ಹಾವು ಕಚ್ಚಿದ ಬಳಿಕ 24 ಗಂಟೆಯೊಳಗೆ ರೋಗಿಯ ಮೇಲೆ ವಿಶೇಷವಾಗಿ ನಿಗಾ ವಹಿಸುವುದು ಮುಖ್ಯವಾಗಿದೆ ಎಂದು ನರ ವಿಜ್ಞಾನಿ ಡಾ. ಅಮೀರ್‌ಮೊಯಿನ್ ಹೇಳಿದ್ದಾರೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಲೋಪಮುದ್ರ ಮೆಡಿಕಲ್ ಸೆಂಟರ್ ಸಹಯೋಗದಲ್ಲಿ ʼಹಾವು ಕಡಿತದ ಪರಿಣಾಮಗಳುʼ ವಿಷಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
“ವಿಷಕಾರಿ ಹಾವು ಕಚ್ಚಿದ 24 ಗಂಟೆಯೊಳಗೆ ರೋಗಿಯ ಮೇಲೆ ವಿಶೇಷವಾಗಿ ನಿಗಾ ವಹಿಸುವುದು ಮುಖ್ಯವಾಗಿದೆ. ಚಿಕಿತ್ಸೆ ತಡವಾದಷ್ಟು ಅಪಾಯವೇ ಹೆಚ್ಚು. ಒಂದೊಂದು ಹಾವುಗಳ ಕಡಿತದಿಂದ ಒಂದೊಂದು ರೀತಿಯಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಮೆದುಳು, ನರಗಳ ಮೂಲಕ ವಿಷ ರಕ್ತದೊಂದಿಗೆ ಸಂಚಾರವಾಗುವುದರಿಂದ ಜೀವಕ್ಕೆ ಕಂಠಕವಾಗಲಿದೆ” ಎಂದು ತಿಳಿಸಿದರು.
“ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದ ಸಂದರ್ಭದಲ್ಲಿ ಮೂತ್ರಕೋಶ, ಹೃದಯ, ಮಾಂಸಖಂಡಕ್ಕೂ ವಿಷ ಹರಡಿ ಮತ್ತಷ್ಟು ಸಮಸ್ಯೆಯಗುವ ಸಾಧ್ಯತೆ ಹೆಚ್ಚಿರುತ್ತದೆ. ಕಣ್ಣುರೆಪ್ಪೆ ಭಾಗದಲ್ಲಿ ಊದಿಕೊಳ್ಳುವುದು, ಕಣ್ಣು ಮಂಜಾಗುವುದು, ನಾಲಿಗೆ ಹೊರಗೆ ಹಾಕಲು ತೊಂದರೆ ಪಡುವುದು, ಕುತ್ತಿಗೆ ಭಾಗ ಮೇಲೆತ್ತಲು ಆಗದಿರುವುದು, ಸ್ಟ್ರೋಕ್, ಹೈಪರ್ ಬಿಪಿ ಕೂಡ ಇದರ ಒಂದಷ್ಟು ಲಕ್ಷಣಗಳಾಗಿವೆ. ಇದನ್ನು ಅರಿತುಕೊಂಡು ಭಯದಿಂದ ಹೊರ ಬಂದು ಆಸ್ಪತ್ರೆಗೆ ದಾಖಲಿಸಬೇಕಿದೆ” ಎಂದರು.
ಉರಗ ಸಂರಕ್ಷಕ ಶರತ್‌ಕಾಂತ್ ಮಾತನಾಡಿ, “ನಾಗರಹಾವು, ಕಾಳಿಂಗ ಸರ್ಪ, ಕೊಳಕು ಮಂಡಲ, ಉರಿ ಮಂಡಲ, ಕಟ್ಟುಹಾವು ವಿಷಕಾರಿ ಹಾವುಗಳಾಗಿವೆ. ಕಡಿಮೆ ಸಂಖ್ಯೆಯಲ್ಲಿ ಹಸಿರು ಬಣ್ಣದಿಂದ ಕೂಡಿರುವ ಮಲಬಾರ್ ವೈಪರ್‌ಪಿಟ್ ಕೂಡ ವಿಷಕಾರಿ ಹಾವಾಗಿದ್ದು, ಹೆಚ್ಚಿನ ಜನರು ಕೊಳಕು ಮಂಡಲ ಹಾವು ಕಚ್ಚಿ ಅಪಾಯದಲ್ಲಿ ಸಿಲುಕುವ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ” ಎಂದು ಹೇಳಿದರು.
“ಕೃಷಿಕರು, ಬಡ ವರ್ಗದವರು ಹಾವು ಕಡಿತಕ್ಕೆ ಜೀವ ಕಳೆದುಕೊಳ್ಳುತ್ತಿವುದು ಬೇಸರದ ವಿಚಾರವಾಗಿದೆ. ಹಾವು ಕಚ್ಚಿದಾಗ ಆದಷ್ಟು ಸಮಧಾನದಿಂದ ಇರುವಂತೆ ನೋಡಿಕೊಳ್ಳಬೇಕು. ಭಯ ಹುಟ್ಟಿಸುವುದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಹಾವು ಯಾವುದೆಂದು ಗುರುತಿಸಿ ವೈದ್ಯರಲ್ಲಿ ಹಂಚಿಕೊಳ್ಳುವುದರಿಂದ ಅಪಾಯ ತಪ್ಪಿಸಲು ಸಾಧ್ಯವಿದೆ” ಎಂದು ತಿಳಿಸಿದರು.
“ಹಾವು ಕಚ್ಚಿದ ಜಾಗದಲ್ಲಿ ಬಿಗಿಯಾಗಿ ಕಟ್ಟುವುದು, ಹಾವಿನ ಪೂರ್ವಪರ ತಿಳಿಯದೆ ಹಿಡಿಯಲು ಹೋಗುವುದು ಕೂಡ ಅಪಾಯವಿದೆ. ಆದಷ್ಟು ಬೇಗ ಆಸ್ಪತ್ರೆಗೆ ಕರೆತರುವುದರಿಂದ ಜೀವ ಉಳಿಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಲೋಪಮುದ್ರ ಮೆಡಿಕಲ್ ಸೆಂಟರ್ ವ್ಯವಸ್ಥಾಪಕ ಪಾಲುದಾರ ಡಾ. ಮುಕ್ಕಾಟೀರ ಅಮೃತ್ ನಾಣಯ್ಯ ಮಾತನಾಡಿ, “ಹಾವುಗಳು ಹೆಚ್ಚಾಗಿ ಇಲಿಗಳನ್ನು ತಿನ್ನುವುದರಿಂದ ಕಚ್ಚಿದ ಜಾಗದ ಮೂಲಕ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಜಾಗವನ್ನು ಕೊಳೆಯಬಹುದು. ಗ್ಯಾಂಗ್ರಿನ್ ರೋಗ ಕೂಡ ಕಾಣಿಸಿಕೊಳ್ಳಬಹುದು. ಭಯ ಬಿಟ್ಟು ಮೂಡನಂಬಿಕೆಯಿಂದ ಹೊರ ಬಂದು ಚಿಕಿತ್ಸೆ ಪಡೆಯುವುದು ಸೂಕ್ತವಾಗಿದೆ” ಎಂದು ತಿಳಿಸಿದರು.
“ಹಾವುಗಳು ನ್ಯೂರೊ ಟಾಕ್ಸಿನ್ ಮತ್ತು ಹೆಮೋ ಟಾಕ್ಸಿಕ್‌ನಂತಹ ಎರಡು ವಿಧಗಳಲ್ಲಿ ವಿಷ ಕಾರ್ಯನಿರ್ವಹಿಸುತ್ತವೆ. ಇದನ್ನು ಪತ್ತೆ ಹಚ್ಚಲು ಯಾವ ಹಾವು ಕಚ್ಚಿದೆ ಎಂಬುವುದನ್ನು ಪತ್ತೆ ಹಚ್ಚುವುದು ಕೂಡ ಮುಖ್ಯವಾಗಿದೆ. ಇದರಂತೆ ಚಿಕಿತ್ಸೆ ಕೂಡ ನೀಡಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪೊಲೀಸರಿಂದ ಹಲ್ಲೆ ಆರೋಪ; ನೊಂದ ಯುವಕ ಆತ್ಮಹತ್ಯೆ
ವೈದ್ಯೆ ಡಾ. ರುತ್ ಅದ್ಲಾಕಾ ಮಾತನಾಡಿ, “ಹಾವಿನ ಬಗ್ಗೆ ಮುಂಜಾಗೃತೆ ಅಗತ್ಯ. ಮನೆಯ ಸುತ್ತಲು ಸ್ವಚ್ಚತೆ, ಕಿಟಕಿ ಮೂಲಕ ಹಾವು ನುಗ್ಗದಂತೆ ತಡೆ ಮಾಡುವುದು, ಬೂಟ್ ಹಾಕಿಕೊಳ್ಳುವುದು, ರಾತ್ರಿ ಹೊತ್ತು ಟಾರ್ಚ್ ಬೆಳಕಿನಲ್ಲಿ ಸಂಚರಿಸುವುದು, ಹಾಸಿಗೆ ಸಮೀಪ ಬೆಲ್ ಇಟ್ಟುಕೊಳ್ಳುವುದು ಕೂಡ ಮುಖ್ಯವಾಗಿದೆ. ಕಚ್ಚಿದ ಜಾಗಕ್ಕೆ ಹೆಚ್ಚು ಬಿಗಿಯಾಗಿ ಕಟ್ಟುವುದರಿಂದ ರಕ್ತ ಸಂಚಾರ ಕಡಿಮೆಯಾಗಿ ಜೀವಕ್ಕೂ ಅಪಾಯ ತಂದೊಡ್ಡಲಿದೆ. ಹಾಗಾಗಿ ಕೂಡಲೇ ಅಸ್ಪತ್ರೆಗೆ ಕರೆತರುವುದು ಒಳ್ಳೆಯದು” ಎಂದು ಸಲಹೆ ನೀಡಿದರು.
ಆಸ್ಪತ್ರೆ ಪಾಲುದಾದ ಕ್ಯಾ. ಮುಕ್ಕಾಟೀರ ಎ. ಮಾದಪ್ಪ, ನೇತ್ರ ತಜ್ಞೆ ಡಾ. ಮುಕ್ಕಾಟೀರ ಸೌಮ್ಯ ನಾಣಯ್ಯ, ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.