ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಭರವಸೆಗಳನ್ನು ಸರಿಯಾಗಿ ಈಡೇರಿಸುತ್ತಿಲ್ಲ, ಯೋಜನೆಗಳ ಅನುಷ್ಠಾನದಲ್ಲಿ ಪಕ್ಷ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಜೆಡಿಎಸ್ ರಾಯಚೂರು ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜೆಡಿಎಸ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಮಾಜಿ ಸಚಿವ ವೆಂಕಟರಾವ್ ನಾಡಗೌಡ, “ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಕಳೆದ ಮೂರು ತಿಂಗಳಿಂದ ಮಹಿಳೆಯರ ಖಾತೆಗೆ ಹಣ ವರ್ಗಾಯಿಸದೆ ಆಶ್ವಾಸನೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಅದಲ್ಲದೆ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಸಾಲಗಾರರ, ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ” ಎಂದು ಆರೋಪಿಸಿದರು.
“ಗ್ಯಾರಂಟಿಗಳ ಹಣವನ್ನು ರಾಜ್ಯ ಸರ್ಕಾರ ಚುನಾವಣೆ, ಉಪ ಚುನಾವಣೆಗಳ ಸಮಯಕ್ಕೆ ಸರಿಯಾಗಿ ಹೊಂದಿಸಿಕೊಂಡು ವರ್ಗಾವಣೆ ಮಾಡುತ್ತಿದೆ. ಕಳೆದ ಲೋಕಸಭೆಯ ಚುನಾವಣೆ ಮುನ್ನ ಐದಾರು ತಿಂಗಳ ಬಾಕಿಯನ್ನು ಒಮ್ಮೆ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿತ್ತು, ಮತ್ತು ಅದೇ ರೀತಿ ಈ ಬಾರಿಯು ಕೂಡಾ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವೇಳೆ ಈ ಹಣವನ್ನು ವರ್ಗಾಯಿಸಲು ಮುಂದಾಗಿದೆ.
ರಾಜ್ಯದ ಮಹಿಳೆಯರು ಮಾತಿಗೆ ತಪ್ಪಿದ ರಾಜ್ಯ ಸರ್ಕಾರವೆಂದು ಹಿಡಿಶಾಪ ಹಾಕುತ್ತಿದ್ದಾರೆ. ಈ ಯೋಜನೆ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿ ಇರುವ ಮಂತ್ರಿಯೊಬ್ಬರು ಮಾಧ್ಯಮಗಳಲ್ಲಿ ಪ್ರತಿ ತಿಂಗಳು ಕೊಡಲು ಇದೇನು ವೇತನವಲ್ಲವೆಂದು ಉಡಾಫೆ ಹೇಳಿಕೆಯನ್ನು ಸಹ ನೀಡಿರುತ್ತಾರೆ” ಎಂದು ಆಪಾದಿಸಿದರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, “ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ದಾರರ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು, ಇದರಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹೆಚ್ಚುವರಿ 5 ಕೆ.ಜಿ. ಅಕ್ಕಿಯನ್ನು ನೀಡಬೇಕಿತ್ತು. ಇದರ ಬದಲಾಗಿ ಪ್ರತಿ ಕೆಜಿ ಅಕ್ಕಿಗೆ ರೂ.34 ರೂ ಗಳಂತೆ ಒಟ್ಟು 690 ರೂ. ಗಳನ್ನು ಕುಟುಂಬದ ಖಾತೆಗೆ ಪ್ರತಿ ತಿಂಗಳು ವರ್ಗಾವಣೆ ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರ ಕಳೆದ 5 ತಿಂಗಳಿನಿಂದ ಬಿಡುಗಡೆ ಮಾಡಬೇಕಾಗಿರುವ ರೂ. 5786 ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಿರುವುದಿಲ್ಲ. ರಾಜ್ಯಸರ್ಕಾರದ ಈ ವೈಫಲ್ಯದಿಂದ ಹಸಿದ ಬಡ ಕುಟುಂಬಗಳು ಕಂಗಾಲಾಗಿದ್ದಾರೆ” ಎಂದರು.
ಕಾಂಗ್ರೆಸ್ ಸರ್ಕಾರ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ ಪಂಚ ಗ್ಯಾರಂಟಿಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ಮತ್ತು ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನಾಲ್ಕೈದು ತಿಂಗಳಿನಿಂದ ಬಿಡುಗಡೆಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಮೈಕ್ರೋಫೈನಾನ್ಸ್ ಹಾವಳಿಯಿಂದ ಆತ್ಮಹತ್ಯೆಯಿಂದ ನೊಂದ ಕುಟುಂಬಗಳಿಗೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ರಾಯಚೂರು | ಕನ್ನಡ ಪ್ರಜ್ಞೆ ಕನ್ನಡಿಗರೆಲ್ಲರಲ್ಲೂ ಮೂಡಬೇಕು: ಸಂಸದ ಕುಮಾರ ನಾಯಕ
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಎನ್ ಶಿವಶಂಕರ ವಕೀಲ, ಮುಖಂಡರಾದ ಬುಡ್ಡನಗೌಡ, ಸಣ್ಣ ನರಸಿಂಹ ನಾಯಕ, ರಾಮಕೃಷ್ಣ, ತಿಮ್ಮಾರೆಡ್ಡಿ, ಲಕ್ಷ್ಮೀಪತಿ ಗಾಣದಾಳ, ನರಸಪ್ಪ ಆಶಾಪೂರು ಸೇರಿದಂತೆ ಅನೇಕರು ಇದ್ದರು.
