“ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಈ ಸಾಲಿನ (2025-26) ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಮತ್ತು ಯುವಜನರಿಗೆ ಯಾವೊಂದು ಕೊಡುಗೆಗಳನ್ನು ನೀಡಿಲ್ಲ. ಯುವಜನರ ಬದುಕಿನ ಭದ್ರತೆ ಖಾತ್ರಿಪಡಿಸದ ಈ ಬಜೆಟ್ ನಿರಾಶಾದಾಯಕ ಬಜೆಟ್” ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ದೂರಿದೆ.
“ದಕ್ಷಿಣ ಕನ್ನಡ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಹಲವು ವರ್ಷಗಳ ಕೂಗಿಗೆ ಕೇವಲ ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸುವ ಘೋಷಣೆಯನ್ನಷ್ಟೇ ಮಾಡಲಾಗಿದೆ. ಅದಕ್ಕೆ ಪೂರಕವಾಗಿ ಅಲ್ಲಿನ ತಾಲೂಕು ಆಸ್ಪತ್ರೆ ಉನ್ನತೀಕರಣದ ಕ್ರಮಗಳ ಪ್ರಸ್ತಾಪವನ್ನು ಮಾಡಿದ್ದು ಬಿಟ್ಟರೆ ಬಜೆಟ್‌ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒಂದು ಬಿಡಿಗಾಸನ್ನೂ ಮೀಸಲಿಟ್ಟಿಲ್ಲ” ಎಂದು ಆರೋಪಿಸಿದೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್-2025 | ಹೊಸ ಯೋಜನೆಗಳೇನು, ಎತ್ತಿಟ್ಟ ಹಣವೆಷ್ಟು?
“ಇನ್ನು ಸರ್ಕಾರಿ ಜಿಲ್ಲಾಸ್ಪತ್ರೆ ವೆನ್ಲಾಕ್‌ನ ನವೀಕರಣಕ್ಕೆ, ರಾಜ್ಯದ ಹತ್ತು ವಿವಿಧ ಸರ್ಕಾರಿ ಆಸ್ಪತ್ರೆಗಳನ್ನು ಜೊತೆ ಸೇರಿಸಿ 650 ಕೋಟಿ ಮೀಸಲಿಟ್ಟಿದ್ದಾರೆ. ಆದರೆ ವೆನ್ಲಾಕ್ ಅನ್ನು ಪ್ರಾದೇಶಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕೂಗಿಗೆ ಯಾವುದೇ ಸ್ಪಂದನೆ ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
“ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯ ಸಂಬಂಧಿಸಿದ ಆಸ್ಪತ್ರೆಯ ಘಟಕಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸುವ ಕುರಿತು ಬಲವಾದ ಆಗ್ರಹಗಳಿದ್ದರೂ ಬಜೆಟ್‌ನಲ್ಲಿ ಈ ಬೇಡಿಕೆಗಳನ್ನು ಕಡೆಗಣಿಸಲಾಗಿದೆ. ಸರ್ಕಾರ ಸಂಪೂರ್ಣ ಖಾಸಗಿ ಮೆಡಿಕಲ್ ಮಾಫಿಯಾದ ಲಾಭಿಗೆ ಶರಣಾಗಿದೆ” ಎಂದು ದೂರಿದೆ.
“ಸರ್ಕಾರದ ವೈದ್ಯಕೀಯ ನಿಯಮಗಳಿಗನುಸಾರವಾಗಿ ಮುಲ್ಕಿ, ಮೂಡಬಿದರೆ, ಕಡಬ ಮತ್ತು ಉಳ್ಳಾಲ ತಾಲೂಕಿನಲ್ಲಿ ಸ್ಥಾಪಿಸಬೇಕಿದ್ದ ತಾಲೂಕು ಆಸ್ಪತ್ರೆಗಳ ಸ್ಥಾಪನೆ ಕುರಿತು ಉಲ್ಲೇಖಗಳಿಲ್ಲದೆ ಸಂಪೂರ್ಣ ಕಡೆಗಣಿಸಲಾಗಿದೆ. ಒಟ್ಟು ಆಸ್ಪತ್ರೆಗಳ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಯನ್ನು ಕಡೆಗಣಿಸುವ ಮೂಲಕ ಖಾಸಗಿ ಆಸ್ಪತ್ರೆಗಳ ಸುಲಿಗೆ ನೀತಿಗಳನ್ನು ಎತ್ತಿ ಹಿಡಿಯುವ ಬಜೆಟ್ ಇದಾಗಿದೆ” ಎಂದು ಟೀಕಿಸಿದೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | ನಕ್ಸಲ್ ನಿಗ್ರಹ ಪಡೆ ವಿಸರ್ಜನೆ; ಪುನರ್ವಸತಿಗೆ 10 ಕೋಟಿ ರೂ. ಘೋಷಣೆ
“ಕೈಗಾರಿಕೆಗಳ ಸ್ಥಾಪನೆಯಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳಾಗಲಿ ಕನಿಷ್ಟ ಇರುವ ಕೈಗಾರಿಕೆಗಳಲ್ಲಿ ಸೃಷ್ಟಿಯಾಗುವ ಉದ್ಯೋಗಳಿಗೆ ಸ್ಥಳೀಯ ಯುವಜನರಿಗೆ ಆದ್ಯತೆ ಕಲ್ಪಿಸುವ ನೀತಿಗಳಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಉದ್ಯೋಗಗಳ ಭರ್ತಿಗೆ ಕ್ರಮಗಳಿಲ್ಲ” ಎಂದು ಡಿವೈಎಫ್‌ಐ ದೂರಿದೆ.
“ಸರ್ಕಾರಿ ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಖಾಯಂಗೊಳಿಸುವ ಕ್ರಮಗಳಿಲ್ಲ. ಈ ಹಿಂದೆ ಪ್ರಸ್ತಾಪಿಸಿದ್ದ ಖಾಸಗಿ ವಲಯ ರಂಗದಲ್ಲೂ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ನೀತಿಗಳನ್ನು ಸಂಪೂರ್ಣ ಕೈಬಿಟ್ಟಿರುವುದು ಯುವಜನರಲ್ಲಿ ನಿರಾಶೆಯನ್ನು ಮೂಡಿಸಿದೆ. ಯುವ ನೀತಿಗಳ ರೂಪಿಸುವ ಬಗ್ಗೆ ಯೋಜನೆಗಳೇ ಇಲ್ಲದಿರುವಂತಹ ಬಜೆಟ್ ಸಂಪೂರ್ಣ ಯುವಜನ ವಿರೋಧಿ ಬಜೆಟ್” ಎಂದು ಆರೋಪಿಸಿದೆ.
“ಒಟ್ಟು ಕರ್ನಾಟಕ ರಾಜ್ಯದ ಈ ಬಾರಿಯ ಬಜೆಟ್‌ನಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಆಶಾದಾಯಕ ಯೋಜನೆಗಳಿಲ್ಲ. ಸರ್ಕಾರಿ ಆಸ್ಪತ್ರೆಗಳಿಂದ ಹಿಡಿದು ಪ್ರವಾಸೋದ್ಯಮಕ್ಕೆ ಉತ್ತೇಜನವಾಗಲಿ, ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಗಳ ಪ್ರಸ್ತಾಪವಾಗಲಿ, ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಸ್ಥಾಪಿಸುವ, ಇರುವ ಕೈಗಾರಿಕೆಗಳಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಕುರಿತು ಯಾವೊಂದು ಯೋಜನೆಗಳಿರದ ನಿರಾಶಾದಾಯಕ ಮತ್ತು ಯುವಜನ ವಿರೋಧಿ ಬಜೆಟ್” ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
