ಕೊಪ್ಪಳ ಜಿಲ್ಲಾ ಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗಿದ್ದಕ್ಕೆ ಜನ ವಿರೋಧ ಮುಂದುವರಿದಿದ್ದು, ಕಾರ್ಖಾನೆ ಕೆಲಸ ಸ್ಥಗಿತಗೊಳಿಸಲು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರೂ ಆದೇಶ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಬಚಾವೋ ಜನಾಂದೋಲನ ಸಮಿತಿ ಸದಸ್ಯರು ನಿನ್ನೆ ಕಾರ್ಖಾನೆ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕಾರ್ಖಾನೆ ಆರಂಭವಾದರೆ ಜಿಲ್ಲೆಯ ಜನರ ಮೇಲೇ ಹಾಗೂ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಮನವರಿಕೆ ಮಾಡಿಕೊಟ್ಟಿದ್ದರು. ಸಿಎಂ ಸಿದ್ಧರಾಮಯ್ಯ ಅವರು ಕಾರ್ಖಾನೆ ಕೆಲಸ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಹಾಗೂ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದರು. ಅದರೆ, ಕಾರ್ಖಾನೆ ಆವರಣದಲ್ಲಿ ಕೆಲಸ ಮುಂದುವರಿದಿದ್ದು ವಾಹನಗಳ ಓಡಾಟವೂ ಹೆಚ್ಚಾಗಿದೆ.
ಕಾರ್ಖಾನೆ ಕೆಲಸ ಸ್ಥಗಿತಗೊಳಿಸಲು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರೂ ಆದೇಶ ಪಾಲಿಸುತ್ತಿಲ್ಲ. ಕಾರ್ಖಾನೆಯ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ನಲಿನ್ ಆತುಲ್ ಕೈ ಜೋಡಿಸಿದ್ದಾರೆ ಎಂಬ ದೊಡ್ಡ ಅನುಮಾನ ಎದ್ದು ಕಾಣುತ್ತಿದೆ. ಜಿಲ್ಲೆಯ ಜನರ ಅಶಯ ಹಾಗೂ ಹಕ್ಕೊತ್ತಾಯಕ್ಕೆ ಬೆಲೆ ಕೊಡದ ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಖುದ್ದು ಸಿಎಂ ಅವರೇ ಜಿಲ್ಲಾಧಿಕಾರಿಗೆ ಕಾರ್ಖಾನೆ ಕೆಲಸ ಸ್ಥಗಿತಗೊಳ್ಳುವಂತೆ ಸೂಚಿಸಿದರೂ ಆದೇಶ ಪಾಲಿಸಿಲ್ಲ. ಬದಲಾಗಿ ಕಾರ್ಖಾನೆ ಕೆಲಸ ಮತ್ತಷ್ಟು ಚುರುಕು ಪಡೆದುಕೊಳ್ಳುತ್ತಿದೆ. ಕೂಡಲೇ ಸರ್ಕಾರ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳ | ಮಾ.10ರಂದು ಮಾನವ ಸರಪಳಿ ಆಂದೋಲನ
ಸಂಘಟನೆಯ ಮುಖಂಡರು ಕಾರ್ಖಾನೆ ಆವರಣದಿಂದ ಒಳಗೆ ಪ್ರವೇಶಿಸುವಾಗ ಕಾರ್ಖಾನೆ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದು ಕೆಲ ಸಮಯ ಬಿಗುವಿನ ವಾತಾವರನ ಸೃಷ್ಟಿಯಾಗಿತ್ತು.
