ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೂರು ಸ್ಥಳಗಳನ್ನು ಗುರುತಿಸಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ.
ಪ್ರಸ್ತಾಪಿತ ವರದಿಯಂತೆ ಎರಡು ಸ್ಥಳಗಳು ಬೆಂಗಳೂರು ದಕ್ಷಿಣದ ಕನಕಪುರ ರಸ್ತೆಯಲ್ಲಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ದಿಕ್ಕಿನಲ್ಲಿವೆ. ಮತ್ತೊಂದು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರಲಿದೆ.
ಪ್ರಸ್ತಾಪಿಸಲಾದ ಒಂದು ಸ್ಥಳವೂ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದ ಕೊನೆಯ ನಿಲ್ದಾಣದಿಂದ 10 ಕಿ.ಮೀ ದೂರದ ಹಾರೋಹಳ್ಳಿ ಬಳಿಯಲ್ಲಿ ಗುರುತಿಸಲಾಗಿದೆ. ಕನಕಪುರ ರಸ್ತೆಯ ಉದ್ದೇಶಿತ ಎರಡು ಸ್ಥಳಗಳು ಕ್ರಮವಾಗಿ 4800 ಹಾಗೂ 5000 ಎಕರೆ ಸ್ಥಳ ಹೊಂದಿವೆ ಎಂದು ತಿಳಿಸಲಾಗಿದೆ.
ಮೂರನೇ ಉದ್ದೇಶಿತ ಸ್ಥಳವು ಕುಣಿಗಲ್ ರಸ್ತೆಯ ನೆಲಮಂಗಲದಲ್ಲಿದ್ದು,ಅಧಿಕಾರಿಗಳು ಸ್ಥಳ ಗುರುತಿಸಿದಂತೆ 5200 ಎಕರೆ ಭೂಮಿ ಹೊಂದಿದೆ. ರಾಜ್ಯ ಸರ್ಕಾರವು ವಿಮಾನಯಾನ ಇಲಾಖೆಗೆ ತಿಳಿಸಿದಂತೆ ಈ ಮೂರು ಸ್ಥಳಗಳ ಯಾವುದಾದರೂ ಜಾಗದಲ್ಲಿ 4500 ಎಕರೆ ಜಾಗ ನೀಡುವುದಾಗಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಪಿಎಸ್‌ಸಿ ಕೆಡಿಸಿದ್ದಾಯಿತು, ಸರಿಪಡಿಸುವವರಾರು?
ನಿಯಮಾವಳಿಯ ಪ್ರಕಾರ ವಿಮಾನಯಾನ ಇಲಾಖೆಯು ಎರಡನೇ ವಿಮಾನಯಾನ ನಿರ್ಮಿಸಲು ಸ್ಥಳವನ್ನು ಅಂತಿಮಗೊಳಿಸಲು ಭಾರತೀಯ ವಿಮಾನಯಾನ ಪ್ರಾಧಿಕಾರದಿಂದ ತಂಡವನ್ನು ವರದಿ ಮಾಡಲು ಕಳುಹಿಸಲಿದೆ ಎನ್ನಲಾಗಿದೆ. ಪ್ರಾಧಿಕಾರದ ಶಿಫಾರಸ್ಸಿನಂತೆ ವಿವರವಾದ ಆರ್ಥಿಕ ಕಾರ್ಯಸಾಧ್ಯತೆಯ ವರದಿಯನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಗುರುತಿಸಲಾದ ಮೂರು ಸ್ಥಳಗಳು ಬೆಂಗಳೂರು ನಗರ ಕೇಂದ್ರದ 50 ಕಿ. ಮೀ ವ್ಯಾಪ್ತಿಯ ಪರಿಧಿಯಲ್ಲಿ ಬರಲಿದ್ದು, ರಸ್ತೆಗಳ ಜೊತೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಲಿದೆ. ಅಲ್ಲದೆ ಈ ಮೂರು ಸ್ಥಳಗಳಲ್ಲಿ ಯಾವ ಸ್ಥಳದಲ್ಲಿ ನಿರ್ಮಿಸಿದರೂ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರದೊಂದಿಗೆ 2004ರ ಜುಲೈ ರಂದು ರಾಜ್ಯ ಸರ್ಕಾರ ಮಾಡಿಕೊಂಡ ಒಪ್ಪಂದದಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2033ರ ತನಕ ಏಕೈಕ ವಿಮಾನ ನಿಲ್ದಾಣವಾಗಿ ಉಳಿಯಬೇಕು ಎಂದು ತಿಳಿಸಲಾಗಿತ್ತು. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ ವ್ಯಾಪ್ತಿಯೊಳಗೆ ನಿಲ್ದಾಣವು ಆರಂಭವಾದ 25 ವರ್ಷಗಳ ತನಕ ಯಾವುದೇ ವಿಮಾನ ನಿಲ್ದಾಣಗಳನ್ನು ನಿರ್ಮಿಸಬಾರದು/ವಿಸ್ತರಿಸಬಾರದು/ಅಭಿವೃದ್ಧಿಪಡಿಸಬಾರದು ಎಂದು ಒಪ್ಪಂದದಲ್ಲಿ ತಿಳಿಸಲಾಗಿತ್ತು.
2008ರಲ್ಲಿ ಶುರುವಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2024ರ ವರ್ಷದಲ್ಲಿ 4 .73 ಕೋಟಿ ಮಂದಿ ಪ್ರಯಾಣಿಸಿದ್ದಾರೆ ಎಂದು ಬಿಐಎಎಲ್ ತಿಳಿಸಿದೆ.
