ರಾಜ್ಯದ ದೇವದಾಸಿ ಮಹಿಳೆಯರು ಹಾಗೂ ಮಸಣ ಕಾಯುವ ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
“ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿ/ಸಹಾಯಧನವನ್ನು 2025ರ ಈ ಬಜೆಟ್‌ನಲ್ಲಿ ಕನಿಷ್ಠ 3000 ರೂಗಳಿಗೆ ಹೆಚ್ಚಿಸಬೇಕು. ಸ್ವಯಂ ಉದ್ಯೋಗದಡಿ ನೀಡಲಾಗುವ ಸಹಾಯಧನವನ್ನು ಕನಿಷ್ಠ 1.50 ಲಕ್ಷ ರೂಗಳಿಗೆ ಹೆಚ್ಚಿಸಲು ಅಗತ್ಯ ಕ್ರಮ ವಹಿಸಬೇಕು. ಉಚಿತ ನಿವೇಶನದ ಜೊತೆ ರಾಜೀವ ಗಾಂಧಿ ವಸತಿ ಯೋಜನೆಯಡಿ ಅಳವಡಿಸಿ ಸುಸಜ್ಜಿತ ಮನೆಯನ್ನು ಕಟ್ಟಿಸಿಕೊಡಲು ಕ್ರಮ ವಹಿಸಬೇಕು. ಇದರಲ್ಲೂ ರಾಜೀವ್ ಗಾಂಧಿ ವಸತಿ ನಿಗಮವು ಈ ದುರ್ಬಲ ಮಹಿಳೆಯರಿಂದ ವಂತಿಗೆಯನ್ನು ತೆಗದುಕೊಳ್ಳುತ್ತಿದೆ. ವಂತಿಗೆ ತೆಗೆದುಕೊಳ್ಳುತ್ತಿರುವವರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬ್ಯಾಂಕಗಳು ಸಾಲ ಸೌಲಭ್ಯ ಒದಗಿಸಲು ನಿರಾಕರಿಸುತ್ತಿವೆ. ಇಂತ ಕೊರತೆಯನ್ನು ನಿವಾರಿಸಲು ಸರಕಾರವೇ ಈ ಮಹಿಳೆಯರ ಪರವಾಗಿ ವಂತಿಗೆ ನೀಡಲು ಅಗತ್ಯ ಕ್ರಮ ವಹಿಸಬೇಕು” ಎಂದು ಮನವಿ ಮಾಡಿದರು.

ರಾಜ್ಯದ ಮಸಣ ಕಾರ್ಮಿಕರನ್ನು ಗುರುತಿಸಿ ಅವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರವರ್ಗದಡಿ ಶಿಕ್ಷಣದಲ್ಲಿ ಮೀಸಲಾತಿ ಹಾಗೂ ಅವರಿಗೆ ಇತರೆ ಸರ್ಕಾರಿ ಸೌಲಭ್ಯಗಳ ಒದಗಿಸಲು ಕ್ರಮವಹಿಸಿರುವುದು ಸ್ವಾಗತಾರ್ಹ ಹಾಗೂ ಅವರ ಗಣತಿ ಮಾಡಿ ಅವರಿಗೆ ಪೆನ್ನನ್ ಜಾರಿಗೊಳಿಸಬೇಕು. ತಮಗೆ ಸೌಲಭ್ಯಗಳನ್ನು ಒದಗಿಸಬೇಕಾದಲ್ಲಿ ನಮ್ಮ ಕುಟುಂಬದಿಂದ ಸರ್ಕಾರದ ವಿವಿಧ ಇಲಾಖೆಗಳು ನಮ್ಮಿಂದ ‘ನಾವು ಮಸಣ ಕಾರ್ಮಿಕರು’ ಎಂಬುದಕ್ಕೆ ಪ್ರಮಾಣಪತ್ರ ಕೇಳುತ್ತಿವೆ. ಆದ್ದರಿಂದ, ಗಣತಿಗೆ ಕ್ರಮ ವಹಿಸಬೇಕೆಂದು ಒತ್ತಾಯ ಮಾಡಿದರು. ಕನಿಷ್ಟ 45 ವಯೋಮಾನದವರಿಂದ ಮಾಸಿಕ 3000 ಪಿಂಚಣಿಯನ್ನು ಘೋಷಿಸಲು ಮತ್ತು ನಮ್ಮ ಕುಣಿ ತೆಗೆಯುವ ಹಾಗೂ ಶವ ಹೂಳುವ ಕೆಲಸವನ್ನು ಉದ್ಯೋಗ ಖಾತ್ರಿಯಡಿ ತಂದು ಅದನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ, ಸುರಕ್ಷಿತ ಕ್ರಮಗಳನ್ನು ಮತ್ತು ಪರಿಕರಗಳನ್ನು ಒದಗಿಸಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದುರ್ಗಮ್ಮ, ಯಂಕಮ್ಮ, ಈರಮ್ಮ, ನಾಗವ್ವ, ನಾಗರಾಜ್, ಸ್ವಾಮಿ ವಿಕಾಸ, ಹುಲಗವ್ವ, ಯಮನೂರಪ್ಪ, ದುರ್ಗಪ್ಪ ಹಾಗೂ ಹಲವರಿದ್ದರು.
