- 3 ತಿಂಗಳಲ್ಲಿ ಬೆಂಗಳೂರನ್ನು ಸಂಚಾರ ಸಮಸ್ಯೆ ಮುಕ್ತವಾಗಿಸುವ ಗುರಿ
- ನಗರದಲ್ಲಿ 7000ಕ್ಕೂ ಹೆಚ್ಚು ಕಡೆ ಕ್ಯಾಮರಾ ಅಳವಡಿಕೆಗೆ ಯೋಜನೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಮೊದಲ ಬಾರಿಗೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಟ್ರಾಫಿಕ್ ನಿಯಂತ್ರಿಸಲಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ.
ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜತೆಗೆ ಪರಿಶೀಲನೆ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಗರದ ಸಂಚಾರ ಪೊಲೀಸರಿಗೆ ಇನ್ನೂ ಮೂರು ತಿಂಗಳಲ್ಲಿ ಬೆಂಗಳೂರನ್ನು ಸಂಚಾರ ಸಮಸ್ಯೆ ಮುಕ್ತವಾಗಿಸುವ ಗುರಿ ನೀಡಲಾಗಿದೆ. ವಿಶ್ವದಲ್ಲಿ ಬೆಂಗಳೂರು ನಗರ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ ಎಂದು ಅಪಖ್ಯಾತಿಯನ್ನು ಪಡೆದಿದೆ” ಎಂದರು.
“ಈಗ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾದರೆ ಅದಕ್ಕೆ ನಿಖರ ಕಾರಣ ಪತ್ತೆಗೆ ಪೊಲೀಸರಿಗೆ ಅಡಚಣೆಯಾಗುತ್ತಿದೆ. ಹಾಗಾಗಿ, ನಗರದಲ್ಲಿ ಇನ್ನುಮುಂದೆ ವಾಹನ ಸಂಚಾರ ದಟ್ಟಣೆಯನ್ನು ತಗ್ಗಿಸಲು ಡ್ರೋನ್ ಕ್ಯಾಮರಾ ಬಳಸಿ ಸಂಚಾರ ನಿರ್ವಹಣೆ ಮಾಡಲಾಗುತ್ತದೆ” ಎಂದು ತಿಳಿಸಿದರು.
“ಈ ಡ್ರೋನ್ ಕ್ಯಾಮರಾಗಳು ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿರುತ್ತವೆ. ಸಂಚಾರ ದಟ್ಟಣೆ ಉಂಟಾದ ಸ್ಥಳಗಳಿಂದಲೇ ಇನ್‌ಸ್ಪೆಕ್ಟರ್ ವಾಹನದಲ್ಲಿ ಆ ಕ್ಯಾಮರಾಗಳ ನಿರ್ವಹಿಸುವ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಎಲ್ಲಿ ವಾಹನ ಓಡಾಡಕ್ಕೆ ಅಡ್ಡಿಯಾಗಿರುತ್ತದೆಯೋ ಕೂಡಲೇ ಡ್ರೋನ್ ಬಳಸಿ ಯಾವ ಜಾಗದಲ್ಲಿ ಸಂಚಾರ ದಟ್ಟಣೆಯಾಗಿದೆ ಎಂಬುದನ್ನು ಪತ್ತೆ ಮಾಡಬಹುದು” ಎಂದರು.
“ನಗರದಲ್ಲಿ ಪ್ರತಿ ದಿನ ಬೆಳಿಗ್ಗೆ ಹಾಗೂ ಸಾಯಂಕಾಲ್ ಪೀಕ್ ಅವರ್‌ನಲ್ಲಿ ಎರಡು ಗಂಟೆಗಳ ಕಾಲ ಸಂಚಾರ ಪೊಲೀಸರು ರಸ್ತೆಯಲ್ಲಿ ನಿಂತು ಸಂಚಾರ ನಿರ್ವಹಣೆ ಮಾಡಬೇಕು. ಒಂದು ವೇಳೆ ದಟ್ಟಣೆ ಉಂಟಾದರೇ ಇದಕ್ಕೆ ಡಿಸಿಪಿ ಮತ್ತು ಎಸಿಪಿ ಅವರನ್ನು ಹೊಣೆ ಮಾಡಲಾಗುತ್ತದೆ” ಎಂದು ಎಚ್ಚರಿಸಿದರು.
“ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ನಗರದ ಜನಬಿಡದ ಪ್ರದೇಶ ಹಾಗೂ ಮಹಿಳೆಯರು ಹೆಚ್ಚೆಚ್ಚು ಓಡಾಟ ನಡೆಸುವ ಕಡೆಗಳಲ್ಲಿ ಹೈ ರೆಸಲ್ಯೂಷನ್ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ. ನಗರದಲ್ಲಿ 7000ಕ್ಕೂ ಹೆಚ್ಚು ಕಡೆ ಕ್ಯಾಮರಾ ಅಳವಡಿಕೆಗೆ ಯೋಜನೆ ಮಾಡಲಾಗಿದೆ. ಸೇಫ್ ಸಿಟಿ ಪ್ರಾಜೆಕ್ಟ್ 70% ಮುಗ್ದಿದ್ದು ಉಳಿದ ಕೆಲಸಗಳು ನಡಿಯುತ್ತಿವೆ. ಇನ್ನೂ ಹೊಯ್ಸಳ ಸಿಬ್ಬಂದಿಗೆ ಬಾಡಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು. ಇದರಿಂದ ಅವರ ಪ್ರತಿ ಸಂಭಾಷಣೆ, ಜನರ ಸಂಭಾಷಣೆ ರೆಕಾರ್ಡ್ ಆಗುತ್ತದೆ” ಎಂದು ಸಚಿವ ಪರಮೇಶ್ವರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಒಂದು ವರ್ಷದ ಅವಧಿಯವರೆಗೆ ವಿದ್ಯುತ್ ದರ ಹೆಚ್ಚಳ ಮುಂದೂಡಲು ಹೋಟೆಲ್ ಸಂಘ ಮನವಿ
“ಸಂಚಾರ ವಿಭಾಗದ ನಾಲ್ಕು ಡಿಸಿಪಿಗಳಿಗೆ ನಾಲ್ಕು ಡ್ರೋನ್ ಕ್ಯಾಮೆರಾಗಳನ್ನು ಖರೀದಿಸಲಾಗಿದೆ. ಇನ್ನು 10 ದಿನಗಳಲ್ಲಿ ಕ್ಯಾಮೆರಾ ಪಡೆಯಲಾಗುವುದು. ಡ್ರೋನ್ ಕ್ಯಾಮರಾ ಬಳಕೆಯ ಬಗ್ಗೆ ತರಬೇತಿ ನಡೆಯುತ್ತಿದೆ. 10 ಸಂಚಾರ ಉಪವಿಭಾಗಗಳ ಎಲ್ಲ ಎಸಿಪಿಗಳು ಮತ್ತು ಸಂಚಾರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಂತ ಹಂತವಾಗಿ ಡ್ರೋನ್‌ಗಳನ್ನು ಪಡೆಯಲಿದ್ದಾರೆ” ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಮಾಹಿತಿ ನೀಡಿದರು.