ಮರಾಠಿ ಮುಂಬೈನ ಭಾಷೆಯಾಗಿದೆ. ಹೊರಗಿನಿಂದ ಬರುವವರು ಮತ್ತು ಇತರೆ ಭಾಷೆ ಮಾತನಾಡುವವರೂ ಕೂಡಾ ಮರಾಠಿ ಭಾಷೆ ಕಲಿಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಯಕ ಸುರೇಶ್ ಬೈಯಾಜಿ ಜೋಶಿ ಗುರುವಾರ ಹೇಳಿದ್ದಾರೆ. ಈ ಮೂಲಕ ಯೂಟರ್ನ್ ಹೊಡೆದಿದ್ದಾರೆ.
ಬುಧವಾರ ಘಟಕ್‌ಪುರದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಜೋಶಿ ನೀಡಿದ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ವಿಪಕ್ಷವಾದ ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಜೋಶಿ ಹೇಳಿಕೆಯನ್ನು ಟೀಕಿಸಿದ್ದರು. ಇದಾದ ಬೆನ್ನಲ್ಲೇ ಜೋಶಿ ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮರಾಠಿ ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಸರಕಾರಕ್ಕೆ ವಿಜಯೇಂದ್ರ ಆಗ್ರಹ
ಘಟಕ್‌ಪುರದಲ್ಲಿ ಮಾತನಾಡಿದ್ದ ಆರ್‌ಎಸ್‌ಎಸ್ ನಾಯಕ, “ಮುಂಬೈನಲ್ಲಿ ಒಂದೇ ಭಾಷೆ ಇರುವುದಲ್ಲ. ಮುಂಬೈನ ಪ್ರತಿ ಭಾಗದಲ್ಲಿಯೂ ಬೇರೆ ಬೇರೆ ಭಾಷೆಯಿದೆ. ಘಟಕ್‌ಪುರದ ಭಾಷೆ ಗುಜರಾತಿಯಾಗಿದೆ. ಮುಂಬೈನಲ್ಲಿ ನೆಲೆಸಿದ್ದರೆ ಮರಾಠಿಯನ್ನೇ ಕಲಿಯಬೇಕು ಎಂಬ ಅಗತ್ಯವೇನಿಲ್ಲ” ಎಂದು ಹೇಳಿದ್ದರು.
ವಿಪಕ್ಷಗಳ ಟೀಕೆಗೆ ಒಳಗಾಗುತ್ತಿದ್ದಂತೆ ಯೂಟರ್ನ್ ಹೊಡೆದಿರುವ ಆರ್‌ಎಸ್‌ಎಸ್ ನಾಯಕ, “ಮರಾಠಿ ಮುಂಬೈನ ಸ್ಥಳೀಯ ಭಾಷೆ, ಈ ಬಗ್ಗೆ ನನಗೆ ಹೆಮ್ಮೆಯಿದೆ. ಆ ಬಗ್ಗೆ ಎರಡು ಅಭಿಪ್ರಾಯಗಳು ನನ್ನಲ್ಲಿ ಇಲ್ಲ. ಬೇರೆ ಬೇರೆ ಭಾಷೆಯನ್ನು ಮಾತನಾಡುವ ಜನರು ಮುಂಬೈನಲ್ಲಿ ಇದ್ದಾರೆ, ಆದರೆ ಸಾಮರಸ್ಯದಿಂದ ಬದುಕುತ್ತಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
“ಇತರೆ ರಾಜ್ಯಗಳಿಂದ ಬರುವವರು ಮತ್ತು ಇತರ ಭಾಷೆಗಳನ್ನು ಮಾತನಾಡುವವರೂ ಕೂಡಾ ಮರಾಠಿ ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತೇವೆ. ನಾನು ಘಟಕ್‌ಪುರದಲ್ಲಿ ನೀಡಿದ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ” ಎಂದಿದ್ದಾರೆ.
