- ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವಾದ ಸ್ಟಾರ್ ನಟ
- ವಿದ್ಯೆ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದ ವಿಜಯ್
ತಮಿಳಿನ ಖ್ಯಾತ ನಟ ದಳಪತಿ ವಿಜಯ್, ಈ ವರ್ಷದ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರುವ ತಮಿಳುನಾಡಿನ 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿರುವ ನಟ, ಡಾ. ಬಿ.ಆರ್ ಅಂಬೇಡ್ಕರ್, ಕಾಮರಾಜ್ ಮತ್ತು ಪೆರಿಯಾರ್ ತರಹದ ಮಹಾನ್ ವ್ಯಕ್ತಿಗಳ ಕುರಿತು ತಿಳಿದುಕೊಳ್ಳಿ ಎಂದಿದ್ದಾರೆ.
ʼದಳಪತಿ ವಿಜಯ್ ಎಜುಕೇಶನ್ ಫೌಂಡೇಶನ್ʼ, 2022-23ನೇ ಸಾಲಿನ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳಲ್ಲಿ ದಾಖಲೆಯ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಲುವಾಗಿ ಶನಿವಾರ ಚೆನ್ನೈನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಳಪತಿ ವಿಜಯ್, ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದಾರೆ. ಜೊತೆಗೆ ಗೌರವ ಧನವನ್ನೂ ನೀಡಿ ಬಡಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವಾಗಿದ್ದಾರೆ.
ಸನ್ಮಾನದ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವ ವಿಜಯ್, “ಡಾ. ಬಿ.ಆರ್ ಅಂಬೇಡ್ಕರ್, ಕಾಮರಾಜ್ ಮತ್ತು ಪೆರಿಯಾರ್ ತರಹದ ಮಹಾನ್ ವ್ಯಕ್ತಿಗಳ ಕುರಿತು ತಿಳಿದುಕೊಳ್ಳಿ. ನೀವು ಭವಿಷ್ಯದ ಪ್ರಜೆಗಳು ಹೀಗಾಗಿ ಹಣ ಪಡೆದು ಮತ ಚಲಾಯಿಸುವುದು ತಪ್ಪು ಎಂಬುದನ್ನು ನಿಮ್ಮ ಪೋಷಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿ. ಈ ಬದಲಾವಣೆ ನಿಮ್ಮಿಂದ ಮಾತ್ರ ಸಾಧ್ಯ” ಎಂದಿದ್ದಾರೆ.
ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವ ಹಿಂದಿನ ಉದ್ದೇಶವನ್ನು ತಿಳಿಸಿರುವ ವಿಜಯ್, “ನಾನು ಸಾಧಾರಣ ವಿದ್ಯಾರ್ಥಿಯಾಗಿದ್ದವನು. ನಮ್ಮ ಬಳಿ ಆಸ್ತಿ ಇದ್ದರೆ ಅದನ್ನು ಯಾರಾದರೂ ಕಸಿದುಕೊಳ್ಳಬಹುದು. ಹಣ ಇದ್ದರೆ ಅದನ್ನೂ ಕೂಡ ಕದಿಯಬಹುದು. ಆದರೆ, ನಮ್ಮಿಂದ ವಿದ್ಯೆಯನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎನ್ನುವ ಸಿನಿಮಾ ಸಂಭಾಷಣೆಯಿಂದ ಪ್ರೇರಿತನಾಗಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ರೂಪಿಸಿದೆ” ಎಂದಿದ್ದಾರೆ.