ತಾಯಿಯ ಶವಸಂಸ್ಕಾರ ಮಾಡಲು ಆಕೆಯ ಗಂಡು ಮಕ್ಕಳೇ ₹40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಅಮಾನವೀಯ ಘಟನೆ ಗೌರಿಬಿದನೂರಿನ ದೊಡ್ಡಕುರುಗೋಡು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಡಗತ್ತೂರಿನಲ್ಲಿ ಹೆಣ್ಣುಮಕ್ಕಳ ಮನೆಯಲ್ಲಿ ವಾಸವಿದ್ದ ಅನಂತಕ್ಕ ಎಂಬಾಕೆ ವಯೋಸಹಜ ಕಾಯಿಲೆಯಿಂದ ಬುಧವಾರ ಮೃತಪಟ್ಟಿದ್ದರು. ಸ್ವಂತ ಜಮೀನಿನಲ್ಲಿ ತಂದೆಯ ಸಮಾಧಿಯ ಪಕ್ಕ ತಾಯಿಯ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿ ಪುತ್ರಿಯರು ದೊಡ್ಡಕುರುಗೋಡುಗೆ ತೆರಳಿದ್ದಾರೆ. ಅಲ್ಲಿಗೆ ಬಂದ ಮೃತಳ ಇಬ್ಬರು ಗಂಡು ಮಕ್ಕಳು 40 ಲಕ್ಷ ಹಣ ನೀಡಿದರೆ ಮಾತ್ರ ಜಮೀನಿನಲ್ಲಿ ಹೆಣ ಹೂಳಲು ಅವಕಾಶ ನೀಡುವುದಾಗಿ ಪಟ್ಟು ಹಿಡಿದಿದ್ದಾರೆ. ಮಕ್ಕಳ ಹಣದ ದುರಾಸೆಯಿಂದ ಇತ್ತ ತಾಯಿಯ ಶವ ಬಿಸಿಲಿನಲ್ಲಿ ಅನಾಥವಾಗಿ ಬಿದ್ದಿತ್ತು.
ಮೃತ ಅನಂಕ್ಕನ ಹೆಸರಿನಲ್ಲಿದ್ದ 2 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆಂದು ವಶಪಡಿಸಿಕೊಂಡು ಪರಿಹಾರವಾಗಿ ಕೆಐಎಡಿಬಿ 90 ಲಕ್ಷ ನೀಡಿತ್ತು. ಇಬ್ಬರೂ ಗಂಡು ಮಕ್ಕಳು ಸಮನಾಗಿ ಹಂಚಿಕೊಂಡಿದ್ದರು. ಬಳಿಕ ಕೋರ್ಟ್ ಮೆಟ್ಟಿಲೇರಿ 4 ಜನ ಪುತ್ರಿಯರೂ ಅದರಲ್ಲಿ ಸಮಾನ ಹಣ ಪಡೆದರು. ಅದನ್ನು ವಾಪಾಸ್ ಕೊಡುವಂತೆ ಈಗ ಕ್ಯಾತೆ ತೆಗೆದಿದ್ದಾರೆ ಎಂದು ವೃದ್ಧೆಯ ಮೊಮ್ಮಗಳು ಶಾಂತಮ್ಮ ಹೇಳಿದ್ದಾರೆ.
ಇದನ್ನೂ ಓದಿ: ಗೌರಿಬಿದನೂರು | ಮೂವರು ಮನೆಗಳ್ಳರ ಬಂಧನ
ಕೊನೆಗೆ ವಿಷಯ ತಹಶೀಲ್ದಾರ್ ಮಹೇಶ್ ಅವರಿಗೂ ತಲುಪಿದೆ. ಸ್ಥಳಕ್ಕೆ ಭೇಟಿ ನೀಡಿದ ಅವರು ಎಲ್ಲಾ ಮಕ್ಕಳೊಂದಿಗೆ ಮಾತುಕತೆ ನಡೆಸಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
