ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಲೂಟಿ ಮಾಡಿದ ಹಾಗೂ ಅಕ್ರಮ ಶಸ್ತ್ರಾಸ್ತ್ರಗಳನ್ನು ಶರಣಾಗಿಸಲು ನೀಡಲಾಗಿದ್ದ ಎರಡು ವಾರಗಳ ಗಡುವಿನಲ್ಲಿ ಮಣಿಪುರದ ಜನತೆ ಮದ್ದುಗುಂಡುಗಳೊಂದಿಗೆ 1,000ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳಿಗೆ ಶರಣಾಗಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಂಕಿಅಂಶಗಳು ತಾತ್ಕಾಲಿಕವಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಶಸ್ತ್ರಾಸ್ತ್ರ ತ್ಯಾಗದ ವಿವರಗಳು ಇಂಫಾಲದಲ್ಲಿನ ಪ್ರಾಧಿಕಾರಗಳನ್ನು ತಲುಪಿದ ನಂತರ, ಈ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಸದ್ಯ ಈಶಾನ್ಯಪೂರ್ವ ರಾಜ್ಯವಾದ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಪಿಎಸ್‌ಸಿ ಕೆಡಿಸಿದ್ದಾಯಿತು, ಸರಿಪಡಿಸುವವರಾರು?
ಹ್ಯಾಂಡ್ ಗನ್ ಗಳು, ಮೆಷಿನ್ ಗನ್ ಗಳು, ಗ್ರನೇಡ್ ಗಳು, ಮಾರ್ಟರ್ ಗಳು, ಇನ್ಸಾಸ್ ಮತ್ತು ಎಕೆ-56 ರೈಫಲ್‌ಗಳು ಸೇರಿದಂತೆ ಲೂಟಿ ಮಾಡಿರುವ ಶಸ್ತ್ರಾಸ್ತ್ರಗಳು ಹಾಗೂ ಅಕ್ರಮವಾಗಿ ಖರೀದಿಸಿರುವ ಆಯುಧಗಳನ್ನು ಅಧಿಕಾರಿಗಳು ಇನ್ನಷ್ಟೆ ವಿಂಗಡಿಸಬೇಕಿದೆ.
“ಶರಣಾಗತಿಯ ಅವಧಿಯಲ್ಲಿ ಕಣಿವೆಯ ಐದು ಜಿಲ್ಲೆಗಳು, ಗುಡ್ಡಗಾಡಿನ ಐದು ಜಿಲ್ಲೆಗಳು ಹಾಗೂ ಜಿರಿಬಾಮ್ ನ ನಿವಾಸಿಗಳು ಒಟ್ಟು ಸುಮಾರು 1,023 ಶಸ್ತ್ರಾಸ್ತ್ರಗಳನ್ನು ಶರಣಾಗಿಸಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಣಿಪುರದ ಉಳಿದ ಐದು ಜಿಲ್ಲೆಗಳು ನಾಗಾ ಸಮುದಾಯದ ಬಾಹುಳ್ಯವನ್ನು ಹೊಂದಿದ್ದು, ಮೇ 3, 2023ರಿಂದ ಇಲ್ಲಿಯವರೆಗೆ ಈ ಜಿಲ್ಲೆಗಳಲ್ಲಿ ಯಾವುದೇ ಜನಾಂಗೀಯ ಹಿಂಸಾಚಾರ ವರದಿಯಾಗಿಲ್ಲ.
