ಗುಡ್ಡದ ಶ್ರೀ ರಂಗನಾಥಸ್ವಾಮಿ ದೇವಾಲಯದ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು ಸಿಸಿಟಿವಿ ಡಿವಿಆರ್ ಕದ್ದು ಹುಂಡಿ ಒಡೆದು ಸುಮಾರು ಇಪ್ಪತ್ತು ಸಾವಿರ ಕಳ್ಳತನ ಮಾಡಿರುವ ಘಟನೆ ಗುರುವಾರ ಮುಂಜಾನೆ ತಾಲ್ಲೂಕಿನ ಕಸಬಾ ಹೋಬಳಿಯ ಸುರಿಗೇನಹಳ್ಳಿ ಗುಡ್ಡದಲ್ಲಿ ನಡೆದಿದೆ.
ಪ್ರತಿ ದಿನದಂತೆ ಅರ್ಚಕ ರಂಗೇಗೌಡ ಬೆಳಗ್ಗೆ 8 ಗಂಟೆ ಸಮಯದಲ್ಲಿ ದೇವಸ್ಥಾನದ ಬಳಿ ಪೂಜೆ ಮಾಡಲು ಬಂದು ದೇವಸ್ಥಾನದ ಬೀಗ ತೆಗೆದಾಗ ಕಳ್ಳರು ಕಿಟಕಿ ಮುರಿದು ಒಳನುಗ್ಗಿ ಹುಂಡಿ ಒಡೆದ ಘಟನೆ ಬಗ್ಗೆ ತಿಳಿದಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಕಳ್ಳತನ ನಡೆದಿತ್ತು. ಇದೊಂದೇ ದೇವಸ್ಥಾನದಲ್ಲಿ ಸತತ 6 ಬಾರಿ ಕಳ್ಳತನ ನಡೆದಿರುವುದು ಗಮನಿಸಬೇಕಾದ ಅಂಶವಾಗಿದೆ. ಕಳೆದ 5 ದಿನಗಳ ಹಿಂದೆಯಷ್ಟೇ ದೇವಸ್ಥಾನದ ಹುಂಡಿಯ ಹಣ ತೆಗೆದು ಲೆಕ್ಕ ಮಾಡಿ ಎಲ್ಲಾ ಹಣವನ್ನು ಬ್ಯಾಂಕ್ ನಲ್ಲಿ ಹಾಕಿದ್ದ ಕಾರಣ ಕಳ್ಳರ ಕೈ ಚಳಕ ಪ್ರಯೋಜನಕ್ಕೆ ಬಂದಿಲ್ಲ.
ಕಳ್ಳತನ ಪ್ರಯತ್ನ ನಡೆದ ಮೇಲೆ ಸಿಕ್ಕಿ ಬೀಳುವ ಭಯದಲ್ಲಿ ಸಿಸಿಟಿವಿ ಗೆ ಅಳವಡಿಸಿದ್ದ ಡಿವಿಆರ್ ಕದ್ದು ಪರಾರಿಯಾಗಿರುವ ಘಟನೆ ಲೋಕಲ್ ಕಳ್ಳರ ಕೆಲಸ ಎಂದು ಸ್ಥಳೀಯರು ಚರ್ಚೆ ಮಾಡುತ್ತಿದ್ದಾರೆ. ಒಂದೇ ವರ್ಷದಲ್ಲಿ ನಾಲ್ಕು ಬಾರಿ ಒಂದೇ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಗುಬ್ಬಿ ಪೊಲೀಸರು ಕಳ್ಳರ ಜಾಡು ಹಿಡಿಯುವರೇ ಕಾದು ನೋಡಬೇಕಿದೆ.
