ನಮ್ಮ ತಾಲೂಕಿನ ಶಾಸಕರು ಮಾರಿ ಜಾತ್ರೆಗೆ ಫ್ಲೆಕ್ಸ್ ಹಾಕಿದ ಹಾಗೆ ಹಾಕಿಸಿಕೊಂಡು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂತಿಷ್ಟೇ ಫ್ಲೆಕ್ಸ್ ಹಾಕಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಎಂದು ಸಾಗರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾರೇ ಆಗಲಿ ಇತಿಮಿತಿಗಳನ್ನು ಇಟ್ಟುಕೊಂಡು ಹುಟ್ಟುಹಬ್ಬ ಆಚರಿಸಬೇಕು. ಆದರೆ ಶಾಸಕ ಗೋಪಾಲಕೃಷ್ಣ ಅವರು ಸರ್ಕಾರಿ ನೌಕರರಿಗೆ, ಗುತ್ತಿಗೆದಾರರಿಗೆ ವಾರ್ನಿಂಗ್ ಕೊಟ್ಟು ಫ್ಲೆಕ್ಸ್ ಹಾಕಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಎಷ್ಟು ಸರಿ ಎಂದರು.
ಮುಂದುವರೆದು ಹೊಸನಗರದಲ್ಲಿ ಶಿಕ್ಷಣ ಸಚಿವರು ವೇದಿಕೆಯಲ್ಲಿ ಭಾಷಣ ಮಾಡುವಾಗ ಶಾಸಕ ಗೋಪಾಲಕೃಷ್ಣ ಅವರನ್ನು ಮಾಜಿ ಸಿಎಂ ಬಂಗಾರಪ್ಪನವರಿಗೆ ಹೋಲಿಸಿದ್ದಾರೆ. ಇದು ಅನೇಕ ಬಂಗಾರಪ್ಪನವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ತಾಲೂಕಿನಾದ್ಯಂತ ದುರಾಡಳಿತ ಹಾಗೂ ಅಧಿಕಾರದ ದಬ್ಬಾಳಿಕೆ ತಾಂಡವವಾಡುತ್ತಿದೆ. ನಗರಸಭೆ ಚುನಾವಣೆಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ಎದುರಿಗೆ ಶಾಸಕರು ವಿರೋಧ ಪಕ್ಷದ ನಾಯಕರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ನೇರವಾಗಿ ಎಫ್ ಐ ಆರ್ ಹಾಕಬೇಕಾಗಿತ್ತು, ಆದರೆ ಹಾಕಲಿಲ್ಲ ಎಂದು ಆರೋಪಿಸಿದರು. ಗೋಪಾಲಕೃಷ್ಣ ಬೇಳೂರು ತಮ್ಮ ಶೋಕಿಗಾಗಿ ಹೋಂ ಮಿನಿಸ್ಟರ್ ಸಹ ಉಪಯೋಗಿಸದ ಹಾಗೆ ಎಸ್ಕಾರ್ಟ್ ಸೇವೆಗಳನ್ನು ಬಳಸಿಕೊಂಡು ಸಾರ್ವಜನಿಕ ಹಣವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಸಾಗರ | ಜನರಿಗೆ ಮೂಲ ಸೌಕರ್ಯ ಒದಗಿಸುವುದೇ ಗ್ರಾಮ ಪಂಚಾಯತಿಗಳ ಉದ್ದೇಶ
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ರೂಪ ನಾಗರಾಜ್, ಗೌತಮಪುರ ಗ್ರಾಂ.ಪಂ ಸದಸ್ಯ ಪರಮೇಶ್, ಶಕ್ತಿ ಕೇಂದ್ರ ಅಧ್ಯಕ್ಷ ಶಾಂತಪ್ಪ, ಮಾಮ್ ಕೋಸ್ ನಿರ್ದೇಶಕ ಭರ್ಮಪ್ಪ ಹಾಗೂ ದೇವು ಬೀಸನ ಗದ್ದೆ, ಶ್ರೀಧರ ಸಂಪಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.
