ಎನ್‌ಇಪಿ ಶಿಫಾರಸನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರವು ಈಗ ಅದರ ಆತ್ಮವನ್ನೇ ಜಾರಿಗೊಳಿಸುತ್ತಿದೆ ಎಂದು ಶಿಕ್ಷಣ ತಜ್ಞ, ಹಿರಿಯ ಬರಹಗಾರ ಬಿ. ಶ್ರೀಪಾದ ಭಟ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಹಣಕಾಸು ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್ ಮಂಡನೆ ವೇಳೆ “ರಾಜ್ಯದ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನದಿಂದ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ವೃತ್ತಿಪರ ವಿಷಯ ತಜ್ಞರನ್ನು ‘ಪ್ರೊಫೆಸರ್ ಆಫ್ ಪ್ರಾಕ್ಟೀಸ್’ (Professor of Practice) ಆಗಿ ನೇಮಿಸಲಾಗುವುದು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | NABARD ಸಹಯೋಗದೊಂದಿಗೆ ಮೈಸೂರಿನಲ್ಲಿ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪನೆ
ಸರ್ಕಾರದ ಈ ನಿರ್ಧಾರವನ್ನು ಶಿಕ್ಷಣ ತಜ್ಞ ಶ್ರೀಪಾದ ಭಟ್ ಖಂಡಿಸಿದ್ದಾರೆ. ‘ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಎಂಬುದೇ ಕಾರ್ಪೋರೇಟೀಕರಣ ಮತ್ತು ಬ್ರಾಹ್ಮಣೀಕರಣ. ಈ ಜ್ಞಾನವೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
“ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಭಾಷಣದಲ್ಲಿ ’16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವೃತ್ತಿಪರ ವಿಷಯ ತಜ್ಞರನ್ನು professor of practice ಆಗಿ ನೇಮಕ ಮಾಡಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ. ಅಂದರೆ ಕಾಂಗ್ರೆಸ್ ಸರ್ಕಾರವು ಸಹ ಮೀಸಲಾತಿ ನೀತಿಯನ್ನು ಉಲ್ಲಂಘಿಸುವ ಲ್ಯಾಟ್ರಲ್ ಪ್ರವೇಶವನ್ನು ಪ್ರಾರಂಭಿಸುತ್ತಿದ್ದಾರೆ” ಎಂದಿದ್ದಾರೆ.
“ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಎನ್ನುವುದೇ ಶಿಕ್ಷಣದ ಕಾರ್ಪೋರೇಟೀಕರಣ ಮತ್ತು ಬ್ರಾಹ್ಮಣೀಕರಣ ಎನ್ನುವ ಸಾಮಾನ್ಯ ತಿಳುವಳಿಕೆಯೂ ಇಲ್ಲವಾಯಿತೇ? ಇದು ಎನ್‌ಇಪಿಯ ಶಿಫಾರಸು. ಅದನ್ನು ತಿರಸ್ಕರಿಸಿದ ಸರ್ಕಾರವು ಅದರ ಆತ್ಮವನ್ನೇ ಜಾರಿಗೊಳಿಸುತ್ತಿದೆ. ಸರ್ಕಾರ ಎಲ್ಲಿಗೆ ಬಂದು ತಲುಪಿದೆ” ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು ಅಭಿವೃದ್ಧಿಗೆ 7,000 ಕೋಟಿ ರೂ. ಅನುದಾನ ಘೋಷಣೆ; ಬಜೆಟ್‌ನಲ್ಲಿ ರಾಜಧಾನಿಗೆ ಬೇರೇನಿದೆ?
ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಎಂದರೆ ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿ ತಜ್ಞರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗುವುದು. ಪ್ರಾಯೋಗಿಕ ಕೌಶಲ್ಯ ಮತ್ತು ಸೈದ್ಧಾಂತಿಕ ವಿಚಾರಗಳನ್ನು ಪ್ರಸ್ತುತತೆಗೆ ತಕ್ಕುದಾಗಿ ವಿವರಿಸುವ, ಕಲಿಸುವ ಕರ್ತವ್ಯ ಇವರದ್ದಾಗಿರುತ್ತದೆ.
ಆದರೆ ಶಿಕ್ಷಕರಾಗಲು ಅಗತ್ಯವಿರುವ ವಿದ್ಯಾಭ್ಯಾಸವನ್ನು ಪಡೆಯದಿರುವ, ಆ ವಿಷಯದ ಬಗ್ಗೆ ಸಂಶೋಧನೆ ಮಾಡದಿರುವ, ವಿದ್ಯಾರ್ಥಿಗಳಿಗೆ ಭೋದಿಸುವ ಕೌಶಲ್ಯ ತಿಳಿಯದವರನ್ನು ಉಪನ್ಯಾಸಕರನ್ನಾಗಿಸುವುದು ಸರಿಯಲ್ಲ. ಕ್ರಮೇಣ ಇವರೇ ಖಾಯಂ ಉಪನ್ಯಾಸಕರಾಗುವ ಪ್ರಯತ್ನ ಮಾಡಬಹುದು ಎಂಬ ವಾದವಿದೆ.
