2025-26ನೇ ಸಾಲಿನ ರಾಜ್ಯ ಬಜೆಟ್‌ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ರಾಜ್ಯದಲ್ಲಿ ನಿರಾವರಿ ಕೃಷಿ ಪ್ರದೇಶವನ್ನು ವಿಸ್ತರಿಸಲು ಹಲವಾರು ಯೋಜನೆಗಳು, ಕಾಮಗಾರಿಗಳನ್ನು ಕೈಗೊಡಿರುವುದಾಗಿ ಮತ್ತು ಕೈಗೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ. ನೀರಾವರಿ ಯೋಜನೆಗಳಡಿ ನೀರಿನ ಬಳಕೆಯಲ್ಲಿ ದಕ್ಷತೆ ಹೆಚ್ಚಿಸಲು ಹಾಗೂ ನೀರು ನಿರ್ವಹಣೆಯಲ್ಲಿ ಸುಧಾರಣೆ ತರಲು ‘ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕ2024ನ್ನು ತಿದ್ದುಪಡಿ ಮಾಡಿ ಜಾರಿಗೊಳಿಲಾಗಿದೆ ಎಂದು ವಿವರಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಯಡಿ ನೀರಾವರಿಗೆ ನೀಡಲಾದ ಬಜೆಟ್ ಹಂಚಿಕೆಯ ಮುಖ್ಯಾಂಶಗಳು;
- ಎತ್ತಿನಹೊಳೆ ಯೋಜನೆಯಡಿ ನೀರನ್ನು ಮೇಲೆತ್ತಿ ಗುರುತ್ವಾ ಕಾಲುವೆಯ ಸರಪಳಿಯಲ್ಲಿ 241 ಕಿ.ಮೀ.ವರೆಗೆ ಹರಿಸುವ ಗುರಿ. ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕ್ರಮ. ಎತ್ತಿನಹೊಳೆಯ ಯೋಜನೆಯಿಂದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ 45 ಕೆರೆಗಳನ್ನು ಹಾಗೂ ಕೊರಟಗೆರೆ ತಾಲೂಕಿನ 62 ಕೆರೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸುವ ಯೋಜನೆಯನ್ನು 553 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನ.
- ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಘೋಷಿಸಿದ 5,300 ಕೋಟಿ ರೂ. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಆದರೂ, ರಾಜ್ಯ ಸರ್ಕಾರವು ಅಗತ್ಯ ಅನುದಾನವನ್ನು ಒದಗಿಸಿ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ.
- ತರೀಕೆರೆ ಏತ ನೀರಾವರಿ ಯೋಜನೆಯಡಿ 79 ಕೆರೆಗಳನ್ನು ತುಂಬಿಸುವ ಮೂಲಕ 49,790 ಎಕರೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ.
- ಪ್ರಸಕ್ತ ಸಾಲಿನಲ್ಲಿ 2,611 ಕೋಟಿ ರೂ. ಅಂದಾಜು ಮೊತ್ತದಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳಿಸುವ ಗುರಿ. ಹೊಸದುರ್ಗ, ಹೊಳಲ್ಕೆರೆ, ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲೂಕುಗಳಲ್ಲಿನ 30 ಕೆರೆಗಳನ್ನು ತುಂಬಿಸಲು ಕ್ರಮ.
- ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟಿನ ಗೇಟನ್ನು 524.256 ಮೀಟರ್‌ವರೆಗೆ ಎತ್ತರಿಸಲು ಮುಳುಗಡೆಯಾಗುವ ಜಮೀನುಗಳನ್ನು ಒಪ್ಪಂದ ಐತೀರ್ಪಿನ (Consent Award) ಮುಖಾಂತರ ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ವಿತರಣೆಗೆ ಕ್ರಮ. ಅಲ್ಲದೇ, 2.01 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಬಾಕಿ ಕಾಮಗಾರಿಗಳ ಜಾರಿ.
- ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳ ತೀರುವಳಿ ದೊರೆತ ಕೂಡಲೇ ಯೋಜನೆ ಅನುಷ್ಠಾನ.
- ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯಡಿ 3.9 ಟಿಎಂಸಿ ನೀರಿನ ಬಳಕೆಗಾಗಿ ಕೇಂದ್ರ ಸರ್ಕಾರದಿಂದ ತೀರುವಳಿಗಳನ್ನು ನಿರೀಕ್ಷಿಸಿ ಈಗಾಗಲೇ ಯೋಜನಾ ಕಾಮಗಾರಿಗಳನ್ನು ಕೆಲವು ಷರತ್ತುಗಳೊಂದಿಗೆ ಗುತ್ತಿಗೆ ವಹಿಸಲಾಗಿದೆ. ಕೇಂದ್ರ ಸರ್ಕಾರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿಗಳ ಪ್ರಾರಂಭ.
- ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಹಾಗೂ ಇತರ ನದಿಗಳ ಕಣಿವೆಯ ವಿವಿಧ ಯೋಜನೆಗಳಡಿ ಬಾಕಿ ಇರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಕ್ರಮ.
- ಕೃಷ್ಣಾ ಕಣಿವೆಯ ಅನುಷ್ಠಾನ ಹಂತದಲ್ಲಿರುವ ಆಧುನೀಕರಣ ಹಾಗೂ ಏತ ನೀರಾವರಿ ಯೋಜನೆಗಳನ್ನು PMKSY – AIBP ಯೋಜನೆಯಡಿ ಕೇಂದ್ರ ಸರ್ಕಾರದ ಸಹಾಯಧನ ಪಡೆಯಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ಕ್ರಮ.
- 1,080 ಕೋಟಿ ರೂ. ಮೊತ್ತದಲ್ಲಿ ವೃಷಭಾವತಿ ವ್ಯಾಲಿ ಮೊದಲನೇ ಹಂತದ 70 ಕೆರೆ ತುಂಬಿಸುವ ಯೋಜನೆ ಜಾರಿ
- 70 ಕೋಟಿ ರೂ. ಮೊತ್ತದಲ್ಲಿ ಹೆಚ್.ಎನ್ ವ್ಯಾಲಿ 2ನೇ ಹಂತದ ಯೋಜನೆಯಡಿ 24 ಕೆರೆ ತುಂಬಿಸುವ ಯೋಜನೆ ಅನುಷ್ಠಾನ
- 93.50 ಕೋಟಿ ರೂ. ಮೊತ್ತದಲ್ಲಿ ಬೆಂಗಳೂರು ಪೂರ್ವ ತಾಲೂಕಿನ 18 ಕೆರೆ ತುಂಬಿಸುವ ಯೋಜನೆ ಹಾಗೂ ಇತರೆ ಯೋಜನೆ ಅನುಷ್ಠಾನ.
- ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಸಣ್ಣ ನೀರಾವರಿ ಯೋಜನೆಗಳಾದ ಕೆರೆಗಳ ಆಧುನೀಕರಣ, ಅಣೆಕಟ್ಟು ಮತ್ತು ಪಿಕಪ್, ಕಿಂಡಿ ಅಣೆಕಟ್ಟು, ಏತ ನೀರಾವರಿ, ನಿಷ್ಕ್ರಿಯ ಯೋಜನೆಗಳ ಪುನರುಜ್ಜೀವನ ಇತ್ಯಾದಿ ಯೋಜನೆಗಳಡಿ ಒಟ್ಟಾರೆ 2,000 ಕೋಟಿ ರೂ. ಮೊತ್ತದ ಹೊಸ ಕಾಮಗಾರಿ ನಡೆಸಲು ಕ್ರಮ.