ಕನ್ನಡ ಸಿನಿಮಾ ನಟಿ ರನ್ಯಾ ರಾವ್ ಪ್ರಸ್ತುತ ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಸುದ್ದಿಯಲ್ಲಿದ್ದಾರೆ. ರನ್ಯಾ ಒಂದು ವರ್ಷದಲ್ಲಿ ಒಟ್ಟು 30 ಬಾರಿ ದುಬೈಗೆ ಭೇಟಿ ನೀಡಿದ್ದು, ಚಿನ್ನ ಕಳ್ಳಸಾಗಣೆ ಮೂಲಕ ಪ್ರತಿ ಟ್ರಿಪ್‌ನಲ್ಲಿ 12 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೆಯೇ ತೊಡೆಯಲ್ಲಿ ಸುಮಾರು 14 ಚಿನ್ನದ ಬಾರ್‌ಗಳನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡಿದ್ದಾರೆ ಎಂಬ ಆರೋಪ ನಟಿ ರನ್ಯಾ ಮೇಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 3ರಂದು ಚಿನ್ನ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ರನ್ಯಾ ಸಿಕ್ಕಿಬಿದ್ದಿದ್ದಾರೆ. ಸುಮಾರು 12.86 ಕೋಟಿ ಮೌಲ್ಯದ 14.2 ಕೆಜಿ ಚಿನ್ನದ ಬಾರ್‌ಗಳು ನಟಿ ಬಳಿ ಪತ್ತೆಯಾಗಿದೆ. ತೊಡೆಯಲ್ಲಿ ಟೇಪ್ ಮೂಲಕ ಚಿನ್ನದ ಬಾರ್‌ಗಳನ್ನು ಕಟ್ಟಲಾಗಿದ್ದು, ಅದರ ಮೇಲೆ ಬಾಂಡ್ಯೇಜ್ ಹಾಕಲಾಗಿತ್ತು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಚಿನ್ನ ಕಳ್ಳಸಾಗಣೆ ಆರೋಪ: ಕನ್ನಡ ಸಿನಿಮಾ ನಟಿ ರನ್ಯಾ ಬಂಧನ
ಕರ್ನಾಟಕದ ಹಿರಿಯ ಡಿಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿಯ ಮಲಮಗಳಾದ 33 ವರ್ಷ ರನ್ಯಾ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ. ಚಿನ್ನ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬ ಸುಳಿವಿನ ಆಧಾರದಲ್ಲಿ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ರಾವ್ ಧರಿಸಿದ್ದ ಜಾಕೆಟ್‌ನಲ್ಲಿ ಚಿನ್ನವಿದೆ ಎಂಬ ವದಂತಿ ಇದ್ದರೂ ಕೂಡಾ ತಪಾಸಣೆ ನಡೆಸಿದಾಗ ತೊಡೆಯಲ್ಲಿ ಚಿನ್ನ ಪತ್ತೆಯಾಗಿದೆ. 14.2 ಕೆಜಿ ಚಿನ್ನ ಪತ್ತೆಯಾಗಿದೆ. ನಟಿ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂದು ಡಿಆರ್‌ಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಹಾಗೆಯೇ ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಅತ್ಯಧಿಕ ಚಿನ್ನ ಇದಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಆಗಾಗ ದುಬೈ ಮತ್ತು ಮಲೇಷಿಯಾಕ್ಕೆ ಪ್ರಯಾಣಿಸುತ್ತಿದ್ದ ರನ್ಯಾ ಸಾಮಾನ್ಯವಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ವಿಐಪಿಗಳು ನಿರ್ಗಮಿಸುವ ಎಕ್ಸಿಟ್ ಹಾದಿಯಲ್ಲಿ ನಿರ್ಗಮಿಸುತ್ತಿದ್ದರು. ಹಾಗಾಗಿ ಸಾಮಾನ್ಯ ಪ್ರಯಾಣಿಕರಿಗೆ ಮಾಡುವ ತಪಾಸಣೆಯಿಂದ ರನ್ಯಾ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಫೆ. 26ರಿಂದ 28ರವರೆಗೆ ಕರ್ನಾಟಕ ಇಂಟರನ್ಯಾಶನಲ್ ಟೂರಿಸಮ್ ಎಕ್ಸ್‌ಪೋ: ಸಚಿವ ಎಚ್ ಕೆ ಪಾಟೀಲ್
ಆದರೆ ಸೋಮವಾರ ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ರನ್ಯಾ ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದು, ಪತಿ ಕೂಡಾ ಜೊತೆಗಿದ್ದರು. ಆದರೆ ಈ ಕಳ್ಳಸಾಗಾಟದಲ್ಲಿ ಪತಿಯೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಡಿಆರ್‌ಐ ಖಚಿತಪಡಿಸಿಲ್ಲ. ಹಾಗೆಯೇ ರನ್ಯಾ ಬರೀ ಚಿನ್ನ ಸಾಗಾಟ ಮಾಡುವ ವ್ಯಕ್ತಿಯಾಗಿದ್ದಾರೆಯೇ ಅಥವಾ ನಟಿಯೇ ಈ ರಾಕೆಟ್‌ನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆಯೇ ಎಂಬುದು ಖಚಿತವಾಗಿಲ್ಲ.
ತನ್ನ ಮಲಮಗಳೊಂದಿಗೆ ತನಗೆ ನಾಲ್ಕು ತಿಂಗಳಿನಿಂದ ಅಂದರೆ ಆಕೆಯ ವಿವಾಹವಾದ ಬಳಿಕ ಯಾವುದೇ ಸಂಪರ್ಕವಿಲ್ಲ ಎಂದು ಹಿರಿಯ ಐಪಿಎಸ್ ಅಧಿಕಾರಿ ಹೇಳಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗಳ ಬಳಿ ಇರುವ ದಾಖಲೆ ಪ್ರಕಾರ ರನ್ಯಾ ಮತ್ತು ಅವರ ಪತಿ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಯ (ರನ್ಯಾ ಮಲತಂದೆ) ಮಲಮಗನ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಇನ್ನು ರನ್ಯಾ ಬಂಧನದ ಬಳಿಕ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ರನ್ಯಾ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಸುಮಾರು 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 2.67 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಒಟ್ಟು 17.29 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. ಸದ್ಯ ರಾವ್ ಮಾರ್ಚ್ 18ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ಗುರುವಾಗ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ಸಮೀರ್ 35 ಲಕ್ಷ ತಗೊಂಡು ವಿಡಿಯೋ ಮಾಡಿದ್ರ?
2014ರಲ್ಲಿ ತನ್ನ 22ನೇ ವಯಸ್ಸಿನಲ್ಲಿ ಕನ್ನಡ ಸಿನಿಮಾ ಲೋಕದಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದ ರನ್ಯಾ, ಮೂರು ಕನ್ನಡ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದಕ್ಷಿಣ ಭಾರತದ ಇತರೆ ಭಾಷೆಗಳ ಸಿನಿಮಾದಲ್ಲಿಯೂ ನಟಿಸುವ ಅಭಿಲಾಷೆ ಹೊಂದಿದ್ದ ರನ್ಯಾ ಅದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಿದ್ದಾರೆ ಎನ್ನಲಾಗಿದೆ.
ರನ್ಯಾ ಮಲತಂದೆ ಯಾರು?
ಇನ್ನು ರನ್ಯಾ ಮಲತಂದೆಯ ವೃತ್ತಿ ಜೀವನವೂ ವಿವಾದಾದ್ಮಕವಾಗಿದೆ. ಹಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ಕೇರಳದ ಆಭರಣ ವ್ಯಾಪಾರಿಯೊಬ್ಬರು ಕರ್ನಾಟಕದಿಂದ ಕೇರಳಕ್ಕೆ ಬಸ್‌ನಲ್ಲಿ ಚಿನ್ನ ಸಾಗಿಸುತ್ತಿದ್ದಾಗ ಅದರ ದರೋಡೆ ನಡೆದಿದ್ದು, ಅದರಲ್ಲಿ ರನ್ಯಾ ಮಲತಂದೆಯ ಕೈವಾಡವಿದೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ನಗದು ಮತ್ತು ಚಿನ್ನ ದರೋಡೆಯಾಗಿತ್ತು.
ಸುಮಾರು ಒಂದು ದಶಕದ ಹಿಂದೆ ಈ ದರೋಡೆ ನಡೆದಿದ್ದು, ಈ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳ ಕೈವಾಡವಿದೆ ಎಂಬ ಆರೋಪವಿದೆ. ಈ ಆರೋಪದ ಬೆನ್ನಲ್ಲೇ ರನ್ಯಾ ತಂದೆಗೆ ವರ್ಗಾವಣೆಯಾಯಿತು. ಆದರೆ ಚಿನ್ನ ದರೋಡೆ ಪ್ರಕರಣದಲ್ಲಿ ಅವರ ವಿರುದ್ಧ ಯಾವುದೇ ಅಧಿಕೃತ ಅಥವಾ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ. ಹಾಗೆಯೇ 2014ರಲ್ಲಿ ಮೈಸೂರಿನಲ್ಲಿ ನಡೆದ ಈ ಪ್ರಕರಣದ ಎಲ್ಲಾ ಆರೋಪಿಗಳನ್ನು 2017ರಲ್ಲಿ ಖುಲಾಸೆಗೊಳಿಸಲಾಯಿತು.
ಇನ್ನು ಈ ಪೊಲೀಸ್ ಅಧಿಕಾರಿಯ ಮಲಮಗ ಕೂಡಾ ವಿವಾದದಲ್ಲೇ ಸಿಲುಕಿದವರು. ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಪ್ರಕರಣದಲ್ಲಿ ಪೊಲೀಸರು ರನ್ಯಾ ಸಹೋದರ ಅಂದರೆ ದರೋಡೆ ಆರೋಪ ಎದುರಿಸಿದ್ದ ಪೊಲೀಸ್ ಅಧಿಕಾರಿಯ ಮಲಮಗನ ವಿಚಾರಣೆಯೂ ನಡೆದಿತ್ತು.
