ನ್ಯಾಯಾಲಯಕ್ಕೆ ಕರೆತಂದಿದ್ದ ವಿಚಾರಣಾಧೀನ ಕೈದಿಯೊಬ್ಬ ಪೊಲೀಸರನ್ನು ನೂಕಿ ಪರಾರಿಯಾಗಿರುವ ಘಟನೆ ಮಸ್ಕಿ ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ಆವರಣದಲ್ಲಿ ನಿನ್ನೆ (ಮಾ.6) ನಡೆದಿದೆ.
ದೊಡ್ಡ ದುರುಗೇಶ ಪರಾರಿಯಾದ ಕೈದಿ. ಕಳ್ಳತನ ಪ್ರಕರಣವೊಂದರ ಕುರಿತು ವಿಚಾರಣೆಗೆ ಹೋಗಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಆರೋಪದಡಿ ದೊಡ್ಡ ದುರುಗೇಶ ಹಾಗೂ ಸಣ್ಣ ದುರುಗೇಶರನ್ನು ಬಂಧಿಸಿ 20 ದಿನಗಳ ಹಿಂದೆ ಜೈಲಿಗೆ ಕಳಿಸಲಾಗಿತ್ತು. ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಬಳಿಕ ಪುನಃ ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.
ನ್ಯಾಯಾಲಯದ ಸಭಾಂಗಣದಿಂದ ಹೊರಬರುತ್ತಿದ್ದಂತೆ ಪೊಲೀಸರನ್ನು ನೂಕಿ ದೊಡ್ಡ ದುರುಗೇಶ ಪರಾರಿಯಾಗಿದ್ದಾನೆ. ಬೆನ್ನಟ್ಟಿದರೂ ಸಿಗದೆ ಜಾಲಿ ಮುಳ್ಳುಗಳ ನಡುವೆ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ರಾಯಚೂರು | ಗ್ಯಾರಂಟಿ ವೈಫಲ್ಯ ಆರೋಪ; ಜೆಡಿಎಸ್ ಪ್ರತಿಭಟನೆ
ಇತ್ತ ಕೈದಿ ಪರಾರಿಯಾದ ಪ್ರಕರಣ ಸಂಬಂಧ ಕರ್ತವ್ಯನಿರತ ಪೊಲೀಸರ ಮೇಲೆ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಿದೆ. ತಪ್ಪಿಸಿಕೊಂಡಿರುವ ಕೈದಿ ದೊಡ್ಡ ದುರುಗೇಶನ ಪತ್ತೆಗೆ 2 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
