‘ಗೃಹಜ್ಯೋತಿ’ ಯೋಜನೆಯ ಸೌಲಭ್ಯ ಪಡೆಯುವಲ್ಲಿ ಉಂಟಾಗಿರುವ ಗೊಂದಲಗಳಿಗೆ ಇಂಧನ ಇಲಾಖೆ ಸ್ಪಷ್ಟನೆ ನೀಡಿದೆ.
ಬಾಡಿಗೆದಾರರು ಮತ್ತು ಇತರೆ ಗ್ರಾಹಕರು ಗೃಹಜ್ಯೋತಿ ಯೋಜನೆಯ ಫಲಾನುಭವಿಯಾಗಲು ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿದರೆ ಸಾಕು ಎಂದು ಇಂಧನ ಇಲಾಖೆ ತಿಳಿಸಿದೆ.
ಗೊಂದಲ-1
ಈ ಯೋಜನೆಯು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಗೃಹ ವಿದ್ಯುತ್ ಬಳಕೆದಾರರಿಗೂ ಅನ್ವಯವಾಗುವುದೇ?
ಸ್ಪಷ್ಟೀಕರಣ
ಗೃಹ ವಿದ್ಯುತ್ ಬಳಕೆದಾರರು ಬಾಡಿಗೆದಾರರಾಗಿದ್ದಲ್ಲಿ, ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿ ನೋಂದಾಯಿಸುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.
ಗೊಂದಲ-2
ಗೃಹ ಬಳಕೆದಾರರು / ಫಲಾನುಭವಿಗಳು ಯಾವುದಾದರೂ ಮಾಹೆಗಳಲ್ಲಿ ಮಾತ್ರ 200 ಯುನಿಟ್ ಮಿತಿ ದಾಟಿದರೂ, ಸದರಿ ಯೋಜನೆಯಲ್ಲಿ ಮುಂದುವರಿಯುವವರೆ?
ಸ್ಪಷ್ಟೀಕರಣ
200 ಯುನಿಟ್‌ಗಳ ಬಳಕೆಯ ಮಿತಿಯನ್ನು ಯಾವುದಾದರೂ ತಿಂಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ ಅನ್ನು ಪಾವತಿಸಿ, ಸದರಿ ಯೋಜನೆಯಲ್ಲಿ ಮುಂದುವರಿಯುವುದು.
ಗೊಂದಲ-3
ಸರ್ಕಾರದ ಆದೇಶದ ನಂತರ ಹೊಸದಾಗಿ ಗೃಹಬಳಕೆಗಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಗಕರಿಗೆ / ಬಳಕೆದಾರರಿಗೆ ಈ ಯೋಜನೆ ಅನ್ವಯಿಸುತ್ತದೆಯೇ?
ಸ್ಪಷ್ಟೀಕರಣ
ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹ ಬಳಕೆದಾರರ ಸರಾಸರಿ ಬಳಕೆಯ ಮಾಸಿಕ 53 ಯೂನಿಟ್‌ಗಳಾಗಿರುವುದರಿಂದ 53 ಯೂನಿಟ್‌ಗಳನ್ನೇ ನಿರ್ಧರಿಸಿ ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವುದು.
ಗೊಂದಲ-4
2022-23ರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಬಳಕೆ ದಾಖಲಾಗಿದ್ದಲ್ಲಿ, ಅಂತಹ ಮನೆಗಳ ಕಡಿಮೆ ಅವಧಿಯ ಸರಾಸರಿ ಪರಿಗಣಿಸುವ ವಿಧಾನ ಹೇಗೆ? (Shifted House)
ಸ್ಪಷ್ಟೀಕರಣ
ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹ ಬಳಕೆದಾರರ ಸರಾಸರಿ ಬಳಕೆಯ ಮಾಸಿಕ 53 ಯೂನಿಟ್‌ಗಳಾಗಿರುವುದರಿಂದ 53 ಯೂನಿಟ್‌ಗಳನ್ನೇ ನಿರ್ಧರಿಸಿ ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವುದು.
ಗೊಂದಲ-5
Multi store Apartment ಗಳಿಗೆ ಈ ಯೋಜನೆ ಅನ್ವಯಿಸುತ್ತದೆಯೇ?
ಸ್ಪಷ್ಟೀಕರಣ
ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತದೆಯೋ ಅಂತಹ ಎಲ್ಲ ಮನೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ.
ಗೃಹಜ್ಯೋತಿ ಯೋಜನೆಯನ್ನು ಕೆಲವು ಷರತ್ತುಗಳೊಂದಿಗೆ ಜುಲೈ 1ರಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ. ಈ ಯೋಜನೆಯ ನೋಂದಣಿ ಇದೇ 18ರಿಂದ ಆರಂಭವಾಗಲಿದೆ. ಈ ಯೋಜನೆಯ ಲಾಭ ಪಡೆಯಲು ಇಚ್ಛಿಸುವ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ವಿಶೇಷವಾಗಿ ರೂಪಿಸಿರುವ https://sevasindhugs.karnataka.gov.in/gruhajyothi ವಿಳಾಸದಲ್ಲಿ ಲಾಗಿನ್ ಆಗಿ ನೋಂದಾಯಿಸಬೇಕು.