ವೃತ್ತಿಯಲ್ಲಿ ವೈದ್ಯೆಯಾಗಿರುವ ಯುವತಿಯೊಬ್ಬಳ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅದನ್ನು ಆಕೆಯ ತಂದೆಗೆ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿರುವ ಕಿರಾತಕನ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯುವತಿಯ ಫೋಟೊವನ್ನು ಅಸಭ್ಯವಾಗಿ ಎಡಿಟ್ ಮಾಡಿ ಅದನ್ನು ಆಕೆಯ ತಂದೆಗೇ ವಾಟ್ಸಾಪ್ ಮಾಡಿರುವ ವಿಕೃತನೊಬ್ಬ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಯುವತಿಯ ತಂದೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇತ್ತೀಚೆಗಷ್ಟೇ ಎಂಬಿಬಿಎಸ್ ಮುಗಿಸಿ ಉದ್ಯೋಗ ಆರಂಭಿಸಿದ್ದ ಯುವತಿಗೆ ಅಪರಿಚಿತ ಕರೆಯೊಂದು ಬಂದಿದ್ದು, ನೀವು ಆನ್ಲೈನ್ನಲ್ಲಿ 5 ಸಾವಿರ ಸಾಲ ಪಡೆದಿದ್ದೀರಿ. ಅದನ್ನು ವಾಪಸ್ ಕಟ್ಟಬೇಕು ಎಂದು ಬೆದರಿಕೆ ಹಾಕಲಾಗಿದೆ. ಆದರೆ, ಯುವತಿ, ನಾನು ಯಾವುದೇ ಸಾಲ ಪಡೆದಿಲ್ಲ. ಹಾಗಾಗಿ ಯಾವುದೇ ಹಣ ಕಟ್ಟುವುದಿಲ್ಲ ಎಂದು ಹೇಳಿದ್ದರು.
ಚಿಂತಾಮಣಿ ನಗರದ ಕನಂಪಲ್ಲಿ ನಿವಾಸಿಯಾಗಿರುವ ಈ ಯುವ ವೈದ್ಯೆ ಹಲವು ದಿನಗಳ ಹಿಂದೆ ನಕಲಿ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿದ್ದು ನಿಜವಾದರೂ ಯಾವುದೇ ಹಣ ಪಡೆದಿರಲಿಲ್ಲ. ಆರಂಭದಲ್ಲಿ ಹಣ ಪಡೆಯುವಂತೆ ಒತ್ತಡ ಹೇರಿದ ಕಿರಾತಕರು ಬಳಿಕ, ಹಣ ಪಡೆದಿದ್ದೀರಿ ವಾಪಸ್ ಕೊಡಿ ಎಂದು ಒತ್ತಡ ಹೇರಲು ಆರಂಭಿಸಿದ್ದಾರೆ. ಆದರೆ, ಆಕೆ ಹಣ ಮರಳಿ ಪಾವತಿಸುವ ಪ್ರಮೇಯವೇ ಇಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು ಎನ್ನಲಾಗಿದೆ.
“ನಿಮ್ಮ ಅಶ್ಲೀಲ ಫೋಟೊ ನಮ್ಮ ಬಳಿ ಇದೆ. ಅದನ್ನು ನಿಮ್ಮ ಮನೆಯವರು, ಸ್ನೇಹಿತರಿಗೆಲ್ಲ ಕಳುಹಿಸುತ್ತೇನೆʼʼ ಎಂದು ಆಕೆಗೆ ತಿಳಿಸಿದ್ದಾರೆ. ಆದರೆ, ತಮ್ಮ ಫೋಟೊ ಅವರಿಗೆ ಹೇಗೆ ಸಿಗುತ್ತದೆ, ತಾನು ಆ ರೀತಿ ನಡೆದುಕೊಂಡಿದ್ದೇ ಇಲ್ಲ ಎಂದು ಯುವ ವೈದ್ಯೆ ಧೈರ್ಯವಾಗಿದ್ದರು.
ಕಿರಾತಕನೊಬ್ಬ ವೈದ್ಯೆಯ ಅಸಭ್ಯ ಫೋಟೊ ಒಂದನ್ನು ಯುವತಿಯ ತಂದೆಯ ವಾಟ್ಸಾಪ್ಗೆ ಶೇರ್ ಮಾಡಿದ್ದಾನೆ. ಇದು ಅಶ್ಲೀಲವಾಗಿ ಎಡಿಟ್ ಮಾಡಿರುವ ಫೋಟೊ ಆಗಿದ್ದು, ಗೊತ್ತೇ ಆಗದಂತೆ ಎಡಿಟ್ ಮಾಡಲಾಗಿದೆ ಎನ್ನಲಾಗಿದೆ. ಜತೆಗೆ ಮನೆಯವರು, ಸಂಬಂಧಿಕರಿಗೂ ಈ ಫೋಟೊಗಳನ್ನು ಸೈಬರ್ ಕಳ್ಳ ಕಳುಹಿಸಿದ್ದಾನೆ. ಇದೀಗ ಯುವತಿಯ ತಂದೆ ಚಿಕ್ಕಬಳ್ಳಾಪುರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಸೌಜನ್ಯ ಪ್ರಕರಣ : 11 ವರ್ಷಗಳ ಬಳಿಕ ಆರೋಪಿ ದೋಷಮುಕ್ತ
ವೈದ್ಯೆಯ ಅಶ್ಲೀಲ ಫೋಟೊ ಎಡಿಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದು ಸೈಬರ್ ಕಳ್ಳರ ಅಥವಾ ಬೇರೆ ಯಾರೋ ಪರಿಚಿತರು ಈ ಕೃತ್ಯ ನಡೆಸುತ್ತಿದ್ದಾರ ಎಂಬ ಬಗ್ಗೆಯೂ ಸಂಶಯವಿದೆ. ಈ ಕಿರಾತಕ ಕೇವಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಯುವತಿಯ ಫೋಟೊ ಅಪ್ಲೋಡ್ ಮಾಡುತ್ತಿಲ್ಲ. ಬದಲಾಗಿ ಯುವತಿಯ ಸಂಬಂಧಿಕರಿಗೆಲ್ಲ ಫೋಟೊ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ.