ಲಿಂಗ ಸಮಾನತೆಯ ಜಗತ್ತನ್ನು ನಿರ್ಮಿಸುವ ಮಹಿಳೆಯರ ಜತೆಗೆ ಹೆಜ್ಜೆಹಾಕಲು ಪುರುಷರ ಬೆಂಬಲ ಅಗತ್ಯವಿದೆ ಎಂದು ಬಾರ್ಲಿಯಾನ್ ವಿಶ್ವವಿದ್ಯಾಲಯ, ಇಸ್ರೇಲ್ ಸ್ಕೂಲ್ ಆಫ್ ಬ್ಯುಸಿನೆಸ್, ಎಕ್ಸೆಟರ್ ವಿಶ್ವವಿದ್ಯಾಲಯ, ಯುಕೆ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ರೋನಿತ್ ಕಾರ್ಕ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ವಿಭಾಗವು ಮಾರ್ಚ್ 4ರಂದು ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದು ಕೂಡಿ ಕಲಿಯುವುದು; ಸಂಘಟನೆ/ಸಂಸ್ಥೆಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವುದರಲ್ಲಿ ಪುರುಷರ ಸಹಭಾಗಿತ್ವ ಎನ್ನುವ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು.
“ನಾವೆಲ್ಲರೂ ಸಮಸ್ಯೆಯ ಭಾಗವಾಗಿದ್ದೇವೆ. ಅದನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಪ್ರಮುಖವಾಗಿ ಸ್ತ್ರೀಲಿಂಗ ವಿಷಯಗಳಿಗೆ ಸಂಬಂಧಿಸಿದ ಕ್ರಿಯಾಶೀಲತೆಯ ನಿರ್ದಿಷ್ಟ ಕ್ಷೇತ್ರಗಳಿವೆ” ಎಂದರು.
“ಸೀಮಿತ ಜ್ಞಾನ ಮತ್ತು ಅನುಭವದಿಂದಾಗಿ ಪುರುಷರು ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನೂ ಒಂದು ಹೆಣ್ಣಿಗೆ ಮನೆಯಲ್ಲಿ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ಸಿಕ್ಕರೂ ಹೊರಗಡೆ ಪ್ರೋತ್ಸಾಹ ಸಿಗುವುದು ಕಡಿಮೆ. ಅನಾದಿಕಾಲದಿಂದಲೂ ಹೆಣ್ಣಿಗೆ ಗಂಡಿನ ಜತೆ ಬದುಕುವುದು ಅನಿವಾರ್ಯವಾಗಿದೆ. ಅವಳನ್ನು ಪ್ರೋತ್ಸಾಹ ಮಾಡುವ ನೆಪದಲ್ಲಿ, ʼನೀನು ಏನೇ ಮಾಡು ನಾವು ಹಿಂದೆ ಇರುತ್ತೇವೆʼ’ ಎಂದು ಹೇಳುವ ಮೂಲಕ ಅವಳ ಸ್ವತಂತ್ರ ಆಲೋಚನೆಯನ್ನು ಕಸಿದುಕೊಳ್ಳುವ ಯತ್ನಗಳು ನಡೆಯುತ್ತಿವೆ. ಅವರು ಎಲ್ಲೇ ಇದ್ದರೂ ಅವಳಿಗೆ ಅಣ್ಣ, ತಂದೆ, ಗಂಡ, ಸ್ನೇಹಿತ ಯಾರೇ ಆಗಿದ್ದರೂ ಅವಳಿಗೆ ಭದ್ರತೆಯ ಅಂದರೆ ಗೇಟ್ ಕೀಪರ್ ರೀತಿಯಲ್ಲಿ ಇರುತ್ತಾರೆ. ಆದರೆ ಸ್ವತಂತ್ರವಾಗಿರಲು ಸಾಧ್ಯವಾಗುವುದಿಲ್ಲ” ಎಂದು ನುಡಿದರು.
“ಪ್ರಸ್ತುತ ದಿನಗಳಲ್ಲಿ ಮಹಿಳೆಯ ಜೀವನ ಹಾವು ಏಣಿಯ ಆಟದ ರೀತಿಯಲ್ಲಿದ್ದು, ಮನೆಯಲ್ಲಿ ಹೆಣ್ಣು-ಗಂಡು ಭೇದಭಾವವಿಲ್ಲದೆ ಮಕ್ಕಳನ್ನು ಬೆಳೆಸುವುದರ ಮೂಲಕ ಸಮಾನತೆಗೆ ಬುನಾದಿ ಹಾಕಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಫ್ರೀಡಂ ಪಾರ್ಕ್‌ನಲ್ಲಿ ಮುಂದುವರೆದ ಅಹೋರಾತ್ರಿ ಧರಣಿ
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವಿಜಯ್ ಪೂಣಚ್ಚ ತಂಬಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಒಂದು ಹೊಸ ಬಗೆಯ ಆಯಾಮಗಳಲ್ಲಿ ಚರ್ಚೆಯಾಗಬೇಕಾಗಿದ್ದು, ನಾವು ನಮ್ಮಲ್ಲಿ ಭಾವನಾತ್ಮಕವಾಗಿ ತುಂಬಾ ರೋಚಕವಾಗಿ ನೋಡದೆ ಮಹಿಳೆಯರನ್ನು ಸಮಾನ ದೃಷ್ಟಿಯಲ್ಲಿ ಕಂಡಾಗ ಮಾತ್ರ ಲಿಂಗ ಸಮಾನತೆ ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಶೈಲಜ ಇಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಇದ್ದರು.