ಈ ಬಾರಿಯ ಬಜೆಟ್‌ನಲ್ಲಿ ವೇತನವನ್ನ ಹೆಚ್ಚಳ ಮಾಡಲೇಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16ನೇ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನವನ್ನು ಒಂದು ಸಾವಿರ ರೂಪಾಯಿ ಹಾಗೂ ಸಹಾಯಕಿಯರ ಗೌರವ ಧನವನ್ನು 750 ರೂಪಾಯಿ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಆರನೇ ಗ್ಯಾರಂಟಿ ಜಾರಿ ಮಾಡಲೇಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.
ಕಳೆದ ಐದು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದೆ. ಮಾರ್ಚ್ 7ರಂದು ಆರಂಭವಾದ ಈ ಧರಣಿ ಯಶಸ್ವಿಯಾಗಿ ನಡೆಯುತ್ತಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನ ಈಡೇರಿಸಲೇಬೇಕು ಎಂದು ಪಟ್ಟನ್ನು ಹಿಡಿದಿದ್ದಾರೆ. ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಎಲ್ಲವೂ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಕಾರ್ಮಿಕರ ವೇತನ ಪರಿಷ್ಕರಣೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳು ರದ್ದಾಗಬೇಕು, ಸಮಾನ ಕನಿಷ್ಟ ವೇತನ 36 ಸಾವಿರ ಪರಿಷ್ಕರಣೆ ಮಾಡಬೇಕು, ಸ್ಕೀಂ ನೌಕರರಿಗೆ ಭರವಸೆ ನೀಡಿದಂತೆ ವೇತನ ಹೆಚ್ಚಳ ಮಾಡಬೇಕು, ಗ್ರಾಮ ಪಂಚಾಯತ್, ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು, ಗುತ್ತಿಗೆ, ಹೊರಗುತ್ತಿಗೆ ನೌಕರರ ಖಾಯಂಮಾತಿಯ ಶಾಸನ ರೂಪಿಸಬೇಕು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಈ ಧರಣಿ ನಡೆಯುತ್ತಿದೆ.
ಮಾರ್ಚ್ 3ರಂದು ಗ್ರಾಮ ಪಂಚಾಯಿತಿ ಕಾರ್ಮಿಕರು, ಮಾರ್ಚ್ 4ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾರ್ಚ್ 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾರ್ಚ್ 6ರಂದು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು ಪ್ರತಿಭಟನೆಯನ್ನ ನಡೆಸಿದ್ದಾರೆ. ಮಾರ್ಚ್ 7ರಂದು ಅಂಗನವಾಡಿ ಕಾರ್ಮಿಕರು ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಈ ದಿನ.ಕಾಮ್ ಜತೆಗೆ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ, “ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಗೌರವಧನ ಹೆಚ್ಚಳ ಮಾಡಬೇಕಿತ್ತು. ಆದರೆ, ಮಾಡಲಿಲ್ಲ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಸಂಬಳ ಹೆಚ್ಚಳ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಈಗಾಗಲೇ ಸಿದ್ದರಾಮಯ್ಯ ಅವರು ಮೂರನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಕಳೆದ ಎರಡು ಬಜೆಟ್‌ನಲ್ಲಿ ವೇತನ ಹೆಚ್ಚಳ ಮಾಡಲಿಲ್ಲ. ಕಳೆದ ಎರಡು ಬಜೆಟ್‌ಗಳಲ್ಲಿ ಸಾವಿರ ರೂಪಾಯಿ ಆದರೂ ಹೆಚ್ಚಳ ಮಾಡಬೇಕಿತ್ತು. ಆದರೆ, ವೇತನ ಹೆಚ್ಚಳ ಮಾಡಲಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ವೇತನ ಹೆಚ್ಚಳ ಮಾಡಲೇಬೇಕು. ರಾಜ್ಯ ಸರ್ಕಾರ ನಮ್ಮ ಹೋರಾಟಕ್ಕೂ ಕೂಡ ಯಾವುದೇ ಗೌರವವನ್ನು ನೀಡುತ್ತಿಲ್ಲ. ನಮ್ಮ ಹೋರಾಟ ಮುಂದೆ ಇನ್ನೂ ಕೂಡ ತೀವ್ರವಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಫ್ರೀಡಂ ಪಾರ್ಕ್‌ನಲ್ಲಿ ಮುಂದುವರೆದ ಅಹೋರಾತ್ರಿ ಧರಣಿ
“ಈ ಬಜೆಟ್‌ನಲ್ಲಿ ಕಾರ್ಮಿಕರ ಪರವಾದ ನೀತಿಗಳನ್ನ ಸರ್ಕಾರ ತಾಳಬೇಕು. ಆದರೆ, ಈಗಿನ ಬಜೆಟ್ ನೋಡಿದರೆ ಅದು ನಮಗೆ ಕಡಿಮೆ ಕಾಣಿಸುತ್ತಿದೆ” ಎಂದಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ನಳಿನಾಕ್ಷಿ ಮಾತನಾಡಿ, “ನಮ್ಮ ಬೇಡಿಕೆ 31 ಸಾವಿರ ಕನಿಷ್ಠ ಕೂಲಿ ಕೊಡಬೇಕು. ಆರನೇ ಗ್ಯಾರೆಂಟಿ 15 ಸಾವಿರ ಕೊಡುತ್ತೇವೆ ಎಂದು ಹೇಳಿದ್ದರು. ಅದಕ್ಕಾಗಿ ಇಂದು ಹೋರಾಟ ಮಾಡುತ್ತಿದ್ದೇವೆ. ನಾವು ನಮಗೆ ಬೇಕಾಗಿರುವುದನ್ನು ಪಡೆದುಕೊಂಡು ಹೋಗುತ್ತೇವೆ. ನಮ್ಮ ಬೇಡಿಕೆ ಈಡೇರಿಕೆಯಾಗದೇ ಇದ್ದರೇ ಉಗ್ರ ಹೋರಾಟ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಮಾತನಾಡಿ, “ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಬೇಕು ಎಂದಾಗ ಸರ್ಕಾರಕ್ಕೆ ನಾವು ನೆನಪು ಆಗುವುದಿಲ್ಲ. ಮೊಬೈಲ್ ಅಲ್ಲಿ ಕೆಲಸ ಮಾಡುವುದಕ್ಕೆ ಹೇಳಿದ್ದಾರೆ. ಪ್ರತಿಯೊಂದು ಮಾಹಿತಿಯನ್ನ ಗ್ರೂಪ್‌ನಲ್ಲಿ ಹಾಕಿ ಎಂದು ಹೇಳುತ್ತಾರೆ. ಆದರೆ, ಇದೆಲ್ಲಾ ಹಾಕುವುದಕ್ಕೆ ಸರ್ಕಾರ ಸರಿಯಾದ ಮೊಬೈಲ್ ಕೊಡಬೇಕು. ಹಾಗೇಯೇ, ನಮ್ಮ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು. ಗೌರವಧನ ಹೆಚ್ಚಳ ಮಾಡಲೇಬೇಕು” ಎಂದು ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಶೈಲಜಾ ಮಾತನಾಡಿ, “ನಾವು ಪ್ರತಿ ವರ್ಷವೂ ಕೂಡ ಗೌರವಧನ ಹೆಚ್ಚಳ ಮಾಡಲೇಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಆದರೆ, ಇನ್ನೂ ಕೂಡ ನಮ್ಮ ಸಂಬಳ ಹೆಚ್ಚಳ ಮಾಡಿಲ್ಲ. ಆದರೆ, ಈಗ ಮಾಹಿತಿ ಗೋತ್ತಾಯಿತು. ಈ ಬಾರಿಯ ಬಜೆಟ್‌ನಲ್ಲಿ 1000 ಹೆಚ್ಚಳ ಮಾಡಿದ್ದಾರೆ ಎಂದು ತಿಳಿಯಿತು. ಆದರೆ, ನಾವು ಪ್ರತಿ ಬಾರಿ ಹೋರಾಟಕ್ಕೆ ಬಂದಾಗ 500 ರೂಪಾಯಿ, 1,000 ರೂಪಾಯಿ ಹೆಚ್ಚಳ ಮಾಡಿ ಭಿಕ್ಷೆ ಹಾಕುತ್ತಿದೆ. ನಮಗೆ ಆರನೇ ಗ್ಯಾರಂಟಿ ಜಾರಿ ಮಾಡಲೇಬೇಕು” ಎಂದು ಹೇಳಿದ್ದಾರೆ.