ಹೆದ್ದಾರಿ ದರೋಡೆಕೋರರು ಟ್ರಕ್ ಚಾಲಕನನ್ನು ಕೊಲೆ ಮಾಡಿ 1 ಕೋಟಿ ರೂಪಾಯಿ ಮೌಲ್ಯದ 13 ಟನ್ ಉಕ್ಕನ್ನು (ಸ್ಟೀಲ್) ದರೋಡೆ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.
ಉಕ್ಕಿನ ಕಚ್ಚಾ ಸಾಮಗ್ರಿ ತುಂಬಿದ್ದ ಟ್ರಕ್ ಮಹಾರಾಷ್ಟ್ರದ ಮೀರಜ್‌ನಿಂದ ಚೆನ್ನೈಗೆ ಗುರುವಾರ ರಾತ್ರಿ ತೆರಳುತ್ತಿತ್ತು. ಹಾವೇರಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರ ಹಾನಗಲ್ ಬೈಪಾಸ್ ಬಳಿ ಕಳ್ಳರು ಟ್ರಕ್ ಮೇಲೆ ದಾಳಿ ನಡೆಸಿ, ಚಾಲಕನನ್ನು ಹತ್ಯೆಗೈದಿದ್ದಾರೆ. ಲಾರಿಯಲ್ಲಿದ್ದ ಉಕ್ಕಿನ ಸಾಮಗ್ರಿಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಸಾಂಗ್ಲಿ ನಿವಾಸಿ, ಚಾಲಕ ಗೋವಿಂದ್ ಖಂಡೇಕರ್ (40) ಹತ್ಯೆಗೀಡಾದ ದುರ್ದೈವಿ ಎಂದು ಗುರುತಿಸಲಾಗಿದೆ. ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಗೋಂವಿದ್ ಪತ್ತೆಯಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶುಕ್ರವಾರ ಅವರು ಸಾವನ್ನಪ್ಪಿದ್ದಾರೆ.
ದರೋಡೆಕೋರರು ಚಾಲಕ ಗೋವಿಂದ್ ಮೇಲೆ ಹಲ್ಲೆ ನಡೆಸಿ ರಾಷ್ಟ್ರೀಯ ಹೆದ್ದಾರಿಯ ನೆಲೋಗಲ್ ಬಳಿ ಬಿಟ್ಟು ಹೋಗಿದ್ದಾರೆ ಎಂದು ಹಾವೇರಿ ಎಸ್‌ಪಿ ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ.