- ಆಸ್ತಿ ಕಬಳಿಸಲು ವಿದೇಶದಲ್ಲಿರುವ ವ್ಯಕ್ತಿಗೂ ಡೆತ್ ಸರ್ಟಿಫಿಕೇಟ್
- ಕಂದಾಯ ಇಲಾಖೆ ಅಧಿಕಾರಿಗಳಿಂದ ಯಡವಟ್ಟು ಆರೋಪ
ಜೀವಂತ ಇರುವಾಗಲೇ ಅಜ್ಜಿ ಮತ್ತು ಮತ್ತೊಬ್ಬ ವ್ಯಕ್ತಿಯ ಹೆಸರಿನಲ್ಲಿ ಮರಣ ಪತ್ರ ನೀಡಿರುವ ಪ್ರಕರಣ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.
ನಂಜನಗೂಡು ತಾಲೂಕಿನ ಗೀಕಹಳ್ಳಿ ಗ್ರಾಮದ ಬಸಮ್ಮ ಎಂಬ ಅಜ್ಜಿಗೆ ಜೀವಂತವಿದ್ದರೂ ಮರಣ ದೃಢೀಕರಣ ಪತ್ರವನ್ನು ಸೃಷ್ಟಿ ಮಾಡಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಬಸಮ್ಮ 1981ರ ಮಾರ್ಚ್ 15ರಲ್ಲೇ ಮರಣ ಹೊಂದಿದ್ದಾರೆ ಎಂದು ಮರಣ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಯಿಂದ ನೀಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಚಂದ್ರಶೇಖರ್ ಎಂಬ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಕೆ ಮಾಡಲು ವಿದೇಶದಲ್ಲಿರುವ ಚಂದ್ರಶೇಖರ್ ಅವರು ಬದುಕಿದ್ದರೂ ಡೆತ್ ಸರ್ಟಿಫಿಕೇಟ್ ಮಾಡಿ ಪೌತಿ ಖಾತೆ ಸೃಷ್ಟಿ ಮಾಡಿದ್ದಾರೆ ಎಂದು ದೂರಲಾಗಿದೆ.
ಮುಳ್ಳೂರು ಗ್ರಾಮದ ಸರ್ವೇ ನಂ. 442 ರಲ್ಲಿ 01.26 ಹಾಗೂ 444 ರಲ್ಲಿ 01.30 ಗುಂಟೆ ಜಮೀನನ್ನು ಕೃಷ್ಣೇಗೌಡ, ಶಿವಮಲ್ಲೇಗೌಡ ಎಂಬುವರಿಗೆ ಅಕ್ರಮವಾಗಿ ಪೌತಿ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. 2022ನೇ ಸಾಲಿನಲ್ಲಿ ಖಾತೆ ಬದಲಾಯಿಸಿರುವ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಕಸಭಾ ಹೋಬಳಿ ರಾಜಸ್ವ ನಿರೀಕ್ಷಕ ಪ್ರಕಾಶ್, ತಹಶೀಲ್ದಾರ್ ಶಿವಮೂರ್ತಿ ಹಾಗೂ ಶಿರಸ್ತೇದಾರ್ ಶ್ರೀನಾಥ್ ವಿರುದ್ಧ ಆರೋಪ ಕೇಳಿಬಂದಿದೆ.
ಇನ್ನೂ ಬಸಮ್ಮನ ಹೆಸರಲ್ಲಿ ಸರ್ವೇ ನಂ. 140/2 ರಲ್ಲಿ 01 ಎಕರೆ ಜಮೀನು ಪೌತಿ ಖಾತೆ ಮಾಡಲಾಗಿದ್ದು, 2022ರ ಜು.19 ರಂದು ಎರಡು ಪ್ರಕರಣಗಳಲ್ಲಿ ನಕಲಿ ವಂಶ ವೃಕ್ಷ ದೃಢೀಕರಣ ಪತ್ರ ಸೃಷ್ಟಿಸಿ, ಮತ್ತೊಬ್ಬರಿಂದ ನಾವೇ ಬಸಮ್ಮನ ಹೆಣ್ಣು ಮಕ್ಕಳು ಎಂದು ಪೌತಿ ಖಾತೆಗೆ ಅರ್ಜಿಯನ್ನು ಹಾಕಿಸಿದ್ದಾರೆ. ಆದರೆ, ಶಿವಮ್ಮ, ರತ್ನಮ್ಮ ಎಂಬುವರು ಬಸಮ್ಮನ ಹೆಣ್ಣು ಮಕ್ಕಳೇ ಅಲ್ಲ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಹೊಸ ಹಾಸ್ಟೆಲ್‌ಗಳ ಮಂಜೂರಾತಿಗೆ ಎಸ್‌ಎಫ್‌ಐ ಆಗ್ರಹ
ಶಿವಮ್ಮ, ಮತ್ತು ರತ್ನಮ್ಮ ಎಂಬ ಮಹಿಳೆಯರು ಬೇರೆ ಜನಾಂಗದವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಗ್ರಾಮಸ್ಥರನ್ನು ಕೇಳಿಲ್ಲ ಜಮೀನಿನ ಸ್ಥಳ ಪರಿಶೀಲನೆ ಮಾಡಿಲ್ಲ. ಹಣದಾಸೆಗೆ ದಾಖಲೆಗಳನ್ನು ಸೃಷ್ಟಿಸಿ, ಪರಿಶೀಲಿಸದೆ ಅಂದಿನ ತಹಶೀಲ್ದಾರ್ ಶಿವಮೂರ್ತಿ ಸಹಿ ಹಾಕಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ತಹಶೀಲ್ದಾರ್ ಶಿವಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಕಸಬಾ ರಾಜಸ್ವ ನಿರೀಕ್ಷಕ ಪ್ರಕಾಶ್ ಹಾಗೂ ಶಿರಸ್ತೇದಾರ್ ಶ್ರೀನಾಥ್ ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಇಂತಹ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್ ಒತ್ತಾಯಿಸಿದ್ದಾರೆ.
ನಗರ್ಲೆ ಎಂ ವಿಜಯಕುಮಾರ್ ನೀಡಿದ ದೂರಿನಂತೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.