ಔರಾದ್ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಖಾಲಿ ನಿವೇಶನದಲ್ಲಿ ತಾತ್ಕಾಲಿಕ ಗುಡಿಸಲಿನಲ್ಲಿ ವಾಸಿಸುತ್ತಿರುವ ಅಲೆಮಾರಿ, ಅರೆ ಅಲೆಮಾರಿ ಗೊಂದಳಿ, ಜೋಷಿ, ಬುಡಬುಡಕೆ, ಗೋಸಾಯಿ ಜನಾಂಗದ ಕಾಲೊನಿಗೆ ಬುಧವಾರ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದರು.
ʼಅಲ್ಲಪ್ಪಾ.! ನಾವು ಬೆಂಗಳೂರಿನಿಂದ ಬೀದರ್ ಜಿಲ್ಲೆಯ ಗಡಿ ತಾಲ್ಲೂಕಿಗೆ ಬಂದರೂ ಸ್ಥಳೀಯ ಅಧಿಕಾರಿಗಳು ಒಬ್ರೂ ಬರೋದಿಲ್ಲ ಅಂದ್ರೆ ಹ್ಯಾಂಗಪ್ಪಾ. ಯಾವುದೇ ವರದಿ ಸಿದ್ದಪಡಿಸಿಕೊಂಡು ಬಂದಿಲ್ಲ, ಈ ಅಲೆಮಾರಿ ಸಮುದಾಯಕ್ಕೆ ಏನು ಅಭಿವೃದ್ಧಿ ಮಾಡಿದ್ದೀರಾ. ನಾವು ಬಂದಾಗಲೇ ನೀವು ಬರೋದಿಲ್ಲಾಂದ್ರೆ ನೀವು ಸಾಮಾನ್ಯ ಸಂದರ್ಭದಲ್ಲಿ ಈ ಧ್ವನಿಯಿಲ್ಲದ ಸಮುದಾಯದ ಬಳಿ ಬಂದು ಏನು ಮಾಡ್ತೀರಾʼ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ʼಅಲೆಮಾರಿ ವಾಸಿಸುವ ಸ್ಥಳಕ್ಕೆ ಭೇಟಿ ನೀಡಿದಾಗ ಅಲೆಮಾರಿ ಸಮುದಾಯದ ಮಾಹಿತಿ ನೀಡಲು ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕಾಧಿಕಾರಿ ಇರದೇ ಇರುವುದನ್ನು ನೋಡಿದ ಅವರು ʼಸಮಾಜ ಕಲ್ಯಾಣ ಅಧಿಕಾರಿ ಎಲ್ಲಿದ್ದಾರೆ ಕರೆಯಿರಿ. ಯಾಕೆ ಬಂದಿಲ್ಲ?ʼ ಎಂದು ಸ್ಥಳದಲ್ಲಿ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಕೇಳಿದರು. ಅದಕ್ಕೆ ತಹಸೀಲ್ದಾರ್ ಅವರು ʼಹೇಳಿದ್ದೇನೆ ಮೇಡಂ ಅವರು ಬಂದಿಲ್ಲʼ ಎಂದು ಉತ್ತರ ಬಂತು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ನಾಗಲಕ್ಷ್ಮೀ ಅವರು ಈ ಮೇಲಿನಂತೆ ಪ್ರಶ್ನಿಸಿದರು.

ʼತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರು ಕರೆ ಮಾಡಿ ಬೇಗ ಬರುವಂತೆ ತಿಳಿಸಿದ ನಂತರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅನೀಲಕುಮಾರ್ ಮೆಲ್ದೊಡ್ಡಿ ಅವರು ಸ್ಥಳಕ್ಕೆ ಧಾವಿಸಿದರು.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಅಲೆಮಾರಿ ಕುಟುಂಬಸ್ಥರೊಂದಿಗೆ ಗುಡಿಸಲು ಎದುರುಗಡೆಯ ನೆಲದ ಮೇಲೆ ಕುಳಿತುಕೊಂಡರು, ಅವರೊಂದಿಗೆ ತಹಶೀಲ್ದಾರ್ ಸೇರಿದಂತೆ ಇತರ ಅಧಿಕಾರಿಗಳು ಕೆಳಗಡೆ ಕುಳಿತರು. ಅಲೆಮಾರಿ ಜನಾಂಗದ ನಿವೇಶನ, ಮೂಲಸೌಕರ್ಯ ಕುರಿತು ಅಧಿಕಾರಿಗಳಿಂದ ಸುದೀರ್ಘವಾಗಿ ಮಾಹಿತಿ ಕಲೆ ಹಾಕಿದರು.
ʼಸುಮಾರು ಎರಡ್ಮೂರು ದಶಕದಿಂದ ನಿವೇಶನ ಸೇರಿದಂತೆ ಕನಿಷ್ಠ ಮೂಲ ಸೌಕರ್ಯದಿಂದ ವಂಚಿತರಾಗಿ ಜೀವನ ದೂಡುತ್ತಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಜಾಗ ಕೊಡ್ತೀವಿ, ಮನೆ ಕೊಡ್ತೀವಿ ಎಂದು ಹೇಳುತ್ತಲೇ ಇದ್ದಾರೆ. ಹೊರತು ಇಲ್ಲಿಯವರೆಗೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಅಲೆಮಾರಿ ಸಮುದಾಯದ ಮಹಿಳೆಯರು ಗೋಳು ತೋಡಿಕೊಂಡರು.
ʼಇಲ್ಲಿನ ಅಲೆಮಾರಿ ಜನಾಂಗದ ವಸತಿಗಾಗಿ 2018ರಲ್ಲಿ ಎರಡು ಎಕರೆ ಜಮೀನು ಮಂಜೂರಾದರೂ ಇಲ್ಲಿಯವರೆಗೆ ಯಾಕೆ ಹಂಚಿಕೆ ಮಾಡಿಲ್ಲ ಎಂದು ಅಧಿಕಾರಿಗಳಿಗೆ ಕೇಳಿದರು.
ʼಈ ಹಿಂದೆ ಸರ್ವೇ ನಂ 183ರಲ್ಲಿ ಎರಡು ಎಕರೆ ಮಂಜೂರಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಅದರ ಬದಲಾಗಿ ಬೇರೆ ಜಾಗ ಮಂಜೂರಾಗಿದೆʼ ಎಂದು ತಹಸೀಲ್ದಾರ್ ಸಮಜಾಯಿಸಿ ನೀಡಿದರು. ಅದಕ್ಕೆ ಕೋಪಗೊಂಡ ನಾಗಲಕ್ಷ್ಮೀ ಅವರು ಇಷ್ಟು ವರ್ಷಗಳ ಕಾಲ ಜಾಗ ಕೊಡಿಸದೇ ನಿರ್ಲಕ್ಷ್ಯ ತೋರಿದಿರಲ್ಲ, ಕನಿಷ್ಠ ಮೂಲ ಸೌಕರ್ಯ ಇಲ್ಲದೇ ಇರುವ ಇಂತಹ ಗುಡಿಸಲಲ್ಲಿ ನೀವು ವಾಸಿಸುವೀರಾʼ ಎಂದು ಪ್ರಶ್ನೆಗಳ ಸುರಿ ಮಳೆಗೆ ಎಲ್ಲ ಅಧಿಕಾರಿಗಳು ತಬ್ಬಿಬ್ಬಾದರು.

ಮಧ್ಯಾಹ್ನ 2 ಗಂಟೆಗೆ ಔರಾದ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲಿಂದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿ, ಆಸ್ಪತ್ರೆಯಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಕೊನೆಗೆ ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ಅಲ್ಲಿನ ಸೌಕರ್ಯ ಬಗ್ಗೆ ವಿದ್ಯಾರ್ಥಿನಿಯರೊಂದಿಗೆ ಮುಕ್ತವಾಗಿ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,ʼಬಾಲಕಿಯರ ವಸತಿ ನಿಲಯದಲ್ಲಿ ಊಟ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಇತರೆ ಅವ್ಯವಸ್ಥೆ ಕಂಡು ಬಂದಿದ್ದು, ಅಸ್ವಚ್ಛತೆಯಿಂದ ಕೂಡಿದ ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸಿ ಸ್ನಾನ ಮಾಡುತ್ತೇವೆಂದು ವಿದ್ಯಾರ್ಥಿನಿಯರು ಹೇಳಿದ್ದಾರೆ’ ಎಂದರು.
‘ಇಲ್ಲಿನ ವಸತಿ ನಿಲಯ ಅವ್ಯವಸ್ಥೆ ಬಗ್ಗೆ ನಾನು ಅಲ್ಪಸಂಖ್ಯಾತರ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವೆʼ ಎಂದರು.
ʼಔರಾದ್ ತಾಲ್ಲೂಕು ಆಸ್ಪತ್ರೆ ಭೇಟಿ ನೀಡಿದ ವೇಳೆ ಅಲ್ಲಿನ ವೈದ್ಯರ ಬಗ್ಗೆ ಉತ್ತಮ ಪ್ರತಿಕ್ರಿಯೆ ಇದೆ. ಆದರೆ ನೀರು, ಶೌಚಾಲಯ ಸೇರಿದಂತೆ ಸಿಬ್ಬಂದಿ ಕೊರತೆ ಇರುವ ಬಗ್ಗೆ ಕಂಡು ಬಂದಿರುವುದಾಗಿ ತಿಳಿಸಿದರು.
ʼಅಲೆಮಾರಿ ಸಮುದಾಯಕ್ಕೆ ಮೊದಲೇ ಧ್ವನಿಯಿಲ್ಲ. ಹೀಗಾಗಿ ಸ್ಥಳೀಯವಾಗಿ ಇರುವ ಸಂಬಂಧಪಟ್ಟ ಅಧಿಕಾರಿಗಳು ಇಚ್ಚಾಶಕ್ತಿ ತೋರಿದರೆ ಮಾತ್ರ ಆ ಸಮುದಾಯಕ್ಕೆ ನ್ಯಾಯ ಸಿಗುತ್ತದೆ. ಎಲ್ಲ ಅಧಿಕಾರಿಗಳ ಬಗ್ಗೆ ಅಸಮಾಧಾನ ಕಂಡು ಬಂದಿದ್ದು, ನಾಳೆ ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿರುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚರ್ಚಿಸುವೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಎಪಿಎಂಸಿಗೆ 80 ಎಕರೆ ಜಮೀನು ನೀಡಲು ಪತ್ರ
ತಾಲ್ಲೂಕು ಪಂಚಾಯಿತಿ ಇಒ ಮಾಣಿಕರಾವ್ ಪಾಟೀಲ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರವೀಂದ್ರ ಮೇತ್ರೆ, ಸಮಾಜ ಇಲಾಖೆ ಅಧಿಕಾರಿ ಅನೀಲಕುಮಾರ್ ಮೇಲ್ದೊಡ್ಡಿ, ಸಿಡಿಪಿಒ ಇಮಲಪ್ಪಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿದೇವಿ, ಸಿಪಿಐ ರಘುವೀರ್ ಸಿಂಗ್ ಠಾಕೂರ್, ಪಿಎಸ್‌ಐ ವಸೀಂ ಪಟೇಲ್, ಅಲೆಮಾರಿ ಸಮುದಾಯದ ಮುಖಂಡ ನಾಗನಾಥ ವಾಕೋಡೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘಟನೆಗಳ ಮುಖಂಡರು ಹಾಜರಿದ್ದರು.