ಸರ್ಕಾರದ ಅಧೀನದಲ್ಲಿರುವ ಕೃಷ್ಣಾ ನದಿ ದಂಡೆಯ ಮುಳುಗಡೆ ಪ್ರದೇಶದ ಜಮೀನುಗಳಲ್ಲಿನ ಫಲವತ್ತಾದ ಎರೆಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಸಂಗಯ್ಯ ಸಾರಂಗಮಠ್ ಒತ್ತಾಯಿಸಿದರು.
ನದಿ ದಂಡೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದರಿಂದ ಪಾತ್ರದ ಹರಿವಿಗೆ ತೊಡಕಾಗಿ ಭವಿಷ್ಯದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಕೂಡಲೇ ಇಂಥ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ದಂಧೆ ತಡೆಗಟ್ಟಬೇಕು ಎಂದು ಡಿಸಿ, ಎಸ್‌ಪಿ, ತಹಶೀಲ್ದಾರ್, ಜಲ ಸಂಪನ್ಮೂಲ ಮತ್ತು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಂಗಡಗಿ ಭಾಗದಿಂದ ಕೊನೆಹಳ್ಳಿ ಅಯ್ಯನಗುಡಿವರೆಗೂ ಅಕ್ರಮವಾಗಿ ಎರೆಮಣ್ಣು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಪ್ರದೇಶದಲ್ಲಿ ಹಿಟಾಚಿ, ಜೆಸಿಬಿ, ಟೌರಸ್ ಟಿಪ್ಪರ್, ಟ್ರ್ಯಾಕ್ಟರ್‌ಗಳು ಹಗಲು ರಾತ್ರಿ ಎನ್ನದೆ ಮಣ್ಣು ಸಾಗಿಸುವ ದಂಧೆಯಲ್ಲಿ ನಿರತವಾಗಿವೆ. ಈ ಬಗ್ಗೆ ತಹಶೀಲ್ದಾರ್, ಪಿಎಸ್‌ಐ ಅವರಿಗೆ ದೂರವಾಣಿ ಮೂಲಕ ತಡೆಗಟ್ಟುವಂತೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಅವರು ಮನವಿಯಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ರೈತರು ಎಣ್ಣೆಕಾಳು ಬೆಳೆಗಳ ಉತ್ಪಾದನೆ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು: ಜಂಟಿಕೃಷಿ ನಿರ್ದೇಶಕಿ ರೂಪಾ ಎಲ್
ನದಿ ಪಾತ್ರದಲ್ಲಿ ಈ ರೀತಿ ಮಣ್ಣು ಅಗೆದರೆ ನೀರಿನ ಹರಿಯುವಿಕೆಯಲ್ಲಿ ಏರುಪೇರಾಗುತ್ತದೆ. ದೊಡ್ಡ ಗುಂಡಿಗಳು ಬಿದ್ದು ಅವುಗಳಲ್ಲಿ ನೀರು ಸಂಗ್ರಹವಾಗಿ ಇದರ ಅರಿವಿಲ್ಲದೆ ಜನ, ಜಾನುವಾರುಗಳು ಪ್ರಾಣ ಕಳೆದುಕೊಳ್ಳುವ ಸಂಭವ ಹೆಚ್ಚಾಗಿದೆ. ಅಲ್ಲದೇ ಪಂಚಾಯತಿ ಅಥವಾ ಕಂದಾಯ ಇಲಾಖೆಗೆ ಬರಬೇಕಾದ ರಾಯಲ್ಟಿ ರೂಪದ ಶುಲ್ಕವೂ ಬರದೆ ವಂಚನೆ ಆಗತೊಡಗಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತು ಇಂಥ ಅಕ್ರಮ ದಂಧೆ ತಡೆಯಬೇಕು. ಇಲ್ಲದಿದ್ದರೆ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
