ಸದ್ಯ ಆಯೋಗದಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ಜಟಾಪಟಿ, ನೇಮಕಾತಿ ಅಕ್ರಮಗಳು, ಪರೀಕ್ಷಾ ಅಧ್ವಾನಗಳು ಹೀಗೆಯೇ ಮುಂದುವರಿದರೆ ಅದರ ವಿರುದ್ಧ ಹತಾಶಗೊಂಡ ಯುವಜನರು ಸಿಡಿದೇಳಬಹುದು. ಅದು ಜನಾಂದೋಲನವಾಗಿ ಸರ್ಕಾರಕ್ಕೆ ಮತ್ತೊಂದು ಸಮಸ್ಯೆ ಸೃಷ್ಟಿಸಬಹುದು. ಕೆಪಿಎಸ್ಸಿ ಕಾಯ್ದೆಗೆ ತ್ವರಿತವಾಗಿ ತಿದ್ದುಪಡಿ ತರುವ ಅಗತ್ಯವಿದೆ.
‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಕಳ್ಳರ ಸಂತೆ ಆಗಿದೆ, ಭ್ರಷ್ಟಾಚಾರದ ಕೂಪವಾಗಿದೆ. ಉಪ ಆಯುಕ್ತ, ಡಿವೈಎಸ್ಪಿಗಳ ಹುದ್ದೆಗಳನ್ನು ಹರಾಜಿಗಿಡಲಾಗಿದೆ. ಕೆಪಿಎಸ್ಸಿ ವ್ಯವಸ್ಥೆಯಲ್ಲಿ ವಿದ್ಯೆಗೆ ಬೆಲೆಯೇ ಇಲ್ಲ. ದುಡ್ಡು ಕೊಟ್ಟು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬರುವವರು ಕೊಳ್ಳೆ ಹೊಡೆಯಲು ಕೂರುತ್ತಾರೆ. ಪೂರ್ವಭಾವಿ ಪರೀಕ್ಷೆಗೆ 60 ಲಕ್ಷ, ಮುಖ್ಯ ಪರೀಕ್ಷೆ 1 ಕೋಟಿ ಮತ್ತು ಸಂದರ್ಶನಕ್ಕೆ 40 ಲಕ್ಷ ನಿಗದಿ ಮಾಡಲಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸದನದಲ್ಲಿ ಗುಡುಗಿದ್ದಾರೆ.
ಅಶೋಕ್ ಅವರು ಶಾಸಕರು, ಮಾಜಿ ಸಚಿವರು ಹಾಗೂ ಹಾಲಿ ವಿರೋಧ ಪಕ್ಷದ ನಾಯಕರು. ಮುಖ್ಯಮಂತ್ರಿಯಾಗಲು ಮತ್ತೊಂದೇ ಮೆಟ್ಟಿಲು ಎನ್ನುವ ಹಂತದಲ್ಲಿರುವವರು. ಘನತೆವೆತ್ತ ಸದನದಲ್ಲಿ ನಿಂತು ವ್ಯವಸ್ಥೆಯ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡುತ್ತಾರೆಂದರೆ, ಅವರಿಗೆ ವ್ಯವಸ್ಥೆಯಲ್ಲಿರುವ ಹುಳುಕು ಗೊತ್ತಿದೆ. ಗೊತ್ತಿರುವ ಸತ್ಯವನ್ನೇ ಹೇಳಿದ್ದಾರೆ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲ ಶಾಸಕರು, ‘ನಿಮ್ಮ ಬಳಿ ದಾಖಲೆ ಇದ್ದರೆ ಮುಂದಿಡಿ, ಆಮೇಲೆ ಮಾತನಾಡಿ’ ಎಂದು ಸವಾಲು ಹಾಕಿದರು. ಸತ್ಯ ಗೊತ್ತಿದ್ದೂ, ಮುಚ್ಚಿಡುವ ನಾಟಕ, ಬೇಕಿರಲಿಲ್ಲ. ಅದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸು ಮಾಡಿಸಿ ಕೆಲಸ ಕೊಡಿಸುತ್ತೇವೆ ಎಂದು ಹಣ ವಸೂಲಿ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಉಪ್ಪಾರಪೇಟೆ ಮತ್ತು ವಿಜಯನಗರ ಠಾಣೆ ಪೊಲೀಸರೇ ಬಂಧಿಸಿ, ಎಫ್ಐಆರ್ ದಾಖಲಿಸಿದ್ದಾರೆ’ ಎಂದು ಆ ಎಫ್ಐಆರ್ ಪ್ರತಿಗಳನ್ನು ಪ್ರದರ್ಶಿಸಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ನಮ್ಮ ಪೊಲೀಸರು ವಸಾಹತುಶಾಹಿ ಮನಸ್ಥಿತಿಯಿಂದ ಸ್ವಾತಂತ್ರ್ಯ ಪಡೆಯಬೇಕಿದೆ
ಅಷ್ಟೇ ಅಲ್ಲ, ಪಿಡಿಒ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ 25 ಲಕ್ಷ, ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು 60 ಲಕ್ಷ ಪಡೆಯಲಾಗಿತ್ತು. ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಸಹಾಯಕ ಎಂಜಿನಿಯರ್ ಹುದ್ದೆಗಳ ಪರೀಕ್ಷೆಯಲ್ಲಿ ಗೋಲ್ಮಾಲ್ ಸಂಪೂರ್ಣ ಬಯಲಿಗೆ ಬಂದಿದೆ. 24 ಎಇ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ10 ಜನ ಮೋಸ ಮಾಡಿ ಪಾಸ್ ಆಗಿ ಹುದ್ದೆ ಗಿಟ್ಟಿಸಿದ್ದರು. ಕೆಪಿಎಸ್ಸಿ ನೇಮಿಸಿದ ಸಮಿತಿ ನಡೆಸಿದ ತನಿಖೆಯಿಂದಲೇ ಅಕ್ರಮ ದೃಢಪಟ್ಟಿದೆ. ಈ ಹತ್ತು ಜನರ ನೇಮಕಾತಿ ರದ್ದುಪಡಿಸಿ, ಸಿಒಡಿ ತನಿಖೆ ನಡೆಸಬೇಕು ಎಂದು ಹೇಳಿದೆ ಎಂದ ಅಶೋಕ್, ಸಮಿತಿಯ ವರದಿಯನ್ನು ಸದನದ ಮುಂದಿಟ್ಟರು.
ಕರ್ನಾಟಕ ಇನ್ನೂ ಕೆಟ್ಟಿಲ್ಲ, ಇದು ಉತ್ತರ ಪ್ರದೇಶವಲ್ಲ. ಆಡಳಿತಾರೂಢ ಕಾಂಗ್ರೆಸ್ನಲ್ಲಿ ಅಂಜಿಕೆ, ಅಳುಕು ಉಳ್ಳ ಮಾನವಂತರು ಇನ್ನೂ ಇರುವ ಕಾರಣಕ್ಕೆ, ಅಶೋಕ್ ಅವರ ವಾದವನ್ನು ಒಪ್ಪಿದರು. ಕೆಪಿಎಸ್ಸಿಯ ಹಾಲಿ ವ್ಯವಸ್ಥೆಯನ್ನು ರದ್ದುಮಾಡಿ, ಯುಪಿಎಸ್ಸಿ ಮಾದರಿಯ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಬೇಕು. ರಾಜಕೀಯ ಪಕ್ಷಗಳು ಮತ್ತು ಪ್ರಭಾವಿಗಳ ಚೇಲಾಗಳನ್ನು ಸದಸ್ಯರನ್ನಾಗಿ ನೇಮಿಸುವ ಪರಿಪಾಟ ನಿಲ್ಲಿಸಬೇಕು ಎಂಬ ಒಕ್ಕೊರಲಿನ ಒಮ್ಮತಕ್ಕೆ ಬಂದರು. ಇದು ನಿಜಕ್ಕೂ ಉತ್ತಮ ನಡೆ, ಜನಪರ ನಿಲುವು.
ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆ. ಈ ಸಂಸ್ಥೆ ಪಾರದರ್ಶಕವಾಗಿರಬೇಕು ಎಂದು ಬಯಸುವುದು ನಾಗರಿಕರ ಹಕ್ಕು. ಹಾಗೆಯೇ ಹುದ್ದೆಗಳ ಕನಸು ಕಾಣುವ ರಾಜ್ಯದ ಲಕ್ಷಾಂತರ ಯುವಜನರ ವಿಶ್ವಾಸ ಉಳಿಸಿಕೊಳ್ಳುವುದು ಮತ್ತು ನೇಮಕಾತಿಯು ನ್ಯಾಯಯುತವಾಗಿ ನಡೆಯುತ್ತದೆ ಎಂಬ ಭರವಸೆಯನ್ನು ಅವರಲ್ಲಿ ಮೂಡಿಸುವುದು ಆಯೋಗ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ.
ಆದರೆ ಜಾತಿ, ಹಣ, ಲಾಬಿಗಳ ಮೂಲಕ ಕೆಪಿಎಸ್ಸಿ ಸೇರಿದ ಅಧಿಕಾರಿಗಳ ಮತ್ತು ಅಧ್ಯಕ್ಷ-ಸದಸ್ಯರ ಅಪ್ರಾಮಾಣಿಕತೆ, ಭ್ರಷ್ಟತೆ, ಅದಕ್ಷತೆ, ಹೊಣೆಹೇಡಿತನ, ಕನ್ನಡ ದ್ರೋಹ, ವೃತ್ತಿಪರವಲ್ಲದ ನಡವಳಿಕೆಗಳಿಂದ ಕೆಪಿಎಸ್ಸಿ ಸರ್ವನಾಶವಾಗುವ ಹಂತ ತಲುಪಿದೆ.
ಕೆಪಿಎಸ್ಸಿ ಈ ಹಂತಕ್ಕೆ ತಲುಪಲು ಎಲ್ಲ ಪಕ್ಷಗಳ ರಾಜಕೀಯ ನಾಯಕರ ಪಾತ್ರವೂ ಇದೆ. ಬಹಳ ಹಿಂದಿನಿಂದಲೂ ಹಣದಾಸೆಗೆ, ಸ್ವಜನಪಕ್ಷಪಾತಕ್ಕೆ, ಪುಢಾರಿಗಳ ಪುನರ್ವಸತಿಗೆ ಅಧಿಕಾರಸ್ಥ ರಾಜಕಾರಣಿಗಳು ಅನರ್ಹರನ್ನು-ಅಯೋಗ್ಯರನ್ನು ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರಿಂದಾಗಿ ಇಷ್ಟೆಲ್ಲ ಅಧ್ವಾನ ಎಂಬುದು ಜನರ ಅಭಿಪ್ರಾಯವಾಗಿದೆ. ಎಚ್.ಡಿ.ದೇವೇಗೌಡ ಮತ್ತು ಎಸ್.ಎಂ.ಕೃಷ್ಣರಿಂದ ಡಾ. ಕೃಷ್ಣ, ಸಿದ್ದರಾಮಯ್ಯನವರಿಂದ ಶ್ಯಾಂಭಟ್ಟ, ಯಡಿಯೂರಪ್ಪನವರಿಂದ ಶಿವಶಂಕರಪ್ಪ ಎಸ್. ಸಾಹುಕಾರ್ ಅಧ್ಯಕ್ಷರಾದರು. ಇವರಿಂದ ಆದ ಅನಾಹುತ ಅಷ್ಟಿಷ್ಟಲ್ಲ.
ಸಾಂವಿಧಾನಿಕ ಸಂಸ್ಥೆಯೊಂದು ಈ ಪರಿ ಕೆಟ್ಟುಹೋಗಿದ್ದನ್ನು ಕಂಡ ಹೈಕೋರ್ಟ್, ‘ನೇಮಕಾತಿ ಪರೀಕ್ಷೆಗಳ ಪರಿಶುದ್ಧತೆಯನ್ನು ಮರಳಿ ತರಬೇಕಾದರೆ ಕೆಪಿಎಸ್ಸಿಯನ್ನು ಸಂಪೂರ್ಣವಾಗಿ ಪುನರ್ ರಚಿಸಬೇಕು, ಗರಿಷ್ಠ ಬದ್ಧತೆ ಉಳ್ಳವರನ್ನು ನೇಮಿಸಬೇಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೂ ಆಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಜೆಟ್ ಅಧಿವೇಶನ: ಸರ್ಕಾರದ ಬೆವರಿಳಿಸಲಿವೆಯೇ ವಿರೋಧ ಪಕ್ಷಗಳು?
ನ್ಯಾಯಕ್ಕಾಗಿ ಅಭ್ಯರ್ಥಿಗಳು ಪದೇ ಪದೆ ಕೋರ್ಟ್ ಮೆಟ್ಟಿಲು ಹತ್ತುವುದು ಮುಂದುವರೆದಾಗ, ‘ಕರ್ನಾಟಕದ ಮರ್ಯಾದೆ ಕಾಪಾಡಲು, ಘನತೆ ಉಳಿಸಲು, ನ್ಯಾಯಯುತವಾಗಿ ನೇಮಕಾತಿ ಪ್ರಕ್ರಿಯೆ ನಡೆಯಲು ಕೇಂದ್ರ ಲೋಕಸೇವಾ ಆಯೋಗದ ಮಾದರಿಯ ಹೊಸ ಪದ್ಧತಿ ಅನುಷ್ಠಾನಕ್ಕೆ ತರಬೇಕು. ಲೋಪಗಳನ್ನು ಸರಿಪಡಿಸಲು ಸಾಧ್ಯವಿಲ್ಲದಿದ್ದರೆ, ಕೆಪಿಎಸ್ಸಿಯನ್ನು ರದ್ದು ಮಾಡಬೇಕು’ ಎಂದು ಹೈಕೋರ್ಟ್ ಕಟುವಾಗಿ ಹೇಳಿದ್ದೂ ಇದೆ.
ಸದ್ಯ ಆಯೋಗದಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ಜಟಾಪಟಿ, ನೇಮಕಾತಿ ಅಕ್ರಮಗಳು, ಪರೀಕ್ಷಾ ಅಧ್ವಾನಗಳು ಹೀಗೆಯೇ ಮುಂದುವರಿದರೆ ಅದರ ವಿರುದ್ಧ ಹತಾಶಗೊಂಡ ಯುವಜನರು ಸಿಡಿದೇಳಬಹುದು. ಅದು ಜನಾಂದೋಲನವಾಗಿ ಸರ್ಕಾರಕ್ಕೆ ಮತ್ತೊಂದು ಸಮಸ್ಯೆ ಸೃಷ್ಟಿಸಬಹುದು. ಆದಕಾರಣ, ಕರ್ನಾಟಕ ಲೋಕಸೇವಾ ಆಯೋಗದ ಶುದ್ಧೀಕರಣದ ಕೆಲಸ ತಕ್ಷಣ ಆರಂಭವಾಗಬೇಕಿದೆ. ಕೆಪಿಎಸ್ಸಿ ಕಾಯ್ದೆಗೆ ತ್ವರಿತವಾಗಿ ತಿದ್ದುಪಡಿ ತರುವ ಅಗತ್ಯವಿದೆ.
