ರೈತರಿಗೆ ಹೆಚ್ಚಿನ ಆದಾಯ ಒದಗಿಸುವಲ್ಲಿ ತೋಟಗಾರಿಕಾ ಬೆಳೆಗಳ ಕೊಡುಗೆ ಮಹತ್ವದ್ದಾಗಿದೆ. ಇತ್ತೀಚಿನ ಬೆಳೆ ಪದ್ಧತಿ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ತಂತ್ರಜ್ಞಾನದಲ್ಲಾದ ಆಧುನೀಕರಣದ ಅನುಕೂಲವನ್ನು ಬೆಳೆಗಾರರಿಗೆ ತಲುಪಿಸುವ ಉದ್ದೇಶದಿಂದ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ-2 ಅನ್ನು ಜಾರಿಗೊಳಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ 95 ಕೋಟಿ ರೂ. ಅನುದಾನ ಒದಗಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ತಿಳಿಸಿದರು.
ತೋಟಗಾರಿಕೆ ವಲಯಕ್ಕೆ ಸಿಕ್ಕಿದ್ದೇನು?
- ತೋಟಗಾರಿಕಾ ಬೆಳೆಗಳ ವಿಸ್ತೀರ್ಣ, ಉತ್ಪಾದನೆ, ಬೆಳೆಗಳ ಆರೋಗ್ಯ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ನೈಜ ಸಮಯದ (Real Time) ಆಧಾರದ ಮೇಲೆ ರೈತರಿಗೆ ಮಾಹಿತಿ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ ಮತ್ತು ಖಾಸಗಿ ಸಹಯೋಗದಲ್ಲಿ ಜ್ಞಾನ ಕೋಶ ಸ್ಥಾಪಿಸಲಾಗುವುದು.
- ರಾಜ್ಯದ 20 GI ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳು ಕಣ್ಮರೆಯಾಗಿ ನಶಿಸಿ ಹೋಗುವುದನ್ನು ತಪ್ಪಿಸಲು ದೇಶಿ ತಳಿಗಳ ಬೀಜ ಬ್ಯಾಂಕ್ ಸ್ಥಾಪಿಸಲಾಗುವುದು.
- ಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ ಮತ್ತು ಎಲೆ ಮುಟುರು ರೋಗ, ತ್ರಿಪ್ಸ್ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳಲಾಗುವುದು.
- ತೋಟಗಾರಿಕೆ ಇಲಾಖೆಯ ಅಧೀನದ ಆಯ್ದ ಕ್ಷೇತ್ರಗಳು ಮತ್ತು ನರ್ಸರಿಗಳಡಿ ಸಾರ್ವಜನಿಕ-ಖಾಸಗಿ ಸಹಯೋಗದೊಂದಿಗೆ ಹೂ-ಕೃಷಿ, ಅಲಂಕಾರಿಕ ಸಸ್ಯಗಳು, ಔಷಧೀಯ ಸಸ್ಯಗಳನ್ನು ಬೆಳೆಸಲು ಹಾಗೂ ತೋಟಗಾರಿಕಾ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಾರ್ಯಕ್ರಮವನ್ನು ರೂಪಿಸಲಾಗುವುದು.
- ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿಯನ್ನು ಪಡೆದುಕೊಳ್ಳಲಾಗುವುದು.
- ತೋಟಗಾರಿಕಾ ಬೆಳೆಗಳ ಹನಿ ನೀರಾವರಿ ಕಾರ್ಯಕ್ರಮದಡಿ ಸುಮಾರು 52,000 ಫಲಾನುಭವಿಗಳಿಗೆ 426 ಕೋಟಿ ರೂ. ಸಹಾಯ ಧನವನ್ನು ಒದಗಿಸಲಾಗುವುದು.
- ಮಲೆನಾಡು ಜಿಲ್ಲೆಗಳಲ್ಲಿ ಎಲೆ ಚುಕ್ಕೆ ರೋಗದ ಬಾಧೆಗೆ ತುತ್ತಾಗಿ 2 ಲಕ್ಷಕ್ಕಿಂತ ಅಧಿಕ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಈ ರೋಗ ನಿಯಂತ್ರಿಸಲು ಸಸ್ಯ ಸಂರಕ್ಷಣಾ ಕ್ರಮಗಳಿಗಾಗಿ 62 ಕೋಟಿ ರೂ. ಒದಗಿಸಲಾಗಿದೆ.
- ತೆಂಗು ಬೆಳೆಯುವ ಪ್ರದೇಶಗಳಲ್ಲಿ ಕಪ್ಪು ತಲೆ ಹುಳುವಿನ ಬಾಧೆಯ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ಇದರ ಆಧಾರದ ಮೇಲೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುವುದು.