ಪತ್ರಿಕಾ ವಿತರಕರ ಸಮಸ್ಯೆಗಳನ್ನು ಬಗೆಹರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕ ಧನ್ಯವಾದ ತಿಳಿಸಿದೆ.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಕಳೆದ ಐದು ವರ್ಷಗಳಿಂದ ಅಸಂಘಟಿತ ಕಾರ್ಮಿಕ ವಲಯದಲ್ಲಿ ಪತ್ರಿಕಾ ವಿತರಕರಿಗಾಗಿ 5 ಲಕ್ಷದ ಅಪಘಾತ ವಿಮಾ ಯೋಜನೆಯನ್ನು ಕೊಡಿಸಬೇಕೆಂದು ಮಾಡಿದ ಹೋರಾಟ ಯಶಸ್ವಿಯಾಗಿದ್ದು, ಯೋಜನೆಯಲ್ಲಿದ್ದ 16 ರಿಂದ 59 ವರ್ಷದವರೆಗೆ ಇದ್ದ ವಯೋಮಿತಿಯನ್ನು ಈಗ 16 ರಿಂದ 70 ವರ್ಷದವರೆಗೂ ಏರಿಕೆ ಮಾಡುವಲ್ಲಿ ಒಕ್ಕೂಟ ಯಶಸ್ವಿಯಾಗಿದೆ.
ಸಾಗರದ ಗಣೇಶ್ ಎಂಬ ಪತ್ರಿಕೆ ಹಂಚುವ ಹುಡುಗ ಅಪಘಾತದಲ್ಲಿ ಮೃತಪಟ್ಟಾಗ ದೇಶದ ಇತಿಹಾಸದಲ್ಲಿ ಒಬ್ಬ ಪತ್ರಿಕಾ ವಿತರಕನ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಕೊಡಿಸುವಲ್ಲಿ ಯಶಸ್ವಿಯಾಗಿದೆ. 2023 ಕಾರ್ಮಿಕ ಇಲಾಖೆಯ ಸಚಿವರ ಮುಖಾಂತರ ಹಾಗೂ ರಾಜ್ಯದಲ್ಲಿರುವ ಅನೇಕ ವಿತರಕರು ಸಂಕಷ್ಟದಲ್ಲಿ ಇದ್ದಾಗ ನಮಗೆ ನಾವೇ ಆಗಬೇಕೆಂಬ ಘೋಷವಾಕ್ಯದಲ್ಲಿ 60ಕ್ಕೂ ಹೆಚ್ಚು ವಿತರಕರಿಗೆ ಸಹಾಯ ಮಾಡಿದ್ದು, ಕೆಲವು ಬಾರಿ ಪತ್ರಿಕಾ ವಿತರಕರಿಂದ ನಮ್ಮ ರಾಜ್ಯದ ಎಲ್ಲಾ ವಿತರಕರುಗಳಿಂದ ದೇಣಿಗೆ ಸಂಗ್ರಹಿಸಿ ನೆರವು ನೀಡಿದ್ದು, ನೇರವಾಗಿ ಒಕ್ಕೂಟದ ವತಿಯಿಂದ ಪರಿಹಾರಗಳನ್ನು ನೀಡಿದ್ದು, ರಾಜ್ಯದ ವಿತರಕರ ಕನಸಿನ ಈ ಪಯಣಕ್ಕೆ ಸಹಕಾರಿಯಾದ ಕಾನಿಪ ಸಂಘದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗರಾರು, ಕಾರ್ಮಿಕ ಸಚಿವರು ಹಾಗೂ ಎಲ್ಲಾ ಜಿಲ್ಲಾ ಸಂಘಟನೆಗಳು ಸಹಕಾರಿಯಾಗಿವೆ ಎಂದು ಒಕ್ಕೂಟದ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಪತ್ರಿಕಾ ವಿತರಕರ ಯೋಜನೆಗೆ ರೂಪುರೇಷೆ ಸಿದ್ದಪಡಿಸುವ ಹೊಣೆಯನ್ನು ಆಗ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ವಹಿಸಲಾಗಿತ್ತು. ಬಹುತೇಕ ಮಾಧ್ಯಮ ಕಚೇರಿಗಳು ಅಕಾಡೆಮಿಯು ಮನವಿಗೆ ಸ್ಪಂದಿಸಲಿಲ್ಲ ಆ ವೇಳೆಗೆ ಅಕಾಡೆಮಿಯು ಅವಧಿ ಮುಕ್ತಾಯವಾಯಿತು. ವಾರ್ತಾ ಇಲಾಖೆ ಈ ಕೆಲಸವನ್ನು ಮುಂದುವರಿಸಬೇಕಾಗಿತ್ತು ಆದರೆ ಆ ಪ್ರಯತ್ನ ಇಲಾಖೆಯ ಕಡೆಯಿಂದ ಆಗಲಿಲ್ಲ. ಸರ್ಕಾರ ಘೋಷಣೆ ಮಾಡಿದ್ದ 2 ಕೋಟಿ ರೂ. ಆರಂಭಿಕ ಮೊತ್ತವಾಗಿದೆ. ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆಯೋ, ಗುಂಪು ವಿಮೆಯೋ ಯಾವ ರೀತಿಯಲ್ಲಿ ಜಾರಿಗೆ ತರಬೇಕೆಂದು ನಿಯಮಾವಳಿ ರೂಪುಗೊಂಡಿದ್ದರೆ ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯಲು ಸಾಧ್ಯತೆಗಳಿದ್ದವು. 2018ರ ಸೆಪ್ಟೆಂಬರ್ 5 ರಂದು ಸರ್ಕಾರ ಅನುಷ್ಠಾನ ಸಮಿತಿ ರಚನೆ ಮಾಡಿರುವುದಾಗಿ ಆದೇಶ ಹೊರಡಿಸಿರುವುದು ಬಿಟ್ಟರೆ ಮತ್ತೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಮಳೆ ಚಳಿ ಗಾಳಿ ಎನ್ನದೆ ಆರೋಗ್ಯವನ್ನು ಲೆಕ್ಕಿಸದೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸಿದ ವಿತರಕರು ಅಪಘಾತಗಳಿಂದ ಸಾವಿಗೆ ಗುರಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಉದ್ಯೋಗದ ಭದ್ರತೆಯೇ ಇಲ್ಲದಿರುವುದರಿಂದ ಯಾವ ಆರ್ಥಿಕ ನೆರವೂ ಅವರ ಕುಟುಂಬಕ್ಕೆ ಸಿಕ್ಕಿಲ್ಲ. ಸರ್ಕಾರದಿಂದಲೂ ಸ್ಪಂದನೆಯಾಗಿಲ್ಲ. ಕ್ಷೇಮ ನಿಧಿ ಯೋಜನೆ ಜಾರಿಗೆ ಬಂದಿದ್ದರೆ ಒಂದಷ್ಟು ನೆರವು ಅವರಿಗೂ ದೊರಕುತ್ತಿತ್ತು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಶಿವಮೊಗ್ಗ | ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ; ಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ
ಸರ್ಕಾರ, ವಾರ್ತಾ ಇಲಾಖೆ, ಮಾಧ್ಯಮ ಅಕಾಡೆಮಿ ಇನ್ನಾದರೂ ಆರು ವರ್ಷದಿಂದ ಕಪಾಟಿನಲ್ಲಿ ಕೊಳೆಯುತ್ತಿರುವ ಈ ಯೋಜನೆಯನ್ನು ಮರು ಜಾರಿಗೆ ತರಲು ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ್ ಮನವಿ ಮಾಡಿದರು.
