- ಜಗಳ ಮಾಡಿಕೊಂಡು ಬೇರೆ ಮನೆಯಲ್ಲಿ ವಾಸವಾಗಿದ್ದ ಗಂಡ-ಹೆಂಡತಿ
- ಘಟನೆಯನ್ನು ಕಣ್ಣಾರೆ ಕಂಡ ವಿದ್ಯಾರಣ್ಯಪುರ ಸಬ್ ಇನ್ಸ್ ಪೆಕ್ಟರ್
ದಂಪತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ಹೆಂಡತಿ ಜತೆ ಜಗಳ ಮಾಡಿಕೊಂಡ ಪತಿ ತನ್ನ ಮಗನನ್ನೇ ಕಿಡ್ನಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಂಡ-ಹೆಂಡತಿ ಇಬ್ಬರು ಜಗಳ ಮಾಡಿಕೊಂಡು ಬೇರೆ ಮನೆಯಲ್ಲಿ ವಾಸವಾಗಿದ್ದರು. ಜೂನ್ 16ರ ಶುಕ್ರವಾರ ಬೆಳಗ್ಗೆ ಜಿಕೆವಿಕೆ ಬಳಿ ಶಾಲೆಗೆ ತಾಯಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಎರಡು ಆಟೋಗಳು ಬಂದು ಅವರನ್ನು ಅಡ್ಡಗಟ್ಟಿದವು. ಒಂದು ಆಟೋದಲ್ಲಿ ಆಕೆಯ ಗಂಡ ಹಾಗೂ ಇನ್ನೊಂದು ಆಟೋದಲ್ಲಿ ಮೂವರು ಮಹಿಳೆಯರಿದ್ದರು.
ಇತ್ತ ಕಡೆ ಮಹಿಳೆಯರು ಮಗುವಿನ ತಾಯಿಯೊಂದಿಗೆ ವಾಗ್ವಾದ ನಡೆಸುತ್ತಿದ್ದಾಗ ಮಗುವನ್ನು ಎಳೆದುಕೊಂಡ ಪುರುಷ ತಾನು ಬಂದ ಆಟೋದಲ್ಲಿ ಹೋಗಿದ್ದಾನೆ.
ನೈಟ್ ಡ್ಯೂಟಿ ಮುಗಿಸಿ ವಿದ್ಯಾರಣ್ಯಪುರ ಸಬ್ ಇನ್ಸ್ ಪೆಕ್ಟರ್ ಶುಕ್ರವಾರ ಬೆಳಗ್ಗೆ ಮನೆ ಕಡೆಗೆ ತೆರಳುತ್ತಿದ್ದರು. ಇದನ್ನು ಕಣ್ಣಾರೆ ಕಂಡ ಅವರು ಕೂಡಲೇ ಹೊಯ್ಸಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಮತ್ತೊಂದು ಆಟೋದಲ್ಲಿ ಪರಾರಿಯಾಗುತ್ತಿದ್ದ ಮೂವರು ಮಹಿಳೆಯರು ಹಾಗೂ ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ₹118 ಕೋಟಿ ಅಕ್ರಮ ಕಾಮಗಾರಿ : 8 ಎಂಜಿನಿಯರ್ ಅಮಾನತು
ಈ ಘಟನೆ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ತನ್ನ ಮಗುವನ್ನು ತಂದೆಯೇ ತಾಯಿಯಿಂದ ಕರೆದೊಯ್ದಿದ್ದು, ಇದು ಅಪಹರಣ ಎಂದು ತಾಯಿ ಆರೋಪಿಸಿದ್ದಾರೆ. ಸದ್ಯ ಕೋಡಿಗೆಹಳ್ಳಿ ಪೊಲೀಸರಿಂದ ಮಗು ಕರೆದೊಯ್ದ ತಂದೆ ಬಗ್ಗೆ ಮಾಹಿತಿ ಕಲೆಹಾಕುತಿದ್ದಾರೆ.