ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ಗೆ ಇ.ಡಿ ನೀಡಿದ್ದ ಸಮನ್ಸ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗುವಂತೆ ಪಾರ್ವತಿ ಹಾಗೂ ಭೈರತಿ ಸುರೇಶ್ಗೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಇಬ್ಬರು ಹೈಕೋರ್ಟ್ ಮೊರೆ ಹೋಗಿದ್ದು, ಇಂದು (ಮಾರ್ಚ್ 07) ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಇ.ಡಿ ಸಮನ್ಸ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಸಹಿತ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನಿರಾಳಾಗಿದ್ದಾರೆ.
ಮುಡಾ ಹಗರಣ ಪ್ರಕರಣದಲ್ಲಿ ಇ.ಡಿ ಪ್ರವೇಶಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸಿ.ಎಂ ಸಿದ್ದರಾಮ್ಯಯನವರ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸೇರಿದಂತೆ ಇತರರಿಗೆ ಇ.ಡಿ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ತಡೆ ನೀಡುವಂತೆ ಸಿಎಂ ಪತ್ನಿ ಹಾಗೂ ಭೈರತಿ ಸುರೇಶ್ ಅವರು ಇಬ್ಬರು ಪ್ರತ್ಯೇಕವಾಗಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಇಡಿ ಸಮನ್ಸ್ಗೆ ತಡೆಯಾಜ್ಞೆ ನೀಡಿತ್ತು. ಇದೀಗ ಕೋರ್ಟ್ ಇಡಿ ಸಮನ್ಸ್ ಅನ್ನು ರದ್ದು ಮಾಡಿ ಆದೇಶಿಸಿದೆ. ಇದರಿಂದ ಇಬ್ಬರು ಇಡಿ ವಿಚಾರಣೆಯಿಂದ ಪಾರಾಗಿದ್ದು, ಸಿಎಂ ಸಿದ್ದರಾಮಯ್ಯ ನಿರಾಳರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಪಿಎಸ್‌ಸಿ ಕೆಡಿಸಿದ್ದಾಯಿತು, ಸರಿಪಡಿಸುವವರಾರು?
ಪಾರ್ವತಿ ಅವರು ಅಕ್ಟೋಬರ್ 1, 2024 ರಂದು ವಿವಾದಿತ ನಿವೇಶನಗಳನ್ನು ಹಿಂದಿರುಗಿಸಿದ್ದರು. ಮುಡಾದ 14 ನಿವೇಶನಗಳಲ್ಲದೆ 1708 ನಿವೇಶನಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಈಗಾಗಲೇ 160 ನಿವೇಶನಗಳನ್ನು ಇ.ಡಿ ತಾತ್ಕಾಲಿಕ ಜಪ್ತಿ ಮಾಡಿದೆ. ತನ್ನ ಕಾರ್ಯವ್ಯಾಪ್ತಿ ಮೀರಿ ಇ.ಡಿ ಪರ್ಯಾಯ ತನಿಖೆ ನಡೆಸುತ್ತಿದೆ. ಇ.ಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಭೂಸ್ವಾಧೀನ, ಭೂಪರಿವರ್ತನೆ ಇತ್ಯಾದಿಗಳ ಬಗ್ಗೆಯೂ ತನಿಖೆ ನಡೆಸಿದೆ. ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇಡಿ ಪ್ರವೇಶಿಸಿದೆ. ಮುಡಾಗೆ ಹಿಂತಿರುಗಿಸಿರುವ 14 ನಿವೇಶನಗಳನ್ನು ಇ.ಡಿ ಜಪ್ತಿ ಮಾಡಿಲ್ಲ. ಆದರೆ ಇತರೆ 160 ನಿವೇಶನಗಳನ್ನು ಇ.ಡಿ ಜಪ್ತಿ ಮಾಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲವೆಂದು ವರದಿ ಸಲ್ಲಿಸಿದ್ದಾರೆ ಎಂದು ಸಿಎಂ ಪತ್ನಿ ಪಾರ್ವತಿ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದರು.
