ಹಾಸನ ವಿಶ್ವವಿದ್ಯಾಲಯವನ್ನು ಮುಚ್ಚಿ ಮೈಸೂರು ವಿಶ್ವವಿದ್ಯಾಲಯಕ್ಕೆ ಮರುವಿಲೀನಗೊಳಿಸಬೇಕೆಂಬ ರಾಜ್ಯ ಸಚಿವ ಸಂಪುಟದ ಶಿಫಾರಸು ಖಂಡನೀಯವಾಗಿದ್ದು, ಈ ಕುರಿತು ಮಾರ್ಚ್ 16ರಂದು ದುಂಡು ಮೇಜಿನ ಸಭೆ ಮಾಡುತ್ತೇವೆ ಎಂದು ಹಿರಿಯ ಪತ್ರಕರ್ತ ಆರ್ ಪಿ ವೆಂಕಟೇಶಮೂರ್ತಿ ತಿಳಿಸಿದರು.
ಹಾಸನದ ಜಿಲ್ಲೆಯ ಜನಪರ ಸಂಘಟನೆಗಳು, ಸಾಹಿತಿಗಳು, ವಿಚಾರವಾದಿಗಳು ಮತ್ತು ಶಿಕ್ಷಣ ಪ್ರೇಮಿಗಳನ್ನು ಒಳಗೊಂಡ ‘ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ’ಯಿಂದ ಕಸಾಪ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಮಾತನಾಡಿದರು.
ಹಿರಿಯ ಸಾಮಾಜಿಕ ಹೋರಾಟಗಾರ ಡಾ. ವೈ ಎಸ್ ವೀರಭದ್ರಪ್ಪ ಮಾತನಾಡಿ, “ಮಾರ್ಚ್ 16ರಂದು ದುಂಡು ಮೇಜಿನ ಸಭೆ’ ಕರೆಯಲಾಗಿದೆ. ಈ ಸಭೆಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು, ಪ್ರಮುಖ ವ್ಯಕ್ತಿಗಳು, ಜನಪರ ಸಂಘಟನೆಗಳ ಮುಖಂಡರು, ಸಾಹಿತಿಗಳು, ಬುದ್ಧಿಜೀವಿಗಳು, ವಿಶ್ವವಿದ್ಯಾಲಯ ಮತ್ತು ಅದರ ವ್ಯಾಪ್ತಿಯ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಪೋಷಕರನ್ನು ಈ ಸಭೆಗೆ ಆಹ್ವಾನಿಸಲಾಗಿದೆ. ಮಾರ್ಚ್ 19ರಂದು ಹಾಸನ ವಿಶ್ವವಿದ್ಯಾಲಯ ಉಳಿಸುವಂತೆ ಒತ್ತಾಯಿಸಿ ಹಾಸನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
“1991ರಿಂದ ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿ ಹೇಮಗಂಗೊತ್ರಿ ಸ್ನಾತಕೋತ್ತರ ಕೇಂದ್ರವು ಹಾಸನದಲ್ಲಿ ಅಸ್ತಿತ್ವದಲ್ಲಿದೆ. 2023 ಮಾರ್ಚ್ 21ರಲ್ಲಿ ಕರ್ನಾಟಕ ಸರ್ಕಾರ ಹಾಸನದ ಹೇಮಗಂಗೊತ್ರಿಯನ್ನು ಸ್ವತಂತ್ರ ವಿಶ್ವವಿದ್ಯಾಲಯವಾಗಿ ಘೋಷಿಸಿದೆ. ಹಾಸನ ವಿಶ್ವವಿದ್ಯಾಲಯದಲ್ಲಿ ಹೇಮಗಂಗೋತ್ರಿ ಕ್ಯಾಂಪಸ್‌ನಲ್ಲಿ 11 ಸ್ನಾತಕೋತ್ತರ ವಿಭಾಗಗಳಿದ್ದು, ಒಟ್ಟು 600 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದಲ್ಲದೆ ಹಾಸನ ವಿಶ್ವವಿದ್ಯಾಲಯದ ಸದಸ್ಯತ್ವ ಪಡೆದ 56 ಪದವಿ ಕಾಲೇಜುಗಳಿವೆ. ಈ ಕಾಲೇಜುಗಳ ಪದವಿ ತರಗತಿಗಳಲ್ಲಿ 30,000 ವಿದ್ಯಾರ್ಥಿಗಳು ಹಾಗೂ ವಿವಿಧ ಸ್ನಾತಕೋತ್ತರ ಕೇಂದ್ರಗಳಲ್ಲಿ 2000 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಒಟ್ಟು ವಿದ್ಯಾರ್ಥಿಗಳಲ್ಲಿ ಬಹುತೇಕ ಪ್ರಮಾಣದಲ್ಲಿ ವಿದ್ಯಾರ್ಥಿನಿಯರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ” ಎಂದು ಹೇಳಿದರು.
“ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿಗತಿಗಳನ್ನು ಕುರಿತು ಅಧ್ಯಯನ ಮಾಡಲು ರಚಿಸಿದ್ದ ರಾಜ್ಯದ ಸಚಿವ ಸಂಪುಟದ ಉಪಸಮಿತಿಯು ಹಾಸನ ವಿಶ್ವವಿದ್ಯಾಲಯವೂ ಸೇರಿದಂತೆ 9 ವಿಶ್ವವಿದ್ಯಾಲಯಗಳಿಗೆ ನೀಡಲಾಗಿದ್ದ ಸ್ವತಂತ್ರ ಸ್ಥಾನವನ್ನು ರದ್ದುಮಾಡಿ, ಹಿಂದಿನ ವಿಶ್ವವಿದ್ಯಾಲಯಗಳಲ್ಲಿ ವಿಲೀನ ಮಾಡಲು ಶಿಫಾರಸು ಮಾಡಿದೆ. ಇದರಿಂದಾಗಿ ಹಾಸನ ಜಿಲ್ಲೆಯ ವಿದ್ಯಾರ್ಥಿಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶ ಮತ್ತು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಅದರಲ್ಲಿಯೂ ಪ್ರಮುಖವಾಗಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯುವ ಅವಕಾಶಗಳಿಂದ ವಂಚಿತರಾಗಲಿದ್ದಾರೆ. ಹಾಲಿ ವ್ಯಾಸಂಗ ಮಾಡುತ್ತಿರುವ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬಹಳ ತೊಂದರೆಯಾಗಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಬಸ್‌ನಲ್ಲಿ ಪ್ರಯಾಣಿಸುವಾಗ ಬ್ಯಾಗ್‌ನಲ್ಲಿದ್ದ 4 ಲಕ್ಷ ಹಣ ಕಳವು
ಕಸಾಪ ಜಿಲ್ಲಾಧ್ಯಕ್ಷ ಡಾ. ಎಚ್ ಎಲ್ ಮಲ್ಲೇಶಗೌಡ, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಹಿರಿಯ ದಲಿತ ಮುಂಖಂಡ ಎಚ್ ಕೆ ಸಂದೇಶ್, ಹಾಸನ ವಿವಿ ಪ್ರಾಧ್ಯಾಪಕ ಡಾ. ಮಹೇಶ್ ಹಾಗೂ ಇನ್ನಿತರರು ಇದ್ದರು.
