ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಕೃಷಿ ಮಾರುಕಟ್ಟೆ ಮತ್ತು ಭೂಸುಧಾರಣೆ ಕಾಯ್ದೆಗೂ ಮಾರಕ ತಿದ್ದುಪಡಿ ತಂದಿದ್ದು, ಅದನ್ನು ಹಿಂಪಡೆಯುವ ಆಶ್ವಾಸನೆಯನ್ನು ಆಗ ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯನವರೇ ನೀಡಿದ್ದರು. ಬಜೆಟ್‌ನಲ್ಲಿ ಆ ಬಗ್ಗೆ ಪ್ರಸ್ತಾವವೇ ಇಲ್ಲ.
ನಾಲ್ಕು ಲಕ್ಷ ಕೋಟಿ ರೂ ಮೀರಿದ ಚಾರಿತ್ರಿಕ ಆಯವ್ಯಯ ಮಂಡನೆಯನ್ನು ಸಿ ಎಂ ಸಿದ್ದರಾಮಯ್ಯನವರು ಮಾಡಿದರೂ ಕೃಷಿ ಮತ್ತು ಸಂಬಂಧಿಸಿದ ವಲಯಗಳಿಗೆ ನೀಡಿರುವ ಅನುದಾನ ಅತ್ಯಲ್ಪ. ಕಳೆದ ಸಾಲಿನ ಹಾಗೆ ಈ ಸಾಲಿನಲ್ಲೂ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ನೀರಾವರಿಯನ್ನು ಸೇರಿಸಿದರೂ ಒಟ್ಟು ಪ್ರಮಾಣ ಶೇ. 8ನ್ನು ಮೀರಿರುವುದಿಲ್ಲ. ಹಾಗಿದ್ದರೂ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದ ಮುಖ್ಯಮಂತ್ರಿಗಳು ರೈತ ಕಲ್ಯಾಣ ಯೋಜನೆಗೆ ವಿವಿಧ ಇಲಾಖೆಗಳಿಗೆ 51 ಸಾವಿರ ಕೋಟಿ ರೂ. ಗೂ ಅಧಿಕ ಅನುದಾನ ನೀಡಲಾಗಿದೆ ಎಂದಿದ್ದು, ಒಟ್ಟು ಆಯವ್ಯಯದಲ್ಲಿ ಇದು ಶೇ.13ರಷ್ಟು ಆಗಿರುವುದರ ಬಗ್ಗೆ ಮತ್ತಷ್ಟು ವಿವರ ಅಗತ್ಯ.
ಹಲವಾರು ಯೋಜನೆಗಳ ಪ್ರಸ್ತಾವನೆಗಳು ಕಳೆದ ಬಾರಿಯ ಪುನರಾವರ್ತನೆಯಾಗಿದ್ದು, ಅವುಗಳ ಯಶಸ್ಸೇನಾಗಿದೆ ಎಂಬ ಸ್ಪಷ್ಟೀಕರಣ ಅಗತ್ಯ. ಉದಾಹರಣೆಗೆ ಸಮಗ್ರ ಕೃಷಿಯನ್ನು ಹಿಂದಿನ ಬಹುತೇಕ ಎಲ್ಲಾ ಸರ್ಕಾರಗಳು ಪ್ರಾಸ್ತಾಪಿಸಿದ್ದು ಸಿದ್ದರಾಮಯ್ಯನವರು ಇದಕ್ಕೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಎಂದು ಕರೆದಿದ್ದು, ಇದರಡಿ ಮಣ್ಣು ಪರೀಕ್ಷೆ, ಸಂಗ್ರಹಣೆ ಮೌಲ್ಯವರ್ಧನೆಗಳಿಂದ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಕಲ್ಪಿಸುವ ವಿಚಾರದ ಬಗ್ಗೆ ಸಮಗ್ರ ಮಾರ್ಗದರ್ಶನ ಸಮೇತ ಪ್ರಸ್ತಾವನೆ ಕಳೆದ ಬಾರಿ ಮಾಡಲಾಗಿದೆ. ಅದೇ ಈ ಸಾರಿಯು ಪುನರಾವರ್ತನೆಯಾಗಿ 10 ಹವಾಮಾನ ವಲಯಗಳಲ್ಲಿ ಮಾದರಿ ಪ್ರಾತ್ಯಕ್ಷತೆ ತಾಲೂಕುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜನಪ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಹಾಗೆಯೇ ಕಣ್ಮರೆಯಾಗುತ್ತಿರುವ ಸ್ಥಳೀಯ ತಳಿಗಳ ಸಂರಕ್ಷಣೆಗೆ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲು ಕಳೆದ ಬಾರಿ ತೋಟಗಾರಿಕೆಯಡಿ ಪ್ರಸ್ತಾಪಿಸಿದ್ದಾರೆ. ಈ ಬಾರಿ ಕೃಷಿಯಡಿ ದೇಶಿಯ ತಳಿಗಳ ಬೀಜ ಬ್ಯಾಂಕ್ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಹನಿ ಮತ್ತು ತುಂತುರು ನೀರಾವರಿಗೆ ಉತ್ತೇಜನ, ಡಿಜಿಟಲ್ ಕೃಷಿ ಕೇಂದ್ರಗಳ ಸ್ಥಾಪನೆ, ಕೃಷಿ ಹವಮಾನ ವಲಯಗಳ ಪುನರ್‌ವ್ಯಾಖ್ಯಾನ, ಮಣ್ಣು ಬೀಜ ರಸಗೊಬ್ಬರ ಇತ್ಯಾದಿ ಪರಿಕರಗಳ ಗುಣಮಟ್ಟ ಪರೀಕ್ಷೆಗೆ ಅತ್ಯಾಧುನಿಕ ಪ್ರಯೋಗಾಲಯ, ಭೂ ಸಂಪನ್ಮೂಲ ಸಮೀಕ್ಷೆ ಮೂಲಕ ರೈತರಿಗೆ ಸೂಕ್ತ ಬೆಳೆ ಮತ್ತು ಕೃಷಿ ಕೈಗೊಳ್ಳಲು ಪ್ರೋತ್ಸಾಹ ಇತ್ಯಾದಿಗಳು ನಮ್ಮ ಕೃಷಿಗೆ ಸದೃಢತೆ ತಂದು ಉತ್ಪಾದನೆ ಹೆಚ್ಚಿಸುವಲ್ಲಿ ಅಗತ್ಯವಾದರೂ, ಉತ್ಪಾದಿಸಿದ ನಂತರ ಮತ್ತು ಉತ್ಪಾದಿಸಿದ ರೈತರ ಸ್ಥಿತಿಗತಿಯ ಬಗ್ಗೆ ಕೊಟ್ಟಿರುವ ಮಹತ್ವ ಹೆಚ್ಚೇನು ಕಂಡುಬರುವುದಿಲ್ಲ.
ರಾಜ್ಯದ ಸಾಗುವಳಿ ಪ್ರದೇಶದ ಶೇ. 64ರಷ್ಟು ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಈ ರೈತರ ಜೀವನೋಪಾಯ ಸುಧಾರಿಸಲು ಸಮಗ್ರ ಮಳೆ ಆಶ್ರಿತ ಕೃಷಿ ನೀತಿ ಅನುಷ್ಠಾನಕ್ಕೆ ತರಲು ಪ್ರಸ್ತಾಪಿಸಿರುವುದು ಅತ್ಯಂತ ಸ್ವಾಗತ. ಇದರ ಜೊತೆಗೆ ಕೃಷಿಗೆ ಸಂಬಂಧಿಸಿದ ಹಲವು ಹತ್ತಾರು ಇಲಾಖೆಗಳ ನಡುವೆ ಸಮನ್ವಯತೆ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಕಳೆದ ಸಾಲಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಕೃಷಿ ಅಭಿವೃದ್ಧಿ ಪ್ರಾಧಿಕಾರ’ ರಚನೆ ಸ್ಥಾಪಿಸಲು ಪ್ರಾಸ್ತಾಪಿಸಿದ್ದರು. ಅದೇನೂ ಈಡೇರಿದ ಹಾಗೆ ಕಂಡು ಬರುವುದಿಲ್ಲ. ಹಾಗೆಯೇ ತೋಟದ ಬೆಳೆಗಳು ಇಂಗಾಲಾಮ್ಲ ಹೀರಿ ಅಪಾರ ಪರಿಸರ ರಕ್ಷಣೆ ಮಾಡುವ ಶಕ್ತಿ ಇದ್ದು,‘ಕಾರ್ಬನ್ ಕ್ರೆಡಿಟ್’ ರೂಪದಲ್ಲಿ ಪ್ರತಿಫಲ ಒದಗಿಸುವ ವಿಚಾರವನ್ನು ಕಳೆದ ಬಾರಿ ಪ್ರಾಸ್ತಾಪಿಸಲಾಗಿತ್ತು.
ಲಕ್ಷಾಂತರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ದಿನನಿತ್ಯ ಮೊಟ್ಟೆ ಹಾಗೂ ರಾಗಿಯಂತಹ ಸಿರಿಧಾನ್ಯ ಪದಾರ್ಥಗಳ ಆಹಾರ ನೀಡಲು ನಿರ್ಧರಿಸಿರುವುದು ಅತ್ಯಂತ ಸ್ವಾಗತಾರ್ಹ. ಆದರೆ ಗ್ರಾಹಕರಿಗೂ ಅನ್ನಭಾಗ್ಯದಡಿ 5 ಕೆ.ಜಿ. ರಾಗಿ ಮತ್ತು ಜೋಳದ ವಿತರಣೆ ಬಗ್ಗೆ ಗಮನ ಇನ್ನೂ ಹರಿಸದೇ ಅಕ್ಕಿಯನ್ನೇ ಕೊಡುವುದಾಗಿ ಮತ್ತೆ ಹೇಳಿರುವುದು ಅರ್ಥವಾಗದ ಸಂಗತಿ. ಕಾಂಗ್ರೆಸ್ ಅವಧಿಯಲ್ಲೇ ಬಂದಿರುವ ಕೇಂದ್ರದ ‘ಆಹಾರ ಭದ್ರತೆ ಕಾಯ್ದೆಗೆ’ ಇದು ಮತ್ತಷ್ಟು ಅರ್ಥ ವ್ಯಾಪ್ತಿ ಒದಗಿಸಲಿದೆ. 80 ವರ್ಷಕ್ಕೆ ಮೀರಿದ ನಾಗರಿಕರಿಗೆ ಆಹಾರವನ್ನು ಮನೆಗೆ ತಲುಪಿಸುವ ಅನ್ನಸುವಿಧಾ ವಿನೂತನ ಕಾರ್ಯಕ್ರಮದಡಿಯಂತೂ ಸಿರಿಧಾನ್ಯವನ್ನು ಸೇರಿಸಲೇಬೇಕು.
ಕೇಂದ್ರ ಸರ್ಕಾರ ಈ ಹಿಂದೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಯ ಬಗ್ಗೆ ದೇಶದಾದ್ಯಂತ ರೈತರು ತೀವ್ರ ಆತಂಕ ಹೊಂದಿ ಪ್ರತಿಭಟಿಸಿ ಹಿಂಪಡೆಯುವಂತೆ ಮಾಡಿದ್ದು, ಆ ನಿಟ್ಟಿನಲ್ಲಿ ನಮ್ಮ ಕೃಷಿ ಮಾರುಕಟ್ಟೆ ಮತ್ತು ಭೂಸುಧಾರಣೆ ಕಾಯ್ದೆಗೂ ಕೂಡ ಅಷ್ಟೇ ಮಾರಕ ಬದಲಾವಣೆ ತಂದಿದ್ದು, ಅದನ್ನು ಹಿಂಪಡೆಯುವ ಆಶ್ವಾಸನೆಯನ್ನು ಈ ಹಿಂದೆ ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯನವರೇ ನೀಡಿದ್ದರೂ ಆ ಬಗ್ಗೆ ಪ್ರಸ್ತಾವನೆಯೇ ಇಲ್ಲ. ನಮ್ಮ ಕೃಷಿಯನ್ನು ಅದಾನಿ, ಅಂಬಾನಿ, ಪತಂಜಲಿಗಳಂತ ಕಾರ್ಪೊರೇಟ್‌ಗಳಿಗೆ ಧಾರೆ ಎರೆಯುವ ಹುನ್ನಾರ ಇದು ಎಂದು ರೈತಾಪಿ ವರ್ಗ ಆತಂಕಕ್ಕೆ ಒಳಗಾಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಸ್ವಾಮಿನಾಥನ್ ವರದಿಯ ಬೆಂಬಲ ಬೆಲೆ ಮತ್ತು ಅದಕ್ಕೆ ಕಾನೂನಿನ ರಕ್ಷಣೆ ಬೇಕೆನ್ನುವ ಹಕ್ಕೊತ್ತಾಯ ದೇಶದಾದ್ಯಂತ ಇಂದು ಅತ್ಯಂತ ಪ್ರಬಲವಾಗಿದೆ. ಹಸಿರು ಕ್ರಾಂತಿ ಸಾಧಿಸಿದ ಪಂಜಾಬ್, ಹರಿಯಾಣ ರೈತ ಸಮುದಾಯಗಳು ಬೀದಿಗಿಳಿದು ಇಂದೂ ಹೋರಾಟ ಮಾಡುತ್ತಿವೆ. ಅವರ ಮುಖಂಡ ದಲ್ಲೆವಾಲ ಆಹಾರ ಸಂಪೂರ್ಣ ಕೈ ಬಿಟ್ಟು ಬರಿದೆ ನೀರು ಸೇವನೆಯ ಅಮರಣಾಂತ ಉಪವಾಸ ಸತ್ಯಾಗ್ರಹ ಈಗಾಗಲೇ ನೂರು ದಿನ ದಾಟಿದೆ. ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ಕೊಡುವ ಆಶ್ವಾಸನೆಯನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಎಲ್ಲೆಡೆ ನೀಡಿದ್ದರೂ. ಈ ನಿಟ್ಟಿನ ಜಾಣ ಮೌನ ಸೂಕ್ತ ಅಲ್ಲ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಪಂಚ ಗ್ಯಾರಂಟಿ ಮುಂದುವರಿಸುವ ಗ್ಯಾರಂಟಿ ಕೊಟ್ಟ ಸಿದ್ದರಾಮಯ್ಯ ಬಜೆಟ್
ಅಹಿಂದ ವರ್ಗದ ಓಲೈಕೆ, ಗ್ಯಾರಂಟಿ ಯೋಜನೆ ಇವೆಲ್ಲಾ ಚುನಾವಣಾ ದೃಷ್ಟಿಯಿಂದ ಬೇಕೇ ಬೇಕು. ಆದರೆ ಚುನಾವಣಾ ರಾಜಕೀಯ ದೃಷ್ಟಿಯಿಂದ ಅಷ್ಟೇ ಪ್ರಮುಖವಾಗಿರುವ ರೈತಾಪಿ ವರ್ಗವನ್ನು ನೇರವಾಗಿ ತಲುಪಲು ಮಾಡುವ ಪ್ರಯತ್ನ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ನೀಡಲಿದೆ. ಇದು ದೇಶದ ಆಹಾರ ಭದ್ರತೆಗೂ ಕೂಡ ಸದೃಢತೆ ತರಲಿದೆ. ಬಹು ಸಂಖ್ಯಾತ ರೈತಾಪಿ ವರ್ಗವನ್ನು ನೇರವಾಗಿ ತಲುಪಿ ಅವರಲ್ಲಿ ಭರವಸೆ ಏರ್ಪಡಿಸಿ ರಾಜಕೀಯ ಲಾಭ ಪಡೆಯುವ ಅತ್ಯಂತ ಸೂಕ್ತ ದಾರಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೂ ಪರಿಗಣಿಸದಿರುವುದು ಅರ್ಥವಾಗದ ವಿಚಾರವಾಗಿದೆ.

ಡಾ ಪ್ರಕಾಶ್ ಕಮ್ಮರಡಿ
ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ (ಕೆಎಪಿಸಿ) ಅಧ್ಯಕ್ಷರೂ ಆಗಿದ್ದರು. ಅವರು ಈಗ ಕೃಷಿ ಅರ್ಥಶಾಸ್ತ್ರ, ಸುಸ್ಥಿರ ಮತ್ತು ಸಾವಯವ ಕೃಷಿ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಿಗೆ ಖಾಸಗಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜವಾದಿ ಚಿಂತನೆ ಹಾಗೂ ಚಳವಳಿಯಲ್ಲಿ ದಶಕಗಳಿಂದ ಸಕ್ರಿಯರು.