ಅವೈಜ್ಞಾನಿಕ ಹೊಸ ಸ್ವಾಬ ಪದ್ದತಿಯನ್ನು ರದ್ದು ಪಡಿಸಲು ಹಾಗೂ ಪ್ರತಿ ಯೂನಿಟಿಗೆ 70 ಪೈಸೆ ವಿದ್ಯುತ್ ದರ ಹೆಚ್ಚಿಸಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಗುಲ್ಬರ್ಗಾ ವಿದ್ಯುತ್ ಸರಬರಾಜು ಮಂಡಳಿ ವ್ಯವಸ್ಥಾಪಕ ನಿರ್ದೇಶಕರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
“ಹಗಲು ದರೋಡೆಯ ಹೊಸ ಸ್ವಾಬ ಪದ್ಧತಿ ಹಾಗೂ ₹7.15 ರಷ್ಟು ಅವೈಜ್ಞಾನಿಕ ದರ ಹೆಚ್ಚಿಸಿರುವುದರಿಂದ ಜನಸಾಮಾನ್ಯರು ಬಹಳ ಆರ್ಥಿಕ ಹೊರೆಯನ್ನು ಹೊರುವಂತಾಗಿದೆ. ಹಳೆಯ ಸ್ವಾಬ ಪ್ರಕಾರ ಮೊದಲ 50 ಯೂನಿಟ್ ಬಳಕೆ ಮಾಡುವವರಿಗೆ ₹4.10ರಷ್ಟು ನಿಗದಿ ಮಾಡಲಾಗಿತ್ತು. ಬಳಿಕ 51 ರಿಂದ 100 ಯೂನಿಟ್‌ಗೆ ₹5.60, 101 ರಿಂದ 157 ಯೂನಿಟ್‌ವರೆಗೆ ಹಾಗೂ 157 ಯೂನಿಟ್‌ಗಿಂತ ಹೆಚ್ಚು ಬಳಸಿದರೆ ₹8.20 ಇತ್ತು” ಎಂದು ತಿಳಿಸಿದ್ದಾರೆ.
“ಈಗ ಈ ನಾಲ್ಕು ಮಾನದಂಡಗಳನ್ನು ರದ್ದುಗೊಳಿಸಿ ಕೇವಲ ಎರಡೇ ಮಾನದಂಡಗಳನ್ನು ಮಾಡಲಾಗಿದೆ. ಹೊಸ ಮಾನದಂಡ ಪ್ರಕಾರ ಮೊದಲ 100 ಯೂನಿಟ್‌ವರೆಗೂ ₹4.75 ಹಾಗೂ 100 ಯೂನಿಟ್‌ಗಿಂತ ಹೆಚ್ಚು ಬಳಸಿದರೆ ಅಂತಹವರಿಗೆ ₹7.00 ನಿಗದಿ ಪಡಿಸಿದ್ದಾರೆ. ಒಂದು ವೇಳೆ ಒಬ್ಬ ಗ್ರಾಹಕ 101 ಯೂನಿಟ್ ಬಳಸಿದರೂ ಅವರು ಒಟ್ಟು ಯೂನಿಟ್‌ಗೆ ₹7.00 ರಂತೆ ಪಾವತಿಸಬೇಕು. ಇದು ಜನರಿಗೆ ಬಹಳ ಹೊರೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ಏಪ್ರಿಲ್ 1 ರಿಂದಲೇ ಜಾರಿಯಾಗುವಂತೆ ಪ್ರತಿ ಯೂನಿಟ್‌ಗೆ 70 ಪೈಸೆ ದರ ಹೆಚ್ಚಿಸಿರುವುದು ಹಾಗೂ ವಿದ್ಯುತ್ ಬಳಕೆಯ ನಿಗದಿತ ಶುಲ್ಕವನ್ನು ₹50 ಇದ್ದದ್ದನ್ನು ₹70ಕ್ಕೆ ಹೆಚ್ಚಿಸಿರುವುದನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಕಲಬುರಗಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
“ಕಾರ್ಮಿಕರು, ರೈತರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ಜನಸಾಮಾನ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಈಗಾಗಲೇ ತತ್ತರಿಸುತ್ತಿದ್ದು, ಈ ವಿದ್ಯುತ್ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ಕಡೆ ಜನಸಾಮಾನ್ಯರಿಗೆ 200 ಯೂನಿಟ್‌ವರೆಗೂ ಉಚಿತ ಎಂದು ಹೇಳಿ ಇನ್ನೊಂದೆಡೆ ವಿದ್ಯುತ್ ದರ ಏರಿಸಿರುವುದು ಇಬ್ಬಗೆ ನೀತಿಯಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯ ಮತ್ತು ಅಂಗಡಿಗಳನ್ನು ಹೊಂದಿದವರಿಗೆ ಇದು ನುಂಗಲಾರದ ತುತ್ತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಎಲ್ಲ ಜನರಿಗೂ ಅವಶ್ಯವಾಗಿ ಬೇಕಾಗಿರುವ ವಿದ್ಯುತ್ ಶಕ್ತಿಯೂ ಈಗ ಜನರ ಜೀವನಾವಶ್ಯಕತೆಗಳಲ್ಲಿ ಒಂದಾಗಿದೆ. ಇದರ ಬೆಲೆ ಏರಿಕೆ ಜನರ ಮೇಲೆ ಹೊರೆಯಾಗಿದೆ. ನೂತನ ರಾಜ್ಯ ಸರ್ಕಾರವು ಇದರ ಬಗ್ಗೆ ಮೌನವಾಗಿದ್ದು, ಇದು ನಮ್ಮ ಸರ್ಕಾರದ ನಿರ್ಣಯವಲ್ಲ ಎಂದು ನೆಪ ಹೇಳುತ್ತಿರುವುದು ಸರಿಯಲ್ಲ. ಹಳೆಯ ಜನವಿರೋಧಿ ನೀತಿಗಳನ್ನು ಪರಿಷ್ಕರಿಸುತ್ತಿರುವ ತಮ್ಮ ಸರ್ಕಾರವು ವಿದ್ಯುತ್ ದರ ಏರಿಕೆ ಏಕೆ ಪರಿಷ್ಕರಿಸಬಾರದು?” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಗೃಹಜ್ಯೋತಿ’ | ನೋಂದಣಿಗೆ ʼಆಧಾರ್ʼ ಸಾಕು ಎಂದು ಗೊಂದಲಗಳಿಗೆ ತೆರೆ ಎಳೆದ ಇಂಧನ ಇಲಾಖೆ
“ವಿದ್ಯುತ್ ದರ ಏರಿಕೆ ಪರಿಷ್ಕರಣೆ ವಿಷಯವನ್ನು ಕೂಡಲೇ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿ ಹೊಸ ಸ್ವಾಬ ಪದ್ದತಿಯನ್ನು ಕೈಬಿಡಬೇಕು. ಹಾಗೂ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಚ್ ಎ ದಿವಾಕರ್, ಎಸ್‌ಯುಸಿಐ(ಸಿ) ವಿ ನಾಗಮ್ಮಾಳ, ರಾಮಣ್ಣ ಎಸ್, ಇಬ್ರಾಹಿಂಪೂರ, ಗಣಪತರಾವ ಕೆ ಮಾನೆ, ಎಸ್ ಎಂ ಶರ್ಮಾ, ವಿ ಜಿ ದೇಸಾಯಿ, ಮಹೇಶ ಎಸ್ ಬಿ, ಜಗನ್ನಾಥ ಎಸ್ ಎಚ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.