ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ಸರ್ಕಾರ ಮುಂದಾಗಿದ್ದು ಈಗಾಗಲೇ 4 ಸಾವಿರ ಲ್ಯಾಪ್ಟಾಪ್ ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಪ್ರಶೋತ್ತರ ವೇಳೆ ಬಿಜೆಪಿಯ ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಲ್ಯಾಪ್ಟಾಪ್ ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿದೆ” ಎಂದರು.
“ಗ್ರಾಮ ಆಡಳಿತ ಅಧಿಕಾರಿಗಳಿಗೆ ಒದಗಿಸುವ ಛಾವಡಿಗಳು ಕಂದಾಯ ಇಲಾಖೆಯ ಸುಪರ್ಧಿಗೆ ಸೇರಿರುತ್ತವೆ; ಈ ಛಾವಡಿಗಳು ಶಿಥಿಲಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅವುಗಳ ಪುನರ್ ನಿರ್ಮಾಣ ಮಾಡಲು ಪರಿಶೀಲಿಸಲಾಗುವುದು” ಎಂದು ತಿಳಿಸಿದರು.
“ವಿಜಯಪುರ ಜಿಲ್ಲೆಯಲ್ಲಿ 82 ಗ್ರಾಮ ಛಾವಡಿಗಳು ಇರುತ್ತವೆ ಹಾಗೂ 126 ಗ್ರಾಮಗಳಲ್ಲಿ ಗ್ರಾಮ ಛಾವಡಿಗಳು ಇರುವುದಿಲ್ಲ; ಗ್ರಾಮ ಛಾವಡಿಗಳನ್ನು ನಿರ್ಮಿಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಲಾಗುವುದು” ಎಂದರು.
“ಗ್ರಾಮ ಪಂಚಾಯ್ತಿಯ ಆಡಳಿತ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ದಾಖಲೆಗಳನ್ನು ಸಂರಕ್ಷಿಸಿಕೊಳ್ಳಲು ಅವರಿಗೆ ಕಪಾಟುಗಳನ್ನು ಒದಗಿಸಲಾಗಿದೆ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಜೊತೆಗೆ ಪ್ರಯಾಣ ಭತ್ಯೆಗಳನ್ನು ಒದಗಿಸಲಾಗುತ್ತಿದೆ” ಎಂದು ತಿಳಿಸಿದರು.