ಠ ಮೊತ್ತವನ್ನು ಈ ಮನೆಹಾಳ ಕಾಂಗ್ರೆಸ್ ಸರಕಾರ ನೀಡಿದೆ” ಎಂದು ಆರೋಪಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ದಲಿತರ ಹಣ ದುರ್ಬಳಕೆ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನ ರೂಪಿಸಿದೆ. ಬಿಜೆಪಿಯ ದಲಿತಪರ ಚಿಂತನೆ, ಅವರ ಪರವಾದ ಯೋಜನೆಗಳೇ ಕಾರಣ ಎಂದು ತಿಳಿಸಿದರು. ನಮ್ಮ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಈ ವಿಷಯವನ್ನು ತೀಕ್ಷ್ಣವಾಗಿ ಪರಿಗಣಿಸಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷ ತಲೆ ಎತ್ತಿ ತಿರುಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕಿಡಿಕಾರಿದರು.
ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಬೈರತಿ ಬಸವರಾಜ್, ಮಾನಪ್ಪ ವಜ್ಜಲ್, ಉದಯ್ ಗರುಡಾಚಾರ್, ರಘು, ಸಿಮೆಂಟ್ ಮಂಜು, ಭಾಗೀರಥಿ ಮರುಳಸಿದ್ದಯ್ಯ, ಮಾಜಿ ಶಾಸಕ ಹಾಲಪ್ಪ, ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ, ಮುಖಂಡರಾದ ತಮ್ಮೇಶ್ ಗೌಡ, ಶರಣು ತಳ್ಳಿಕೇರಿ, ಉಮೇಶ್ ಶೆಟ್ಟಿ, ರವೀಂದ್ರ, ನಗರದ 3 ಜಿಲ್ಲೆಗಳ ಅಧ್ಯಕ್ಷರಾದ ಹರೀಶ್, ರಾಮಮೂರ್ತಿ, ಸಪ್ತಗಿರಿ ಗೌಡ ಸೇರಿ ಇತರರು ಇದ್ದರು.