ಔರಾದ್-ಕಮಲನಗರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಖಾತೆಗೆ ಮೂರು ತಿಂಗಳ ಗೌರವಧನ ಗುರುವಾರ (ಮಾ.6) ಸಂಜೆ ಜಮೆಯಾಗಿದೆ.
ಈ ಕುರಿತು ಮಾ.4ರಂದು ಈದಿನ.ಕಾಮ್ ನಲ್ಲಿ ‘ಸಕಾಲಕ್ಕೆ ಸಿಗದ ಗೌರವಧನ : 147 ಅತಿಥಿ ಶಿಕ್ಷಕರು ಹೈರಾಣು’ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಮೊದಲು ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಗುರುವಾರ ಅತಿಥಿ ಶಿಕ್ಷಕರಿಗೆ ವೇತನ ಪಾವತಿಸಿದ್ದಾರೆ.
ʼಔರಾದ್-ಕಮಲನಗರ ಅವಳಿ ತಾಲ್ಲೂಕಿನಲ್ಲಿ 147 ಅತಿಥಿ ಶಿಕ್ಷಕರಿದ್ದರು. ವಿವಿಧ ಕಾರಣಗಳಿಂದ ಕೆಲ ಶಿಕ್ಷಕರು ಕೆಲಸ ಬಿಟ್ಟಿದ್ದಾರೆ. ಹೀಗಾಗಿ 129 ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ 2024ರ ಅಕ್ಟೊಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಗೌರವಧನ ಆಯಾ ಶಿಕ್ಷಕರ ಖಾತೆಗೆ ಜಮಾ ಮಾಡಲಾಗಿದೆʼ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಜಿ.ರಂಗೇಶ ತಿಳಿಸಿದ್ದಾರೆ.
ʼ2024-25ನೇ ಸಾಲಿನಲ್ಲಿ ಅತಿಥಿ ಶಿಕ್ಷಕರ ಗೌರವಧನ ಪಾವತಿಗಾಗಿ ಬಂದ ಅನುದಾನ ಔರಾದ್‌ನ ಶಿಕ್ಷಣ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಪಾವತಿಸದ ಕಾರಣಕ್ಕೆ ವಾಪಸ್ ಹೋಗಿದೆ. ಇದರಿಂದ ಅತಿಥಿ ಶಿಕ್ಷಕರಿಗೆ ಮೂರು ತಿಂಗಳ ಗೌರವಧನ ಪಾವತಿಯಾಗಿಲ್ಲ. ಕೂಡಲೇ ಅತಿಥಿ ಶಿಕ್ಷಕರ ಬಾಕಿ ಗೌರವಧನ ಪಾವತಿಸಬೇಕುʼ ಎಂದು ಅತಿಥಿ ಶಿಕ್ಷಕರ ಸಂಘ ಮನವಿ ಸಲ್ಲಿಸಿತ್ತು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಕಾಲಕ್ಕೆ ಸಿಗದ ಗೌರವಧನ : 147 ಅತಿಥಿ ಶಿಕ್ಷಕರು ಹೈರಾಣು
ʼಈ ಕುರಿತು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ತಾಲ್ಲೂಕಾಧ್ಯಕ್ಷ ನಾಗೇಂದ್ರ ಚಿಟಗೀರೆ ಮಾತನಾಡಿ, ʼಅತಿಥಿ ಶಿಕ್ಷಕರ ಬಾಕಿ ಇರುವ ಮೂರು ತಿಂಗಳ ಗೌರವಧನ ಬಿಡುಗಡೆ ಕುರಿತು ಮೊದಲಿಗೆ ʼಈದಿನ.ಕಾಮ್ʼ ವಿಶೇಷ ವರದಿ ಪ್ರಕಟಿಸಿತು. ವರದಿ ಪರಿಣಾಮವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮೂರು ತಿಂಗಳ ಗೌರವಧನ ಗುರುವಾರ ಖಾತೆಗೆ ಜಮೆ ಮಾಡಿದ್ದಾರೆʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.