ಅಧಿಕಾರಿಗಳ ಅವೈಜ್ಞಾನಿಕ ಮಾದರಿಯ ಕಾನೂನುಗಳಿಂದಾಗಿ ಹಂಚಿನ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಿದ್ದು, ಸುಮಾರು 2 ಸಾವಿರ ಕಾರ್ಮಿಕ ಕುಟುಂಬಗಳು ಅತಂತ್ರವಾಗುವ ಆತಂಕದಲ್ಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಆವೆ ಮಣ್ಣಿನ ಗಣಿಗಾರಿಕೆ ನಡೆಸಲು ಇಲಾಖೆಗಳು ತುಂಬಾ ಸಮಸ್ಯೆಯನ್ನು ಮಾಡುತ್ತಿದೆ. ದಶಕಗಳಿಂದ ಇಲ್ಲದಿದ್ದ ನಿಯಮಗಳನ್ನು ಹೇರಿ ಕಾರ್ಖಾನೆ ಹಾಗು ಕಾರ್ಮಿಕರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿದ್ದಾರೆ. ಆವೆಮಣ್ಣಿನ ಗಣಿಗಾರಿಕೆಯನ್ನು ಫೆಬ್ರವರಿ, ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಇದಕ್ಕೂ ಪ್ರಾಯೋಗಿಕಾಗಿ ಸಾಧ್ಯವಲ್ಲದ ನೀತಿಗಳನ್ನು ಹೇರುತ್ತಿದ್ದಾರೆ.
ಶತಮಾನಗಳಿಂದ ಮಂಗಳೂರು ಹಂಚುಗಳನ್ನು ಕರಾವಳಿ ಭಾಗದಲ್ಲಿ ತಯಾರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಮಂಗಳೂರಿನಲ್ಲಿ 80, ಕುಂದಾಪುರದಲ್ಲಿ 17, ಉತ್ತರ ಕನ್ನಡ ಜಿಲ್ಲೆಯಲ್ಲಿ 16 ಕಾರ್ಖಾನೆಗಳು ಕಾರ್ಯಾಚರಿಸುತ್ತಿತ್ತು. ಆದರೆ ಆವಿ ಮಣ್ಣಿನ ಕೊರತೆ ಹಾಗು ಕಾರ್ಮಿಕರ ಕೊರತೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಮುಚ್ಚಲ್ಪಟ್ಟಿದೆ. ಕುಂದಾಪುರದಲ್ಲಿ ಕೇವಲ 9, ಮಂಗಳೂರಿನಲ್ಲಿ 4 ಕಾರ್ಖಾನೆಗಳು ಚಾಲ್ತಿಯಲ್ಲಿವೆ.

ಹಂಚಿನ ಕಾರ್ಖಾನೆಗೆ ಬೇಕಾದ ಆವೆ ಮಣ್ಣನ್ನು ಖಾಸಗಿ ಭೂಮಿಯಿಂದ ಮಾತ್ರ ತೆಗೆಯಲಾಗುತ್ತಿದೆ. ಈವರೆಗೂ ಸರ್ಕಾರಿ ಭೂಮಿಯಿಂದ ಆವೆ ಮಣ್ಣನ್ನು ತೆಗೆದಿಲ್ಲ. ರಾಯಧನದಿಂದ ಯಾವುದೇ ರಿಯಾಯತಿಯನ್ನು ಪಡೆದಿಲ್ಲ. ಆದರೆ ಏಕಾಏಕಿ ಉಡುಪಿ ಜಿಲ್ಲಾ ಖನಿಜ ಇಲಾಖೆ ನೀಡಿರುವ ಷರತ್ತಿನಂತೆ, ಇತರೆ ಇಲಾಖೆಗಳಿಂದ ಪರವಾನಿಗೆ ಪಡೆದು ಖನಿಜ ಇಲಾಖೆಗೆ ಸಲ್ಲಿಸಿ ಅವರಿಂದ ಆವೆಮಣ್ಣನ್ನು ತರಲು ಪರವಾನಿಗೆ ಪಡೆಯಲು ಅಸಾಧ್ಯವಾಗಿದೆ ಎಂದು ಹಂಚು ಮಾಲಿಕರು ತಿಳಿಸಿದ್ದಾರೆ.
ಅಧಿಕಾರಿಗಳು ಮರಳು, ಜಲ್ಲಿಕಲ್ಲಿನ ಗಣಿಗಾರಿಕೆಯಂತೆ ಆವೆಮಣ್ಣಿನ ಗಣಿಗಾರಿಕೆಯನ್ನು ಪರಿಗಣಿಸುವುದು ಸರಿಯಲ್ಲ. ಮರಳನ್ನು ಸಾಗಿಸಲು ಇರುವಂತೆ ಪರ್ಮಿಟ್ ಮಾದರಿಯನ್ನು ಅಳವಡಿಸಿಕೊಂಡು ಆವೆ ಮಣ್ಣನ್ನು ಸಾಗಿಸಲು ಅಸಾಧ್ಯ. ದಿನವೊಂದರಲ್ಲಿ ನೂರಾರು ಲಾರಿಗಳು ಓಡಾಟ ನಡೆಸುತ್ತವೆ. ಕುಂದಾಪುರ ಭಾಗದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಇರುವ 10 ಕಾರ್ಖಾನೆಗಳಿಗೇ ಮಣ್ಣು ಬರಲು ಸಾಧ್ಯವಾಗಿಲ್ಲ.

ಹಂಚಿನ ಕಾರ್ಖಾನೆಗಳಿಗೆ ಇಡೀ ವರ್ಷಕ್ಕೆ ಬೇಕಾಗುವ ಆವೆ ಮಣ್ಣನ್ನು ಫೆಬ್ರವರಿ, ಮಾರ್ಚ್,ಎಪ್ರಿಲ್ ತಿಂಗಳಲ್ಲಿ ಮಾತ್ರ ಸಂಗ್ರಹಿಸಲು ತೆಗೆಯಲು ಸಾಧ್ಯ. ಉಳಿದ ತಿಂಗಳಲ್ಲಿ ಮಳೆಯಿಂದಾಗಿ ಆವೆಮಣ್ಣು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.
ಮಂಗಳೂರು ಜೇಡಿಮಣ್ಣಿನ ಹೆಂಚು ಮತ್ತು ಇಟ್ಟಿಗೆ ಉದ್ಯಮವು ಭಾರತದಲ್ಲಿ ಮೊದಲ ಭಾರಿಗೆ 1865ರಲ್ಲಿ (ಸುಮಾರು 156 ವರ್ಷಗಳ ಹಿಂದೆ) ಮಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ಭಾರತದ ಹಲವು ಭಾಗಗಳಿಗೆ ಪ್ರವರ್ಧಮಾನಕ್ಕೆ ಬಂದು ವಿಸ್ತರಿಸಲ್ಪಟ್ಟಿತ್ತು. ಮಂಗಳೂರು ಹಂಚು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಪ್ರಸಿದ್ಧವಾಗಿದೆ.
ಹಂಚಿನ ಕಾರ್ಖಾನೆಗಳ ಪ್ರಾರಂಭದಿಂದಲೂ ಯಾವುದೇ ಸಮಸ್ಯೆಯಿಲ್ಲದೆ ರಾಯಧನವನ್ನು ಪಾವತಿಸಲು ಒತ್ತಾಯಿಸಿದಾಗ, ಹಂಚು ತಯಾರಕರು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಒಮ್ಮತ ನಿರ್ಧಾರದಿಂದ ಕಾರ್ಖಾನೆಗಳಲ್ಲಿ ಬಳಸುವ ಮಣ್ಣಿಗೆ ವಾರ್ಷಿಕ ರಾಯಧನವನ್ನು ಪಾವತಿಸುತ್ತೇವೆ. ಪ್ರತಿ ಕಾರ್ಖಾನೆಯ ಉತ್ಪಾದನೆ ಮತ್ತು ಪ್ರದೇಶದ ಸಂಬಂಧಪಟ್ಟ ಹಂಚು ತಯಾರಕರ ಸಂಘವು ಪ್ರತಿ ಕಾರ್ಖಾನೆಯು ಅವುಗಳ ಉತ್ಪಾದನೆಯ ಆಧಾರದ ಮೇಲೆ ಪಾವತಿಸಬೇಕಾದ ರಾಯಧನದ ಪ್ರಮಾಣವನ್ನು ನಿಗದಿಸಿಪಡಿತು ಮತ್ತು ಮಣ್ಣಿನ ಉತ್ಪನನವು ಬಹಳ ಸುಗಮವಾಗಿ ನಡೆಯುತ್ತಿತ್ತು.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಕುಂದಾಪುರ ಹಂಚು ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಟಿ ಸೋನ್ಸ್ ಪ್ರಾಚೀನ ಕಾಲದ ಹಂಚು ಮತ್ತು ಇಟ್ಟಿಗೆ ಕಾರ್ಖಾನೆಗಳು ರಾಜ್ಯದ ಬೆನ್ನೆಲುಬು ಮತ್ತು ಒಂದೂವರೆ ಶತಮಾನಗಳಿಂದ ರಾಜ್ಯ ಮತ್ತು ದೇಶದ ಬೊಕ್ಕಸಕ್ಕೆ ಕೊಡುಗೆ ನೀಡಿವೆ ಮತ್ತು ನೇರವಾಗಿ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗವನ್ನು ಪ್ರತ್ಯಕ್ಷವಾಗಿ ಹಾಗೊ ಪರೋಕ್ಷವಾಗಿ ಒದಗಿಸಿವೆ. ಕಳೆದ ಹಲವಾರು ವರ್ಷಗಳಿಂದ ಹಂಚಿನ ಕಾರ್ಖಾನೆಯನ್ನು ನಡೆಸುತ್ತಿದ್ದೇನೆ ಯಾವುದೇ ಸಮಸ್ಯೆಗಳು ಇರಲಿಲ್ಲ ಆದರ ಇತ್ತೀಚಿನ ದಿನಗಳಲ್ಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಖಾಸಗಿ ಭೂಮಿಯಿಂದ ಜೇಡಿಮಣ್ಣು ಅಗೆಯಲು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ, ಇದರಿಂದಾಗಿ ಅನೇಕ ಹಂಚಿನ ಕಾರ್ಖಾನೆಗಳು ಈಗಾಗಲೇ ಸ್ಥಗಿತಗೊಂಡಿದೆ ಎಂದು ಹೇಳಿದರು.
ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ 2025 ರ ಫೆಬ್ರವರಿ 25 ರಂದು ಲಿಖಿತವಾಗಿ ಮನವಿಯನ್ನು ಸಲ್ಲಿಸಿದ್ದೇವೆ. ಜೊತೆಗೆ ಮಾನ್ಯ ಗೌರವಾನ್ವಿತ ಸಚಿವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಾನ್ಯ ಗೌರವಾನ್ವಿತ ಸಚಿವರು ಕಾರ್ಮಿಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಉಡುಪಿ ಜಿಲ್ಲೆ, ಕಾರ್ಮಿಕ ಅಧಿಕಾರಿಗಳು, ಉಡುಪಿ ಜಿಲ್ಲೆ ಮನವಿಯನ್ನು ಸಲ್ಲಿಸಲಾಗಿದ್ದು, ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಹೇಳಿದರು.
